"ಇಲ್ಲಿ ಇರೋರೆಲ್ಲರ ತಲೆ ಒಳಗೂ ಒಂದೊಂದು ಕಥೆ ಇದೆ" ಹಾಗಂತ ಅಬಚೂರಿನ ಪೋಸ್ಟ್ ಆಫೀಸಿನಿಂದ ಪತ್ರವೊಂದು ಬಂದಿದೆ. ಪತ್ರ ಡಬ್ಬಿಗೆ ಹಾಕಿ ಕಾಡಿನೊಳಗೆ ಕಣ್ಮರೆಯಾದವರು ನವ್ಯ ಸಾಹಿತ್ಯದ ಪ್ರಮುಖ ಲೇಖಕರಲ್ಲೊಬ್ಬರಾದ ಪೂರ್ಣಚಂದ್ರ ತೇಜಸ್ವಿ. ತಲೆಯೊಳಗೆ ಕತೆ ಇದ್ದ ಮಾತ್ರಕ್ಕೆ ಪ್ರಯೋಜನವಿಲ್ಲ. ಅದನ್ನು ಅಕ್ಷರಕ್ಕೆ ತನ್ನಿ ಎಂದು ಪುನಃ ನೆನಪಿಸುವ ಕಥಾ ಕಮ್ಮಟವೊಂದಕ್ಕೆ ಚಾರ್ಮಾಡಿ ಘಾಟ್ ಅಣಿಯಾಗಿದೆ. ಇಂಥದೊಂದು ವಿಶಿಷ್ಟ ಕಾರ್ಯಕ್ರಮಕ್ಕೆ ಅಲ್ಲಿನ ಜುಳುಜುಳು ನೀರು, ಹಸುರು ವನರಾಶಿಯೇ ಸಾಕ್ಷಿ. ಜತೆಗೆ, ತೇಜಸ್ವಿ ನೆನಪು, ಘಾಟಿಯ ನೆತ್ತಿಯ ಮೇಲೆ ಕಥೆ ಹೆಣೆಯುವ ತಂತ್ರ, ಮಂತ್ರಾಲೋಚನೆ. ಇದಿಷ್ಟೇ ಅಲ್ಲ, ಒಂದು ಅರ್ಥಪೂರ್ಣ ಭಾನುವಾರಕ್ಕೆ ಹಾತೊರೆಯುವ ಮನ..
ಮೂಡಿಗೆರೆ(ಅ.15) : ಕಥೆಗಾರರ ತಲೆಯಲ್ಲಿ ಹೊಸ ಆಲೋಚನೆಗಳ, ಹೊಸ ಕಥೆಗಳ ಬೀಜ ಬಿತ್ತುವ ಕನ್ನಡದ ಕಮ್ಮಟವೊಂದು ನಿಸರ್ಗದ ಮಡಿಲಿನಲ್ಲಿ ಅನಾವರಣಗೊಳ್ಳುತ್ತಿದೆ. ಎಲ್ಲ ಸಾಹಿತ್ಯ ಕಾರ್ಯಕ್ರಮಗಳಂತೆ ಯಾವುದೋ ಸಭಾ ಭವನದಲ್ಲಿಯೋ, ರಂಗಮಂದಿರದಲ್ಲಿಯೋ ಇದು ನಡೆಯುತ್ತಿಲ್ಲ. ಬದಲಾಗಿ ನಿಸರ್ಗವೇ ಕರುಣಿಸಿದ ಹವಾನಿಯಂತ್ರಿತ ಸುಂದರ ತಾಣದಲ್ಲಿ ಮೈದಾಳುತ್ತಿದೆ. ಹೌದು...ಚಾರ್ಮಾಡಿ ಘಾಟಿಯ ನೆತ್ತಿಯ ಮೇಲಿರುವ ಅಲೇಖಾನ್ ಹೊರಟ್ಟಿಯಲ್ಲಿ ಬರುವ ಭಾನುವಾರ ಒಂದು ದಿನವಿಡೀ ಕಥಾ ದಸರಾ!
ಕನ್ನಡ ಸಾಹಿತ್ಯ ಪರಿಷತ್ತು, ಮೂಡಿಗೆರೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಣಕಲ್ ಹೋಬಳಿ ಆಶ್ರಯದಲ್ಲಿ 'ಕಥಾ ಕಮ್ಮಟ-2018'ನ್ನು ಅಕ್ಟೋಬರ್ 21 ಭಾನುವಾರ ಆಯೋಜನೆ ಮಾಡಲಾಗಿದೆ. ಅದೇ ದಿನ ಬೆಳಗ್ಗೆ 9.30ಕ್ಕೆ ಕಮ್ಮಟವನ್ನು "ನಾನು ಅವನಲ್ಲ ಅವಳು" ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಉದ್ಘಾಟಿಸಲಿದ್ದಾರೆ. ಕಮ್ಮಟದಲ್ಲಿ ಮತ್ತೆಲ್ಲ ಯಾರಿದ್ದೀರಿ?
ಚಾರ್ಮಾಡಿ ಕಥಾ ಕಮ್ಮಟಾಸಕ್ತರ ಹೆಸರು ನೂರು ತರಹ!
ಮೂಡಿಗೆರೆ ತಾಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್, ಬಣಕಲ್ ಹೋಬಳಿ ಕಸಾಪ ಅಧ್ಯಕ್ಷ ಮೋಹನ್ ಕುಮಾರ್ ಎಸ್ ಶೆಟ್ಟಿ, ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ಕನ್ನಡಪ್ರಭ ಪುರವಣಿ ಸಂಪಾದಕ, ಕಥೆಗಾರ ಜೋಗಿ, ಸುವರ್ಣ ನ್ಯೂಸ್.ಕಾಂ ಪ್ರಧಾನ ಸಂಪಾದಕ ಎಸ್.ಕೆ.ಶಾಮಸುಂದರ್, ರಿಪ್ಪನ್ ಪೇಟೆ ಪದವಿಪೂರ್ವ ಕಾಲೇಜು ಕನ್ನಡ ಉಪನ್ಯಾಸಕ ಡಾ.ಶ್ರೀಪತಿ ಹಳಗುಂದ, ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅನಿತಾ ಹೆಗ್ಗೋಡು, ಬಾಳೂರು ಹೋಬಳಿ ಕಸಾಪ ಅಧ್ಯಕ್ಷ ಎಂ.ವಿ.ಚೆನ್ನಕೇಶವ ಹಿರಿಯರಾದ ಎಚ್. ಕೆ.ಮಂಚೇಗೌಡ ಪಾಲ್ಗೊಳ್ಳಲಿದ್ದಾರೆ.
ವಿಭಿನ್ನ-ವಿಶಿಷ್ಟ ಕಾರ್ಯಾಗಾರಗಳು:
ಕಥೆಯ ಸೃಷ್ಟಿ: ಬೆಳಗ್ಗೆ 10 ರಿಂದ 10.45 ನಡೆಸಿಕೊಡುವವರು ಡಾ. ಶ್ರೀಪತಿ ಹಳಗುಂದ. ನಿರ್ದಿಷ್ಟ ಕಥೆಗಳ ಬಗ್ಗೆ ಚರ್ಚೆ: ಬೆಳಗ್ಗೆ 10.45ರಿಂದ 11.30. ವಿವರಣೆ ಡಾ. ಅನಿತಾ ಹೆಗ್ಗೋಡು.
ಕಥಾ ರಚನಾ ತಂತ್ರದ ಬಗ್ಗೆ ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ 12 ರಿಂದ 1 ಗಂಟೆ ತನಕ ಮಾತನಾಡಲಿದ್ದಾರೆ. ಈ ಒಂದು ಗಂಟೆ ಕಥಾ ಕಮ್ಮಟದ ಕಣ್ಮಣಿ, ಬೆಂಡೋಲೆ ಎಂದರೆ ತಪ್ಪಾಗಲಾರದು. ಇದಾದ ಮೇಲೆ ಮುಕ್ತ ಸಂವಾದ, ಕಥೆ ಬರೆಯುವ ಸಮಯ, ಆಯ್ದ ಕಥೆಗಳ ಓದು-ಚರ್ಚೆ ಕೂಡ ಇರ್ತದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್:
ಮಲೆನಾಡ ಕೋಗಿಲೆ ಬಕ್ಕಿ ಮಂಜು ಮತ್ತು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ. ನಿಸರ್ಗದ ಮಡಿಲಿನಲ್ಲಿ ನಡೆಯುವ ವಿಶಿಷ್ಟ ಕಾರ್ಯಕ್ರಮದಲ್ಲಿ ಕನ್ನಡದ ಕಂಪು ಹರಿಯುವುದು ಖಂಡಿತ. ಚಿಕ್ಕಮಗಳೂರು ಎಸ್ ಪಿ ಕೆ.ಅಣ್ಣಾಮಲೈ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಎಚ್.ಕೆ.ಕುಮಾರಸ್ವಾಮಿ ಸಹ ಸಾಹಿತ್ಯದ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ರಾಜಕೀಯ ಮತ್ತು ಲಾ ಅಂಡ್ ಆರ್ಡರ್ ಜಂಜಡಗಳಿಂದ ಕೊಂಚ ಬಿಡುವು ಪಡೆಯುವ ಲಕ್ಕಿ ಛಾನ್ಸ್ ಇವರಿಗೆಲ್ಲ !