ಉಪಚುನಾವಣೆಗೆ ಸದ್ದಿಲ್ಲದೆ ಬಿಜೆಪಿ ಸಿದ್ಧತೆ : 15ರ ಗುರಿ

By Kannadaprabha News  |  First Published Sep 20, 2019, 7:52 AM IST

ರಾಜ್ಯದಲ್ಲಿ ಶೀಘ್ರ ನಡೆಯುವ ಉಪ ಚುನಾವಣೆಗೆ ಬಿಜೆಪಿಯಲ್ಲಿ ಭರ್ಜರಿ ಸಿದ್ಧತೆ ಆರಂಭವಾಗಿದೆ.ಕನಿಷ್ಟ 15 ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಲಾಗಿದೆ. 


ಬೆಂಗಳೂರು [ಸೆ.20]: ಅನರ್ಹ ಶಾಸಕರಿಂದ ತೆರವಾಗಿರುವ 17 ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಸದ್ದಿಲ್ಲದೆ ಸಿದ್ಧತೆ ಆರಂಭವಾಗಿದೆ.

ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ನಡೆದ ನೂತನ ಪ್ರಭಾರಿಗಳು ಹಾಗೂ ಸಹ ಪ್ರಭಾರಿಗಳ ಸಭೆಯಲ್ಲಿ ಉಪಚುನಾವಣೆಗೆ ಸಿದ್ಧತೆ ಕೈಗೊಳ್ಳುವ ಬಗ್ಗೆ ಇತರ ವಿಷಯಗಳ ಜೊತೆ ಪ್ರಸ್ತಾಪವಾಗಿದ್ದು, ಅಭ್ಯರ್ಥಿಗಳು ಯಾರೇ ಆಗಲಿ, ಆ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಬಲಗೊಳಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ.

Latest Videos

undefined

ಅನರ್ಹ ಶಾಸಕರ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಈವರೆಗೆ ಯಾವುದೇ ನಿರ್ಣಯ ಆಗದೇ ಇರುವುದರಿಂದ ಅಷ್ಟರೊಳಗಾಗಿ ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿದಲ್ಲಿ ಆಗ ತರಾತುರಿಯಲ್ಲಿ ಸಿದ್ಧತೆ ಕೈಗೊಳ್ಳಬೇಕಾಗುತ್ತದೆ. ಅದರ ಬದಲು ಈಗಿನಿಂದಲೇ 17 ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷದ ಸಂಘಟನೆ ಬಲಗೊಳಿಸಬೇಕು ಎಂಬ ನಿರ್ಣಯಕ್ಕೆ ಬರಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಅಲ್ಲದೆ, ಅಭ್ಯರ್ಥಿಗಳು ಯಾರಾಗಬೇಕು ಎಂಬುದರ ಬಗ್ಗೆ ಏನೇ ಗೊಂದಲಗಳಿದ್ದರೂ ಅದು ಬಹಿರಂಗಗೊಳ್ಳದಂತೆ ನೋಡಿಕೊಳ್ಳಬೇಕು. ನಮಗೆ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಎಂಬುದಷ್ಟೇ ಮುಖ್ಯವಾಗಬೇಕು ಎಂಬ ನಿಲುವಿಗೂ ಬರಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, 17 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಿದ್ಧತಾ ಸಭೆ ನಡೆಸಲಾಗುವುದು. ಈ 17 ಕ್ಷೇತ್ರಗಳ ಪೈಕಿ ಕನಿಷ್ಠ 15 ಸ್ಥಾನಗಳನ್ನು ಪಕ್ಷ ಗೆಲ್ಲಲಿದೆ ಎಂದು ತಿಳಿಸಿದರು.

ತಿಂಗಳಾಂತ್ಯಕ್ಕೆ ಬೂತ್‌ ಅಧ್ಯಕ್ಷರ ನೇಮಕ:  ಇದೇ ತಿಂಗಳಾಂತ್ಯದೊಳಗಾಗಿ ರಾಜ್ಯದ 58 ಸಾವಿರ ಬೂತ್‌ಗಳ ಅಧ್ಯಕ್ಷರ ನೇಮಕ ಮಾಡಲು ಪ್ರಭಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಬೂತ್‌ ಅಧ್ಯಕ್ಷರ ನೇಮಕದ ನಂತರ ಮಂಡಲ ಅಧ್ಯಕ್ಷರ ನೇಮಕ, ಆಮೇಲೆ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್‌, ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮೊದಲಾದವರು ಪಾಲ್ಗೊಂಡಿದ್ದರು.

click me!