ಒಪ್ಪಂದದಂತೆಯೇ ನಡೆಯುತ್ತೇವೆ : ಡಿ.ಕೆ ಶಿವಕುಮಾರ್

First Published Jun 28, 2018, 10:54 AM IST
Highlights

ಮೈತ್ರಿಕೂಟದ ಸರ್ಕಾರ ಐದು ವರ್ಷಗಳ ಅವಧಿಗೆ ಅಧಿಕಾರ ನಡೆಸಬೇಕು ಎಂದು ಕಾಂಗ್ರೆಸ್‌ ಎಲ್ಲಾ ಶಾಸಕರು ಸಹಿ ಹಾಕಿ ಸಹಕಾರ ನೀಡಿದ್ದೇವೆ. ಎಐಸಿಸಿ ವರಿಷ್ಠ ರಾಹುಲ್‌ ಗಾಂಧಿ ಅವರ ಸೂಚನೆ ಮೇರೆಗೆ ಕಾಂಗ್ರೆಸ್‌ ಶಾಸಕರು ನಡೆದುಕೊಂಡಿದ್ದಾರೆ. ಇದರ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. 

ಬೆಂಗಳೂರು :  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಕಾಲಾವಧಿ ಬಗ್ಗೆ ಲೋಕಾಭಿರಾಮವಾಗಿ ಮಾತ ನಾಡಿರುವುದನ್ನು ಯಾರೋ ಕಿಡಿಗೇಡಿಗಳು ವಿಡಿಯೋ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಇದು ಲೋಕಾಭಿರಾಮವಾಗಿ ಆಡಿದ ಮಾತೇ ಹೊರತು ಅಧಿಕೃತ ಮಾತಲ್ಲ. ಇಂತಹ ಹೇಳಿಕೆಯಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಅಲ್ಲದೆ, ಮೈತ್ರಿಕೂಟದ ಸರ್ಕಾರ ಐದು ವರ್ಷಗಳ ಅವಧಿಗೆ ಅಧಿಕಾರ ನಡೆಸಬೇಕು ಎಂದು ಕಾಂಗ್ರೆಸ್‌ ಎಲ್ಲಾ ಶಾಸಕರು ಸಹಿ ಹಾಕಿ ಸಹಕಾರ ನೀಡಿದ್ದೇವೆ. ಎಐಸಿಸಿ ವರಿಷ್ಠ ರಾಹುಲ್‌ ಗಾಂಧಿ ಅವರ ಸೂಚನೆ ಮೇರೆಗೆ ಕಾಂಗ್ರೆಸ್‌ ಶಾಸಕರು ನಡೆದುಕೊಂಡಿದ್ದಾರೆ. ಹೀಗಿರುವಾಗ ಯಾರೂ ಸರ್ಕಾರದ ಬಾಳಿಕೆ ಬಗ್ಗೆ ಗೊಂದಲ ಮೂಡಿಸುವುದು ಬೇಡ. ನಾವೆಲ್ಲ ಒಟ್ಟಾಗಿ ಸರ್ಕಾರ ನಡೆಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರ ಸಂಸತ್‌ ಚುನಾವಣೆವರೆಗೆ ಇರುತ್ತದೆ, ಆಮೇಲೆ ಏನೇನು ಬೆಳವಣಿಗೆ ಆಗುತ್ತದೋ ಎಂದು ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ, ಅವರು ಲೋಕಾಭಿರಾಮವಾಗಿ ಮಾತನಾಡಿರುವುದನ್ನು ಯಾರೋ ಕಿಡಿಗೇಡಿಗಳು ವಿಡಿಯೋ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಇದು ಒಳ್ಳೆಯದಲ್ಲ, ಅವರ ಹೇಳಿಕೆ ಅಧಿಕೃತವೂ ಅಲ್ಲ. ಹಾಗಾಗಿ ಅವರ ಹೇಳಿಕೆಯಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮವೂ ಬೀರುವುದಿಲ್ಲ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದ ವಿಚಾರದಲ್ಲಿ ಹಿಂದೆ ಅಶೋಕಾ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಮಾಡಿಕೊಂಡಿರುವ ಒಪ್ಪಂದವೇ ಅಧಿಕೃತ. ಈ ಒಪ್ಪಂದದಂತೆ ಸರ್ಕಾರ ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ ಎಂದು ಹೇಳಿದರು.

ಚಲುವರಾಯಸ್ವಾಮಿ ಹೇಳಿಕೆ ಸಹಿಸಲ್ಲ:  ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಬೆಂಗಳೂರಿಗೆ ಮಾತ್ರ ಸೀಮಿತ ಮಂಡ್ಯಕ್ಕಲ್ಲ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದು ಸರಿಯಲ್ಲ. ಚುನಾವಣಾ ಹೊಂದಾಣಿಕೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಚಲುವರಾಯಸ್ವಾಮಿ ಆಗಲಿ, ಡಿ.ಕೆ. ಶಿವಕುಮಾರ್‌ ಆಗಲಿ ಪಕ್ಷದ ಮುಂದೆ ಎಲ್ಲರೂ ಒಂದೇ. ಯಾವುದೇ ನಾಯಕರು ಪಕ್ಷದ ವರ್ಚಸ್ಸಿಗೆ ತೊಂದರೆಯಾಗುವಂತಹ ಹೇಳಿಕೆಗಳನ್ನು ನೀಡುವುದನ್ನು ಕಾಂಗ್ರೆಸ್‌ ಸಹಿಸುವುದಿಲ್ಲ. ಇನ್ಮುಂದೆ ಯಾರೂ ಕೂಡ ಪಕ್ಷದ ಬಗ್ಗೆಯಾಗಲಿ, ಮೈತ್ರಿ ಬಗ್ಗೆಯಾಗಲಿ ಅನಗತ್ಯವಾಗಿ ಹೇಳಿಕೆಗಳನ್ನು ನೀಡಬಾರದು ಎಂದರು.

ಬಜೆಟ್‌  ಡಿಕೆಶಿ ಗೈರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್‌ ಮಂಡಿಸುವ ದಿನ ತಾವು ಸದನದಲ್ಲಿ ಭಾಗವಹಿಸುತ್ತಿಲ್ಲ ಎಂದಿದ್ದೀರಲ್ಲಾ’ಎಂಬ ಪ್ರಶ್ನೆಗೆ, ಪ್ರಮುಖ ಕಾರ್ಯಕ್ರಮ ನಿಮಿತ್ತ ಬಜೆಟ್‌ ಮಂಡನೆ ವೇಳೆ ಸದನದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ತಪ್ಪು ಅರ್ಥ ಕಲ್ಪಿಸುವುದು ಬೇಡ. ಆದರೆ, ಪ್ರಯಾಣಕ್ಕೆ ವಿಮಾನ ಬಳಸಿಯಾದರೂ ಕೆಲ ಗಂಟೆಯಾದರೂ ಬಜೆಟ್‌ ಮಂಡನೆ ವೇಳೆ ಇರಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದರು.

click me!