
ಬೆಂಗಳೂರು (ಸೆ.03): ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಕೆಲವೇ ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಪ್ರಮುಖ ರಾಜ್ಯಗಳ ಉಸ್ತುವಾರಿ ಹೊಣೆಯನ್ನು ಕೇಂದ್ರ ಸಚಿವರ ಹೆಗಲಿಗೆ ಏರಿಸಲಾಗಿದೆ. ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಕರ್ನಾಟಕ ರಾಜ್ಯದ ಉಸ್ತುವಾರಿಯಾಗಿ, ಪಿಯೂಷ್ ಗೋಯೆಲ್'ರನ್ನು ಸಹ ಉಸ್ತುವಾರಿಯಾಗಿ ಕಳುಹಿಸಲಾಗಿದೆ. ಈ ಮೂಲಕ ಬಿಜೆಪಿ ಸರ್ಕಾರ ನಡೆಸುವುದಕ್ಕಿಂತಾ ಅಧಿಕಾರ ಹಿಡಿಯುವುದಕ್ಕೇ ಹೆಚ್ಚು ಒತ್ತು ನೀಡಿದಂತಾಗಿದೆ.
2018 ಕ್ಕೆ ಶೈನ್ ಆಗುವುದೇ ಬಿಜೆಪಿ?
ಸದ್ಯದಲ್ಲೇ ಎದುರಾಗಲಿರುವ ವಿಧಾನಸಭಾ ಚುನಾವಣೆಗಳ ಪೈಕಿ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿರುವುದು ಎರಡು ರಾಜ್ಯಗಳನ್ನು. ಅದರಲ್ಲಿ ಮೊದಲನೆಯ ರಾಜ್ಯ ಗುಜರಾತ್ ಆಗಿದ್ದರೆ, ಎರಡನೆಯ ರಾಜ್ಯ ಕರ್ನಾಟಕ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ತವರು ರಾಜ್ಯವಾಗಿರುವ ಕಾರಣಕ್ಕೆ ಗುಜರಾತ್ ಗೆಲ್ಲಬೇಕಾಗಿದ್ದರೆ, ದಕ್ಷಿಣ ಭಾರತದಲ್ಲಿ ಕಮಲ ಪಕ್ಷಕ್ಕೆ ಹೆಬ್ಬಾಗಿಲು ತೆರದಿದ್ದ ಕಾರಣಕ್ಕಾಗಿ ಕರ್ನಾಟಕ ಬಿಜೆಪಿ ಪಾಲಿಗೆ ಪ್ರತಿಷ್ಠೆಯಾಗಿದೆ. ಹೀಗಾಗಿಯೇ ಬಿಜೆಪಿ ಹೈಕಮಾಂಡ್ ಚುನಾವಣಾ ಉಸ್ತುವಾರಿಗಳು ಮತ್ತು ಸಹ-ಉಸ್ತುವಾರಿಗಳ ತಂಡವನ್ನೇ ಕಳುಹಿಸಿದೆ. ಈ ಹಿಂದೆ ಕರ್ನಾಟಕದ ಬಿಜೆಪಿ ಉಸ್ತುವಾರಿಯೂ ಆಗಿದ್ದ ಕೇಂದ್ರ ಸಚಿವ ಅರುಣ್ ಜೇಟ್ಲಿಗೆ ಗುಜರಾತ್ ನ ಚುನಾವಣಾ ಉಸ್ತುವಾರಿ ವಹಿಸಿದ್ದರೆ, ಚತುರ ರಾಜಕಾರಣಿ ಮತ್ತು ಸಿಕ್ಕಾಪಟ್ಟೆ ಆಕ್ಟಿವ್ ಪೊಲಿಟೀಶಿಯನ್ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಕರ್ನಾಟಕಕ್ಕೆ ಕಳುಹಿಸಿಕೊಟ್ಟಿದೆ. ಜೊತೆಯಲ್ಲೇ ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯೆಲ್ ರನ್ನು ಕೂಡಾ ಜಾವಡೇಕರ್ ಜೊತೆಯಲ್ಲಿ ನಿಲ್ಲುವಂತೆ ಸೂಚಿಸಿದೆ.
ರಾಜ್ಯದಲ್ಲಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಮೂರು ದಿನಗಳ ಮಿಂಚಿನ ಸಭೆಗಳನ್ನು ನಡೆಸಿ ಹೋದ ಬಳಿಕ ರಾಜ್ಯ ಬಿಜೆಪಿ ಸಾಗುತ್ತಿರುವ ವೇಗ ಹೆಚ್ಚುತ್ತಿದೆ. ಅದೇ ವೇಗವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಕೇಸರಿ ಹೈಕಮಾಂಡ್ ಪ್ರಕಾಶ್ ಜಾವಡೇಕರ್ ಗೆ 2018 ಕ್ಕೆ ಕರ್ನಾಟಕದಲ್ಲಿ ಕಮಲ ಪ್ರಕಾಶಿಸುವಂತೆ ಮಾಡುವ ಜವಾಬ್ದಾರಿ ವಹಿಸಿಕೊಟ್ಟಿದೆ. ನರೇಂದ್ರ ಮೋದಿ ಸಂಪುಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಚಿವರುಗಳ ಪೈಕಿ ಪ್ರಕಾಶ್ ಜಾವಡೇಕರ್ ಚುರುಕಾದ, ಹೊಸ ಆಲೋಚನೆಯ ಕಾರ್ಯಶೈಲಿಗೆ ಹೆಸರಾದವರು. ಅವರ ಚುರುಕಿನ ವ್ಯಕ್ತಿತ್ವ ಮತ್ತು ಒಂದೇ ವಿಚಾರವನ್ನು ಹಲವು ದೃಷ್ಟಿಕೋನದಿಂದ ಅಳೆಯುವ ಸಾಮರ್ಥ್ಯ ದಿಂದಾಗಿ ಅಮಿತ್ ಷಾ ಕರ್ನಾಟಕದ ಚುನಾವಣೆಯ ನೇತೃತ್ವ ವಹಿಸಲು ಜಾವಡೇಕರ್ ಸೂಕ್ತ ಎಂದು ತೀರ್ಮಾನಿಸಿ ಜವಾಬ್ದಾರಿ ವಹಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿಯಲ್ಲಿ ಚಿರಪರಿಚಿತರಾದವರು ಪ್ರಕಾಶ್ ಜಾವಡೇಕರ್. ಚುನಾವಣಾ ತಂತ್ರಜ್ಞ ಅಂತ ಕೂಡಾ ಹೆಸರುವಾಸಿ. ರಾಜಕೀಯ ರಣ ವ್ಯೂಹ ಹೆಣೆಯುವುದರಲ್ಲಿ ಜಾವಡೇಕರ್ ಸದಾ ಎತ್ತಿದ ಕೈ. ಈಶಾನ್ಯ ರಾಜ್ಯಗಳ ಚುನಾವಣಾ ಉಸ್ತುವಾರಿ ಯಾಗಿ ಜಾವಡೇಕರ್ ಕಾರ್ಯನಿರ್ವಹಣೆ ವರಿಷ್ಠರ ಗಮನ ಸೆಳೆದಿತ್ತು. ಅಷ್ಟೇ ಅಲ್ಲದೇ ಅಸ್ಸಾಂನಲ್ಲಿ ಸರ್ಬಾನಂದ ಸೋನವಾಲ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಹಿಡಿದಿದ್ದರ ಹಿಂದೆ ಜಾವಡೇಕರ್ ಮಾಸ್ಟರ್ ಮೈಂಡ್ ಕೂಡಾ ಕೆಲಸ ಮಾಡಿತ್ತು.
ಇದಲ್ಲದೇ, ಚುನಾವಣೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆಗೆ ನೇರ ಸಂಪರ್ಕದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸದಾ ನಗುಮುಖದಿಂದಲೇ ಎಲ್ಲವನ್ನೂ ಸ್ವೀಕರಿಸುವ ಜಾವಡೇಕರ್ ಎಲ್ಲಾ ಸಮಸ್ಯೆಗಳನ್ನು ನಗುತ್ತಲೇ ಪರಿಹರಿಸುವ ಸಾಮರ್ಥ್ಯ ಕೂಡಾ ಹೊಂದಿದವರು. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಚುನಾವಣಾ ಸಂಬಂಧಿ ನಿರ್ಧಾರಗಳು ಇನ್ನು ಜಾವಡೇಕರ್ ನಿರ್ದೇಶನದಂತೆಯೇ ನಡೆಯಲಿವೆ. ಅಲ್ಲದೇ ಅಮಿತ್ ಶಾ ಸೂಚನೆಗಳು ಕೂಡಾ ಪ್ರಕಾಶ್ ಜಾವಡೇಕರ್ ಮೂಲಕ ಕಾರ್ಯರೂಪಕ್ಕೆ ಬರಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.