
ಬೆಂಗಳೂರು, [ಆ.20]: ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಕರ್ನಾಟಕ ಬಿಜೆಪಿಗೆ ಹೊಸ ಅಧ್ಯಕ್ಷ: ಹೈಕಮಾಂಡ್ ಅಧಿಕೃತ ಆದೇಶ
ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರಿಂದ ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿಯಮ ಬಿಜೆಪಿಯಲ್ಲಿದೆ. ಈ ಹಿನ್ನೆಯಲ್ಲಿ ಬಿಎಸ್ ವೈ ಬಳಿ ಇದ್ದ ರಾಜ್ಯಾಧ್ಯಕ್ಷ ಸ್ಥಾನವನ್ನು ನಳೀನ್ ಕುಮಾರ್ ಕಟೀಲ್ ಅವರಿಗೆ ನೀಡಿ ಇಂದು [ಮಂಗಳವಾರ] ಹೈಕಮಾಂಡ್ ಆದೇಶ ಹೊರಡಿಸಿದೆ. ಇನ್ನು ನಳೀನ್ ಕುಮಾರ್ ಅವರು ಈ ಮಟ್ಟಕ್ಕೆ ಬೆಳೆದು ಬಂದ ಹಾದಿಯನ್ನು ನೋಡುವುದಾರೆ ಅವರ ಕಿರುಪರಿಚಯ ಈ ಕೆಳಗಿನಂತಿದೆ.
ನಳೀನ್ ಕುಮಾರ್ ಕಿರು ಪರಿಚಯ
ಸಾಮಾನ್ಯ ಕಾರ್ಯಕರ್ತನಿಂದ ಸಂಸದರಾಗಿ ಸತತ ಮೂರು ಸಲ ಆಯ್ಕೆಯಾಗಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಇದೀಗ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಒಲಿದುಬಂದಿದ್ದು ಮುಂಬರುವ ದಿನಗಳಲ್ಲಿ ಪಕ್ಷವನ್ನು ರಾಜ್ಯಮಟ್ಟದಲ್ಲಿ ಇನ್ನಷ್ಟು ಬಲಿಷ್ಠಗೊಳಿಸುವ ಸವಾಲು ಈ ಯುವ ಸಂಸದರ ಹೆಗಲ ಮೇಲಿದೆ.
ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, 7 ಫೆಬ್ರುವರಿ 1966, ಸುಳ್ಯ ತಾಲೂಕಿನ ಕುಂಜಾಡಿ ಗ್ರಾಮದಲ್ಲಿ ಜನಿಸಿದ್ದು, ಸುಳ್ಯ ತಾಲೂಕಿನ ಪೆರುವಾಜೆಯ ಮುಕ್ಕೂರು ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪುತ್ತೂರಿನ ಸೈಂಟ್ ಫಿಲೋಮಿನಾ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾರೆ,
ನಳಿನ್ ಆ ಕಾಲದಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದತ್ತ ಆಕರ್ಷಿತರಾಗಿ ತಮ್ಮ 18ನೇ ವಯಸ್ಸಿನಲ್ಲೇ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿದ್ದರು. ಹೀಗೆ 12 ವರ್ಷಗಳ ಕಾಲ ಆರ್.ಎಸ್.ಎಸ್. ಪ್ರಚಾರಕರಾಗಿ ಕಾರ್ಯನಿರ್ವಹಿಸಿದ್ದರು.
18ನೇ ವಯಸ್ಸಿನಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜತೆ ನಂಟು ಇಟ್ಟುಕೊಂಡಿದ್ದ ನಳೀನ್ ಕುಮಾರ್, ಸುಮಾರು 12 ವರ್ಷಗಳ ಕಾಲ ಆರ್ ಎಸ್ ಎಸ್ ನ ಪೂರ್ಣಕಾಲಿಕ ಪ್ರಚಾರಕ ಹುದ್ದೆ ನಿಭಾಹಿಸಿದ್ದರು. ಬಳಿಕ ಕೆಲ ಕಾಲ ಕಾಂಟ್ರಾಕ್ಟರ್ ವೃತ್ತಿ ನಡೆಸುತ್ತಿದ್ದ ನಳಿನ್ ಬಿಜೆಪಿ ಸೇರ್ಪಡೆಯಾಗಿದ್ದರು.
2 ಮೇ 2001ರಲ್ಲಿ ಶ್ರೀದೇವಿ ಶೆಟ್ಟಿ ಎನ್ನುವರನ್ನು ಮದುವೆಯಾಗಿದ್ದು, ಈಗ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನಂತರ 2004ರಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡು ಅಲ್ಲಿಂದ ತಮ್ಮನ್ನು ತಾವು ಸಕ್ರೀಯ ರಾಜಕೀಯದಲ್ಲಿ ತೊಡಗಿಸಿಕೊಂಡರು.
2009ರಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೂಚನೆ ಮೇರೆ ದಕ್ಷಿಣ ಕನ್ನಡ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ಮೊದಲ ಸ್ಪರ್ಧೆಯಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ವಿರುದ್ದ ಗೆಲುವು ಸಾಧಿಸಿ ಪಾರ್ಲಿಮೆಂಟ್ ಪ್ರವೇಶಿಸಿದ್ದರು.
2014ರಲ್ಲಿ ಮತ್ತೆ ಜನಾರ್ದನ ಪೂಜಾರಿ ವಿರುದ್ದ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 2ನೇ ಬಾರಿಗೆ ಸಂಸತ್ ಪ್ರವೇಶ ಮಾಡಿದ್ದರು. ಇನ್ನು 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ಧ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದರು.
ಕೇಂದ್ರ ಸರಕಾರದ ಕೃಷಿ ಸ್ಥಾಯೀ ಸಮಿತಿ, ತೆಂಗು ಅಭಿವೃದ್ಧಿ ಮಂಡಳಿ, ನೆಹರೂ ಯುವ ಕೇಂದ್ರ, ಯೋಜನಾ ಸಮಿತಿ, ರಬ್ಬರ್ ಮಂಡಳಿ, ಬಂದರು ಮಂಡಳಿ ಸಹಿತ ವಿವಿಧ ಸಮಿತಿಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.