
ಬೆಂಗಳೂರು(ಜೂನ್ 11): ಶಾಶ್ವತ ನೀರಾವರಿ ಯೋಜನೆ ಆಗ್ರಹ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಬಂದ್'ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸೋಮವಾರ ಹಿಂಸಾಚಾರಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳ ಭಾಗವಾಗಿ ಜಿಲ್ಲಾಧಿಕಾರಿ ತ್ರಿಲೋಕಚಂದ್ರ ಅವರು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಬಳ್ಳಾರಿ, ತುಮಕೂರು, ಹಾಸನ ಮೊದಲಾದ ಜಿಲ್ಲೆಗಳಲ್ಲಿ ರಜೆ ಇಲ್ಲವೆಂದು ಈಗಾಗಲೇ ಘೋಷಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಪರಿಸ್ಥಿತಿ ಅವಲೋಕಿಸಿ ನಾಳೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ, ಎಲ್ಲಾ ಜಿಲ್ಲೆಗಳಲ್ಲಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗುವ ಸಾಧ್ಯತೆ ಇಲ್ಲ.
ಇದೇ ವೇಳೆ, ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಪೋಷ್ಟ್ ಗ್ರಾಜುಯೇಶನ್'ನ 4ನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿವೆ ಸೋಮವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ವಿವಿ ಮೌಲ್ಯಮಾಪನ ಕುಲಸಚಿವ ಶಂಕರ್ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ಬಂದ್ ಯಾಕೆ?
* ರಾಜ್ಯದ ಜನರಿಗೆ, ರೈತರಿಗೆ ಅನ್ಯಾಯವಾಗುತ್ತಿರುವುದಕ್ಕೆ ಪ್ರತಿಭಟನೆ
* ನೆಲ-ಜಲ, ನಾಡು-ನುಡಿ ರಕ್ಷಣೆಗೆ ಒತ್ತಾಯ
* ಬಯಲು ಸೀಮೆಗೆ ಶಾಶ್ವತ ನೀರಾವರಿ,
* ಮಹದಾಯಿ, ಕಳಸಾ ಬಂಡೂರಿಗೆ ನ್ಯಾಯ ಸಿಗಬೇಕು
* ಬೆಳಗಾವಿಯಲ್ಲಿ MES ಪುಂಡರ ಗಡೀಪಾರು,
* ಮೇಕೆದಾಟು, ರೈತರ ಸಾಲ ಮನ್ನಾ ಆಗಬೇಕು
ಇವೇ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಬಂದ್'ಗೆ ಕರೆ ನೀಡಲಾಗಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೆಲ ಕನ್ನಡ ಸಂಘಟನೆಗಳು ಈ ಬಂದ್'ಗೆ ಬೆಂಬಲ ನೀಡಿವೆ. ಸೋಮವಾರ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಈ ಸಂಘಟನೆಗಳು ನಿರ್ಧರಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.