ಮೈತ್ರಿ VS ಬಿಜೆಪಿ ; 5 ಕ್ಷೇತ್ರದ ಅಖಾಡದಲ್ಲಿ ಯಾರೆಲ್ಲ ಇದ್ದಾರೆ?

By Web Desk  |  First Published Oct 16, 2018, 9:54 PM IST

ಘೋಷಣೆಯಾಗಿದ್ದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನ ಮುಕ್ತಾಯವಾಗಿದೆ. ಬಳ್ಳಾರಿ, ಶಿವಮೊಗ್ಗ ಮತ್ತು ಮಂಡ್ಯ ಲೋಕಸಭಾ ಹಾಗೂ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಅಖಾಡ ಸಿದ್ಧವಾಗಿದೆ. ಹಾಗಾದರೆ ಯಾವೆಲ್ಲ ಘಟಾನುಘಟಿಗಳು ಅಖಾಡಲ್ಲಿದ್ದಾರೆ. ಒಂದು ವಿವರ ಇಲ್ಲಿದೆ.


ಬೆಂಗಳೂರು[ಅ.15] ಸಮರ, ವಾಕ್ಸಮರ, ಸೆಂಟಿಮೆಂಟ್, ಜಾತಿ ಅಸ್ತ್ರ, ಅಪ್ಪನ ಸೇಡು, ಅಕ್ಕನ ಸೇಡು, ಮನೆ ಮಗ, ಮನೆ ಮಗಳು, ಸ್ಥಳೀಯ ಅಡ್ರೆಸ್ ಇಲ್ಲ... ಹೀಗೆ ಸಾಕಷ್ಟು ಬೇಕಿರದ, ಬೇಕಾಗದ ವಿಚಾರಗಳು ಚುನಾವಣಾ ಅಖಾಡದಲ್ಲಿ ಮೊಳಗುತ್ತಿದೆ. ಬಿಜೆಪಿ ಮತ್ತು ಮೈತ್ರಿ ಸರಕಾರದ ನಡುವಿನ ನೇರ ಹಣಾಹಣಿಗೆ ವೇದಿಕೆಯಂತೂ ಸಿದ್ಧವಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಮಕ್ಕಳು ಅಖಾಡದಲ್ಲಿದ್ದಾರೆ. ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಮತ್ತು ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ನಾಲ್ಕು ತಿಂಗಳ ಲೋಕಸಭೆಗಾಗಿ ಸ್ಪರ್ಧೆ ಮಾಡುತ್ತಿದ್ದು ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ. ಇನ್ನೊಂದು ಕಡೆ ಜೆಎಚ್‌ ಪಟೇಲ್ ಪುತ್ರ ಮಹಿಮಾ ಪಟೇಲ್ ಸಹ ಜೆಡಿಯುನಿಂದ ಸವಾಲು ಹಾಕಲಿದ್ದಾರೆ.

Latest Videos

undefined

ಬಳ್ಳಾರಿ ಲೋಕಸಭಾ ಕ್ಷೇತ್ರ: ಇಲ್ಲಿ ಅಭ್ಯರ್ಥಿಗಳು ಹೆಸರಿಗೆ ಮಾತ್ರ ಎಂಬ ಸ್ಥಿತಿ ಇದೆ. ಶ್ರೀರಾಮುಲು ಮತ್ತು ಡಿಕೆ ಶಿವಕುಮಾರ್ ಎಂಬ ಇಬ್ಬರು ನಾಯಕರ ನಡುವಿನ ನೇರ ಹಣಾಹಣಿ ಇಲ್ಲಿದೆ. ಬಿಜೆಪಿಯಿಂದ ರಾಮುಲು ಸಹೋದರಿ, ಬಳ್ಳಾರಿ ಲೋಕಸಭೆಯಿಂದ ಹಿಂದೊಮ್ಮೆ ಆಯ್ಕೆಯಾಗಿದ್ದ ಜೆ.ಶಾಂತಾ ಮತ್ತು ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ನಡುವೆ ಸ್ಪರ್ಧೆ ನಡೆಯಲಿದೆ. ಜೆಡಿಎಸ್ ಬಳ್ಳಾರಿಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲಿದೆ.

ಮಂಡ್ಯ ಲೋಕಸಭಾ ಕ್ಷೇತ್ರ: ಕೊನೆಯ ವಿಧಾನಸಭೆ ಚುನಾವಣೆಯಲ್ಲಿ ಅಷ್ಟೂ ಕ್ಷೇತ್ರಗಳನ್ನು ಬಾಚಿಕೊಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಸರಕಾರದ ಪರವಾಗಿ ಜೆಡಿಎಸ್‌ನ ಎಲ್.ಆರ್.ಶಿವರಾಮೇಗೌಡ ಕಣದಲ್ಲಿದ್ದರೆ ಬಿಜೆಪಿಯಿಂದ ಡಾ. ಸಿದ್ದರಾಮೇಗೌಡ ಕಣದಲ್ಲಿದ್ದಾರೆ. ಇಲ್ಲಿ ಸಹ ನೇರ ಹಣಾಹಣಿ ನಡೆಯಲಿದೆ.

ಜಮಖಂಡಿ: ಸಿದ್ದು ನ್ಯಾಮಗೌಡ ಅವರ ನಿಧನದ ನಂತರ ಚುನಾವಣೆ ನಡೆಯುತ್ತಿದ್ದು ನ್ಯಾಮಗೌಡ ಪುತ್ರ ಆನಂದ್ ನ್ಯಾಮಗೌಡ ಮೈತ್ರಿ ಸರಕಾರದ ಅಭ್ಯರ್ಥಿಯಾಗಿದ್ದರೆ ಬಿಜೆಪಿಯಿಂದ ಶ್ರೀಕಾಂತ್ ಕುಲಕರ್ಣಿ ಜನರ ಮುಂದೆ ಹೋಗುತ್ತಿದ್ದಾರೆ.

ರಾಮುಲು ಕೋಟೆ ಕೆಡವಲು ಸೈನ್ಯದೊಂದಿಗೆ ಡಿ.ಕೆ ಶಿವಕುಮಾರ್ ಬಳ್ಳಾರಿಗೆ ಎಂಟ್ರಿ..!

ರಾಮನಗರ ವಿಧಾನಸಭಾ ಕ್ಷೇತ್ರ: ಸಿಎಂ ಕುಮಾರಸ್ವಾಮಿ ಹೆಂಡತಿ ಅನಿತಾ ಕುಮಾರಸ್ವಾಮಿ ಮೈತ್ರಿ ಸರಕಾರದ ಒಮ್ಮತದ ಅಭ್ಯರ್ಥಿಯಾಗಿದ್ದರೆ ಎದುರಾಳಿ ಬಿಜೆಪಿಯಿಂದ ಚಂದ್ರಶೇಖರ್ ಅಖಾಡದಲ್ಲಿದ್ದಾರೆ. ಕಾಂಗ್ರೆಸ್ ಸ್ಥಳೀಯ ಕಾರ್ಯಕರ್ತರಲ್ಲಿ  ಜೆಡಿಎಸ್ ಪರವಾಗಿ ಇರುವ ಅಸಮಾಧಾನ ಬಿಜೆಪಿಯ ಮತಗಳಿಕೆ ಹೆಚ್ಚಾಗಲು ಕಾರಣವಾಗಬಹುದು ಎಂದು ವಿಶ್ಲೇಷಣೆ ಮಾಡಲಾಗಿದೆ.

ಕೆಲ ಕ್ಷೇತ್ರದ ಜನರಿಗೆ ಕೆಲವೇ ತಿಂಗಳು ಅವಧಿಯಲ್ಲಿ ಮತ್ತೆ ಮತದಾನ ಮಾಡುವ ಅವಕಾಶ ಲಭ್ಯವಾಗಿದೆ. ಮೊದಲಿಗೆ ರಾಜಕೀಯ ಪಕ್ಷಗಳಲ್ಲಿ ಚುನಾವಣೆ ಸಂಬಂಧ ಇದ್ದ ನಿರ್ಲಜ್ಜತನ ಮಾಯವಾಗಿ ಅಖಾಡ ರಂಗೇರುತ್ತಿದೆ. 

click me!