ಮತ್ತೊಮ್ಮೆ ಸಾಲ ಮನ್ನಾ ಮಾಡ್ತಾರಾ ಸಿಎಂ ..?

By Kannadaprabha NewsFirst Published Jul 12, 2018, 8:48 AM IST
Highlights

ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದ ಕೊನೆಯ ದಿನವಾದ ಗುರುವಾರ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಬೆಂಗಳೂರು :  ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದ ಕೊನೆಯ ದಿನವಾದ ಗುರುವಾರ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ರೈತರ ಸಾಲಮನ್ನಾಕ್ಕಾಗಿ ಅಗತ್ಯ ಆರ್ಥಿಕ ಸಂಪನ್ಮೂಲ ಕ್ರೋಢೀಕ ರಿಸುವ ಸಲುವಾಗಿ ಜನಸಾಮಾನ್ಯರ ಮೇಲೆ ಹಾಕಿದ್ದ ಹೊರೆ ಇಳಿಸುವ
ಬಗ್ಗೆ ಪ್ರತಿಪಕ್ಷ ಬಿಜೆಪಿಯಿಂದ ಅಷ್ಟೇ ಅಲ್ಲದೆ, ಖುದ್ದು ಆಡಳಿತಾ ರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರಿಂದ ವಿರೋಧ ವ್ಯಕ್ತವಾಗಿರುವು ದರಿಂದ ಮುಖ್ಯಮಂತ್ರಿಗಳು ತಮ್ಮ ನಿರ್ಧಾರ ಹಿಂಪಡೆಯುವ ನಿರೀಕ್ಷೆಯಿದೆ. 

ಸಾಲಮನ್ನಾ ಪರಿಷ್ಕರಿಸಿ ಸುಸ್ತಿ ಸಾಲದ ಜೊತೆಗೆ ಚಾಲ್ತಿ ಸಾಲ ಮನ್ನಾ, ಅನ್ನಭಾಗ್ಯ ಯೋಜನೆ ಅಡಿ ಅಕ್ಕಿ ವಿತರಣೆಯ ಪ್ರಮಾಣ ಏಳು ಕೆ.ಜಿ.ಯಿಂದ ಐದು ಕೆ.ಜಿ.ಗೆ ಇಳಿಸುವ ನಿರ್ಧಾರ ಕೈಬಿಡುವುದು, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಸಂಬಂಧ ಮುಖ್ಯಮಂತ್ರಿಗಳು ಘೋಷಣೆ ಮಾಡುವ ಸಾಧ್ಯತೆಯಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಹೆಚ್ಚಳವನ್ನೂ ತಗ್ಗಿಸುವ ಬಗ್ಗೆ
ಪರಿಶೀಲನೆ ನಡೆದಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. 

ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಪ್ರತಿಪಕ್ಷ ಬಿಜೆಪಿ ಹಾಗೂ ರೈತರು ನಡೆಸಿದ ಹೋರಾಟದಿಂದ ತತ್ತರಿಸಿರುವ ಕುಮಾರಸ್ವಾಮಿ ಅವರಿಗೆ ಇದೀಗ ಸರ್ಕಾರದ ಸಮನ್ವಯ ಸಮಿತಿ  ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ ಅಕ್ಕಿ ಪ್ರಮಾಣ ಕಡಿಮೆ ಮಾಡುವ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಹೆಚ್ಚಿಸುವ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿರುವುದು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ.  ಈ ಎಲ್ಲ ಒತ್ತಡಗಳಿಗೆ ಮಣಿಯುವಂತೆ ಕಂಡು ಬರುತ್ತಿರುವ ಮುಖ್ಯಮಂತ್ರಿಗಳು ಈಗಾಗಲೇ
ಕಳೆದ ಎರಡು ದಿನಗಳಿಂದ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಸತತ ಸಮಾಲೋಚನೆ ನಡೆಸಿದ್ದಾರೆ.

ಬಜೆಟ್‌ನಲ್ಲಿ ಕೈಗೊಂಡಿರುವ ನಿರ್ಧಾರದ ಪೈಕಿ ಯಾವುದನ್ನು ವಾಪಸ್ ಪಡೆದರೆ ಏನಾಗುತ್ತದೆ? ಎಷ್ಟು ಕೊರತೆ ಎದುರಾಗುತ್ತದೆ? ಅದನ್ನು ಭರಿಸಲು ಇರುವ ಪರ್ಯಾಯ ಮಾರ್ಗೋಪಾಯಗಳು ಏನು ಎಂಬುದನ್ನು ಚರ್ಚಿಸಿದ್ದಾರೆ. ಆದರೆ, ಹಣ  ಕಾಸು ಇಲಾಖೆ ಅಧಿಕಾರಿಗಳು ಇದಕ್ಕೆ ಸುಲಭವಾಗಿ ಒಪ್ಪಿಲ್ಲ. ರೈತರ ಸಾಲಮನ್ನಾಕ್ಕೆ ಬೇಕಾದ ಸಂಪನ್ಮೂಲವನ್ನು ಕ್ರೋಢಿಕರಿಸಲು ಈಗ
ಬಜೆಟ್‌ನಲ್ಲಿ ಕೈಗೊಂಡಿರುವ ಕ್ರಮಗಳು ಕಡಮೆಯೇ. ಹಾಗಿರುವಾಗ ಅವುಗಳನ್ನು ಮತ್ತೆ ವಾಪಸ್ ಪಡೆಯುವುದು ಅಥವಾ ಪರಿಷ್ಕರಿ ಸುವುದರಿಂದ ಸಂಪನ್ಮೂಲ ಸಂಗ್ರಹಣೆಗೆ ತೊಂದರೆ ಆಗಬಹುದು ಎಂಬ ಎಚ್ಚರಿಕೆಯ ಮಾತನ್ನು ಹೇಳಿದ್ದಾರೆ.

ಆದರೂ ಸ್ವಪಕ್ಷೀಯರೂ ಸೇರಿದಂತೆ ಸಮ್ಮಿಶ್ರ ಸರ್ಕಾರದ ಹಲವು ಮುಖಂಡರ ಒತ್ತಾಯದ ಹಿನ್ನೆಲೆ ಪರಿಷ್ಕರಿಸುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಬಜೆಟ್‌ನಲ್ಲಿ ಸುಸ್ತಿದಾರರ ಬೆಳೆ ಸಾಲ ಮಾತ್ರ ಮನ್ನಾ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್ ಗಳಲ್ಲಿ ಸುಸ್ತಿದಾರರ ರೈತರ ಸಂಖ್ಯೆ ಕಡಿಮೆ
ಇದ್ದು, ಬ್ಯಾಂಕ್‌ಗಳಲ್ಲಿ ಬಹುಪಾಲು ರೈತರು ಚಾಲ್ತಿ ಸಾಲಗಾರರಾಗಿದ್ದಾರೆ. ಹಾಗಾಗಿ ಸಾಲ ಮನ್ನಾ ಯೋಜನೆಯು ರೈತರಿಗೆ ಅನುಕೂಲವಾಗುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.
ಸಹಕಾರಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ರೈತರು ಪಡೆದಿರುವ ಸಾಲಗಾರರಾಗಿದ್ದಾರೆ. 

ಆದರೆ ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಸಿರಿವಂತ ರೈತರು ಸಾಲ ಪಡೆದಿದ್ದಾರೆ. ಈಗ ಸಾಲ ಮನ್ನಾ ಯೋಜನೆ ಫಲಾನುಭವಿಗಳು ರಾಷ್ಟ್ರೀಯ ಬ್ಯಾಂಕ್‌ನ ಸುಸ್ತಿದಾರರರಾಗಿರುವ ಶ್ರೀಮಂತರು ಎಂಬ ಟೀಕೆ ಕೇಳಿ ಬಂದಿತ್ತು. ಅದೇ ರೀತಿ ಅನ್ನಭಾಗ್ಯದ ಅಡಿಯಲ್ಲಿ ಅಕ್ಕಿ ವಿತರಿಸುವ ಪ್ರಮಾಣ ಇಳಿಸಿರುವುದರಿಂದ ಬಡವರಿಗೆ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಕಳೆದ ಬಜೆಟ್‌ನಲ್ಲಿ ಘೋಷಿಸಿರುವುದರಿಂದ ಈಗ ಕೈಬಿಟ್ಟರೆ ತಪ್ಪಾಗುತ್ತದೆ ಎಂಬ ಒತ್ತಾಸೆ ಮಿತ್ರಪಕ್ಷ ಕಾಂಗ್ರೆಸ್ ನಾಯಕರಿಂದ ಬಂದಿದೆ. ಜತೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಹೆಚ್ಚಳ ಮಾಡಿರುವುದರಿಂದ ಜನಸಾಮಾನ್ಯರಿಗೆ  ತೊಂದರೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಗುರುವಾರ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಹಲವು ಘೋಷಣೆಗಳನ್ನು ಮಾಡುವ ಮೂಲಕ ತಮ್ಮ ನಿರ್ಧಾರಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

click me!