ವೆರಿಫಿಕೇಶನ್ ಮಾಡದೆ 100 ಕೋಟಿ ಜನರಿಗೆ ಕಾರ್ಡ್!

Published : Apr 11, 2017, 09:21 PM ISTUpdated : Apr 11, 2018, 12:49 PM IST
ವೆರಿಫಿಕೇಶನ್ ಮಾಡದೆ 100 ಕೋಟಿ ಜನರಿಗೆ ಕಾರ್ಡ್!

ಸಾರಾಂಶ

ವ್ಯಕ್ತಿಯ ವಿವರಗಳಿಗೂ, ಆತ/ಆಕೆ ನೀಡಿದ ಬಯೋಮೆಟ್ರಿಕ್‌ ದತ್ತಾಂಶಕ್ಕೂ ಹೊಂದಾಣಿಕೆಯಾಗುತ್ತದೆಯೇ, ಇಲ್ಲವೇ ಎಂಬುದನ್ನು ಕೂಡ ಪರಿಶೀಲಿಸಿಲ್ಲ. ಹೀಗೆ ದೃಢಪಡಿಸಿಕೊಳ್ಳದೇ ನೋಂದಣಿ ಮಾಡಿಕೊಂಡಿರುವ ಪ್ರಮಾಣ ಬರೋಬ್ಬರಿ ಒಂದು ನೂರು ಕೋಟಿ! ಈ 100 ಕೋಟಿ ದೃಢಪಡಿಸದ ಆಧಾರ್‌ ದತ್ತಾಂಶ 2016ರ ಆಧಾರ್‌ ಕಾಯ್ದೆ ಜಾರಿಗೆ ಮುನ್ನವೇ ಸಂಗ್ರಹಿಸಿದ್ದು, ಹಾಗಾಗಿ ಅದು ಕಾಯ್ದೆಯ 303ನೇ ವಿಧಿಯಡಿ ಬರುವುದಿಲ್ಲ. ಹೀಗೆ ದೃಢಪಡಿಸಿಕೊಳ್ಳದ ದತ್ತಾಂಶ ಆಧರಿಸಿ ನೂರು ಕೋಟಿ ಜನರಿಗೆ ಆಧಾರ್‌ ಸಂಖ್ಯೆ ನೀಡಿರುವುದರಿಂದ ಲಕ್ಷಾಂತರ ಕಾರ್ಡುಗಳು ನಕಲಿಯಾಗಿವೆ.

ಆಧಾರ್‌ ಯೋಜನೆಯ ಆರಂಭದಿಂದ ಈವರೆಗೆ ದೇಶದಲ್ಲಿ ಸುಮಾರು 110 ಕೋಟಿಗಿಂತ ಹೆಚ್ಚು ಜನರ ದತ್ತಾಂಶ ಕಲೆಹಾಕಿ ಕಾರ್ಡ್‌ ನೀಡಲಾಗಿದೆ. ಆದರೆ, 2010ರಿಂದ ಆರಂಭವಾಗಿ 2016ರವರೆಗೆ ವ್ಯಕ್ತಿಗಳ ಗುರುತಿನ ಬಗ್ಗೆ ಯಾವುದೇ ಮಾಹಿತಿಯನ್ನು ಖಚಿತಪಡಿಸಿಕೊಳ್ಳದೆ ಆಧಾರ್‌ ಸಂಖ್ಯೆ ನೀಡಲಾಗಿದೆ.

ವ್ಯಕ್ತಿಯ ವಿವರಗಳಿಗೂ, ಆತ/ಆಕೆ ನೀಡಿದ ಬಯೋಮೆಟ್ರಿಕ್‌ ದತ್ತಾಂಶಕ್ಕೂ ಹೊಂದಾಣಿಕೆಯಾಗುತ್ತದೆಯೇ, ಇಲ್ಲವೇ ಎಂಬುದನ್ನು ಕೂಡ ಪರಿಶೀಲಿಸಿಲ್ಲ. ಹೀಗೆ ದೃಢಪಡಿಸಿಕೊಳ್ಳದೇ ನೋಂದಣಿ ಮಾಡಿಕೊಂಡಿರುವ ಪ್ರಮಾಣ ಬರೋಬ್ಬರಿ ಒಂದು ನೂರು ಕೋಟಿ! ಈ 100 ಕೋಟಿ ದೃಢಪಡಿಸದ ಆಧಾರ್‌ ದತ್ತಾಂಶ 2016ರ ಆಧಾರ್‌ ಕಾಯ್ದೆ ಜಾರಿಗೆ ಮುನ್ನವೇ ಸಂಗ್ರಹಿಸಿದ್ದು, ಹಾಗಾಗಿ ಅದು ಕಾಯ್ದೆಯ 303ನೇ ವಿಧಿಯಡಿ ಬರುವುದಿಲ್ಲ. ಹೀಗೆ ದೃಢಪಡಿಸಿಕೊಳ್ಳದ ದತ್ತಾಂಶ ಆಧರಿಸಿ ನೂರು ಕೋಟಿ ಜನರಿಗೆ ಆಧಾರ್‌ ಸಂಖ್ಯೆ ನೀಡಿರುವುದರಿಂದ ಲಕ್ಷಾಂತರ ಕಾರ್ಡುಗಳು ನಕಲಿಯಾಗಿವೆ.

ಅದಕ್ಕೊಂದು ಇತ್ತೀಚಿನ ಉದಾಹರಣೆ, ಪಾಕಿಸ್ತಾನದ ಗೂಢಚಾರರಿಬ್ಬರು ನಕಲಿ ಆಧಾರ್‌ ಕಾರ್ಡ್‌ಸಹಿತ ಸಿಕ್ಕಿಬಿದ್ದಿರುವ ಘಟನೆ. ಆ ಇಬ್ಬರೂ ತಮ್ಮದೇ ಬಯೋಮೆಟ್ರಿಕ್‌ ಮಾಹಿತಿ ನೀಡಿ, ಬೇರೆ ಹೆಸರಲ್ಲಿ ಆಧಾರ್‌ ಕಾರ್ಡ್‌ ಪಡೆದುಕೊಂಡಿದ್ದರು. ಅಂದರೆ, ದೇಶದ ಪ್ರತಿಷ್ಠಿತ ವಿಶಿಷ್ಟಗುರುತಿನ ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಎಷ್ಟುಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಇದಕ್ಕಿಂತ ಆಘಾತಕಾರಿ ಉದಾಹರಣೆ ಮತ್ತೊಂದು ಇರಲಾರದು. 
40 ರುಪಾಯಿಗೆ ಗಲ್ಲಿ-ಗಲ್ಲಿಯಲ್ಲೂ ಸಿಗುತ್ತೆ ಆಧಾರ್‌!
ಪೌರತ್ವದ ಮಾಹಿತಿಯೇ ಇಲ್ಲದ ಆಧಾರ್‌ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು ಮತದಾನಕ್ಕೆ ಆಧಾರ್‌ ಕಾರ್ಡನ್ನು ಗುರುತುಪತ್ರವಾಗಿ ಪರಿಗಣಿಸುವುದು ಎಷ್ಟುಸರಿ ಎಂಬುದು ಮೊದಲು ಎದುರಾಗುವ ಪ್ರಶ್ನೆ. ಕೇವಲ 40 ರುಪಾಯಿ ನೀಡಿ ದೇಶದ ಗಲ್ಲಿ-ಗಲ್ಲಿಯಲ್ಲಿ ನಕಲಿ ಆಧಾರ್‌ ಕಾರ್ಡ್‌ ಪಡೆಯುವುದು ಸಾಧ್ಯವಿದೆ ಎಂಬುದು ಹಲವು ಬಾರಿ ಸಾಬೀತಾಗಿದೆ. ಹಾಗೆ ಪಡೆದ ಪ್ಲಾಸ್ಟಿಕ್‌ ಕಾರ್ಡನ್ನು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಪರಿಶೀಲನೆಗೆ ಮಾನದಂಡವನ್ನಾಗಿ ಪರಿಗಣಿಸುವುದು ಎಷ್ಟರಮಟ್ಟಿಗೆ ಸುರಕ್ಷಿತ? ಅಥವಾ ಬ್ಯಾಂಕ್‌ ಖಾತೆ ತೆರೆಯಲು ಏಕಮಾತ್ರ ಗುರುತಿನ ಸಾಕ್ಷ್ಯವಾಗಿ ಅದನ್ನು ಪರಿಗಣಿಸಿದರೆ ಆಗಬಹುದಾದ ಅನಾಹುತಗಳ ಅಂದಾಜಿದೆಯೇ? ನಕಲಿ ಆಧಾರ್‌ ಕಾರ್ಡುಗಳು ದೇಶಾದ್ಯಂತ ಪತ್ತೆಯಾಗಿವೆ. ಮಾಧ್ಯಮಗಳಲ್ಲಿ, ಅಂತರ್ಜಾಲದಲ್ಲಿ ಆ ಬಗ್ಗೆ ಕಂತೆ-ಕಂತೆ ಮಾಹಿತಿ ದೊರೆಯುತ್ತಿದೆ. ಆದಾಗ್ಯೂ ನಕಲಿ ಆಧಾರ್‌ ಸಂಖ್ಯೆ ಮತ್ತು ಕಾರ್ಡು ತಡೆಗೆ ಯುಐಡಿಎಐ ಏನು ಕ್ರಮ ಕೈಗೊಂಡಿದೆ? ಹೀಗೆ ಲೋಪಗಳೇ ತುಂಬಿರುವ ಒಂದು ಗುರುತಿನ ಸಂಖ್ಯೆಯನ್ನು ವಿವಿಧ ಸಬ್ಸಿಡಿ ಯೋಜನೆಗಳಿಗೆ ಕಡ್ಡಾಯಗೊಳಿಸುತ್ತಿರುವುದರಿಂದ ನಾಗರಿಕರಿಗೆ ಮತ್ತು ಸರ್ಕಾರಕ್ಕೂ ವಂಚನೆಯಾಗುವುದಿಲ್ಲವೆ?
ಈಗೇನೋ ಕಾಯ್ದೆ ಬಂದಿದೆ; ಹಳೆ ಕಾರ್ಡುಗಳ ಕತೆ ಏನು?
ನಕಲಿ ಆಧಾರ್‌ ಕಾರ್ಡುಗಳಿಗೆ ಕಾರಣವಾದದ್ದು ದತ್ತಾಂಶವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಪ್ರಾಧಿಕಾರ ತೋರಿದ ನಿರ್ಲಕ್ಷ್ಯ ಧೋರಣೆ. ಯಾವುದೇ ಬಗೆಯ ಪರಿಶೀಲನೆ, ದೃಢೀಕರ­ಣ​ವೇ ಇಲ್ಲದೆ ಜನರ ದತ್ತಾಂಶವನ್ನು ಅವರೇ ನೀಡಿದ ಮಾಹಿತಿಯ ಆಧಾರದ ಮೇಲೆ ಜೋಡಿ​ಸಲಾಗಿದೆ. ಆದರೆ, 2016ರಲ್ಲಿ ಅನುಮೋದನೆ ಪಡೆದ ಆಧಾರ್‌ ಕಾಯ್ದೆಯ ಸೆಕ್ಷನ್‌ 303 ಪ್ರಕಾರ, ದತ್ತಾಂಶವನ್ನು ದೃಢಪಡಿಸಿಕೊಂಡು ನೋಂದಣಿ ಮಾಡಿಕೊಳ್ಳಬೇಕಾ­ದುದು ಯುಐಡಿಎಐನ ಹೊಣೆಗಾರಿಕೆ. ಆದರೆ, 2010​-14ರ ಅವಧಿಯಲ್ಲಿ ಸುಮಾರು 60 ಕೋಟಿ, 2014-16ರ ನಡುವೆ ಸುಮಾರು 40 ಕೋಟಿ ಆಧಾರ್‌ ನೋಂದಣಿಗಳನ್ನು ಯಾವುದೇ ದೃಢೀಕರಣವಿಲ್ಲದೆ ಮಾಡಲಾಗಿದೆ. ಈ ಅವಧಿಯಲ್ಲಿ ಹಲವು ಖಾಸಗಿ ಸಂಸ್ಥೆಗಳು ಆಧಾರ್‌ ನೋಂದಣಿ ಮಾಡಿದ್ದು, ಹಲವೆಡೆ ಲಂಚ ಪಡೆದು ನೋಂದಣಿ ಮಾಡಿಕೊಟ್ಟಿರುವ ಪ್ರಕರಣ​ಗಳು ವರದಿಯಾಗಿವೆ. ಹಾಗಾಗಿ ಆಧಾರ್‌ ಕಾಯ್ದೆ ಜಾರಿಗೆ ಬರುವ ಮುನ್ನವೇ ದೇಶದ ಬಹು​ತೇಕ ಮಂದಿಗೆ ಆಧಾರ್‌ ನೋಂದಣಿ ನೀಡಲಾಗಿದೆ. ಹಾಗಾದರೆ, ಕಾಯ್ದೆ ಜಾರಿಗೆ ಬಂದ ಬಳಿಕವಾದರೂ ನೋಂದಣಿ​ಯಾಗಿ​ರು​ವ ಆಧಾರ್‌ ಸಂಖ್ಯೆಗಳ ದತ್ತಾಂಶ ದೃಢೀಕರಣಕ್ಕೆ ಯುಐಡಿಎಐ ಯಾವ ಕ್ರಮ ಕೈಗೊಂಡಿದೆ ಎಂಬುದು ಬಹಿರಂಗವಾಗಬೇಕಿದೆ.
ಎಲ್ಲದಕ್ಕೂ ಆಧಾರ್‌ ಬೇಕು; ಆದರೆ, ಅದರ ಬುಡವೇ ‘ಅಭದ್ರ'
ಯಾವುದೇ ಬಗೆಯಲ್ಲಿ ದೃಢಪಡಿಸಿಕೊಳ್ಳಲಾಗದ ಕೋಟ್ಯಂತರ ಜನರ ದತ್ತಾಂಶ ಆಧಾರ್‌ ಮಾಹಿತಿ ಕೋಶದಲ್ಲಿದೆ. ಸಂಗ್ರಹಿಸಿ, ದಾಖಲಿಸಿರುವ ಬಯೋಮೆಟ್ರಿಕ್‌ ಮಾಹಿತಿ ಮತ್ತು ಅದಕ್ಕೆ ಜೋಡಣೆ ಮಾಡಿರುವ ವ್ಯಕ್ತಿಯ ಹೆಸರು ನಿಜವಾಗಿಯೂ ಒಬ್ಬರಿಗೇ ಸೇರಿದ್ದಾಗಿ­ದೆಯೇ ಎಂಬ ಬಗ್ಗೆ ಪರಿಶೀಲನೆ ಕೂಡ ಮಾಡಲಾಗಿಲ್ಲ. ಇಂತಹ ದತ್ತಾಂಶವನ್ನೇ ನೆಚ್ಚಿಕೊಂಡು ಸರ್ಕಾರದ ಹತ್ತಾರು ಇಲಾಖೆಗಳು ಇದೀಗ ಪಾಸ್‌ಪೋರ್ಟ್‌ ವಿತರಣೆಯಿಂದ ಮತದಾರರ ಗುರುತುಪತ್ರದವರೆಗೆ, ಅಕ್ಕಿ-ಬೇಳೆ ಪಡಿತರ ವಿತರಣೆಯಿಂದ ವಿಮಾನನಿಲ್ದಾಣ ಪ್ರವೇಶ­ದವರೆಗೆ ಈ ಆಧಾರ್‌ ಕಾರ್ಡನ್ನೇ ಆಧರಿಸಿವೆ. ಎಲ್ಲಾ ಇಲಾಖೆ, ಸಂಸ್ಥೆಗಳು ಯುಐಡಿಎಐ ನೀಡಿರುವ ಆಧಾರ್‌ ದತ್ತಾಂಶವನ್ನು ಕಣ್ಣುಮುಚ್ಚಿ ನಂಬಿವೆ. ಅಪಾರ ಪ್ರಮಾಣದ ನಕಲಿ ಆಧಾರ್‌ ಕಾರ್ಡುಗಳ ಪತ್ತೆ, ಆಧಾರ್‌ ದತ್ತಾಂಶ ಸೋರಿಕೆ ಮುಂತಾದ ಗಂಭೀರ ಲೋಪಗಳ ಹೊರತಾಗಿಯೂ ಸರ್ಕಾರ ಮತ್ತೆ ಮತ್ತೆ ಸಾಧ್ಯವಿರುವ ಕಡೆಯಲ್ಲೆಲ್ಲಾ ಆಧಾರ್‌ ಜೋಡಣೆ ಮಾಡುತ್ತಲೇ ಇದೆ. ಆ ಹಿನ್ನೆಲೆಯಲ್ಲಿ ಆಧಾರ್‌ ಕಾರ್ಡನ್ನು ಸಬ್ಸಿಡಿ ಯೋಜನೆಗಳಿಗೆ ಜೋಡಣೆ ಮಾಡುವುದನ್ನು ಒಪ್ಪಿಕೊಂಡರೂ, ಅದನ್ನು ಒಂದು ಗುರುತಿನ ಪತ್ರವಾಗಿ, ವೈಯಕ್ತಿಕ ಮಾಹಿತಿಯ ಖಾತರಿಯಾಗಿ ಬಳಸುವುದು ಈಗಲೂ ಅಪಾಯಕಾರಿಯೇ.
ಸಾವಿರಾರು ಕೋಟಿ ಖರ್ಚು: ಹೊಣೆಗಾರಿಕೆ ಯಾರಿಗೂ ಇಲ್ಲ
ದೇಶದ ಜನರ ಖಾಸಗಿ ಮಾಹಿತಿ ಸೇರಿದಂತೆ ಅತ್ಯಂತ ಮಹತ್ವದ ದತ್ತಾಂಶವನ್ನು ಸಂಗ್ರಹಿಸುವ ಪ್ರಾಧಿಕಾರಕ್ಕೆ ಆ ಮಾಹಿತಿಯ ಸುರಕ್ಷತೆ ಮತ್ತು ನಿಖರತೆಯ ಕುರಿತ ಹೊಣೆ​ಗಾರಿ​ಕೆಯೇ ಸದ್ಯದ ಕಾಯ್ದೆಯಲ್ಲಿಲ್ಲ. ಇದೀಗ ದೇಶದಲ್ಲಿ ಜೋರಾಗಿ ಕೇಳಿಬರು​ತ್ತಿ​ರುವ ವ್ಯಕ್ತಿಯ ಖಾಸಗಿತನ ಮತ್ತು ಖಾಸಗಿ ಮಾಹಿತಿ ಹಕ್ಕಿನ ಹಿನ್ನೆಲೆಯಲ್ಲಿ ಯುಐಡಿಎಐಗೆ ಅದು ಸಂಗ್ರಹಿಸಿರುವ ಜನರ ವೈಯಕ್ತಿಕ ಮಾಹಿತಿಯ ಭದ್ರತೆಯ ಹೊಣೆಗಾರಿಕೆ ನೀಡುವ ನಿಟ್ಟಿ​ನಲ್ಲಿ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಸೂಕ್ಷ್ಮ ಮಾಹಿತಿಯನ್ನು ಹೊಂದಿರುವ ಆಧಾರ್‌ ಮಾಹಿತಿ ಕೋಶಗಳ ಸುರಕ್ಷತೆಯ ಸಂಪೂರ್ಣ ಹೊಣೆಗಾರಿಕೆಯನ್ನು ಯುಐಡಿಎಐ ಹೊರ​ಬೇಕಿದೆ. ಸಾವಿರಾರು ಕೋಟಿ ರು. ಸಾರ್ವಜನಿಕ ಹಣ ವ್ಯಯ ಮಾಡಿಯೂ ನಿರೀಕ್ಷಿತ ಸುರಕ್ಷತೆ ಮತ್ತು ಭದ್ರತೆಯನ್ನು ದತ್ತಾಂಶಕ್ಕೆ ಒದಗಿಸಲಾಗಿಲ್ಲ ಎಂಬುದು ದತ್ತಾಂಶ ಸೋರಿಕೆ ಪ್ರಕರಣಗಳಿಂದಲೇ ಜಗಜ್ಜಾಹೀರಾಗಿದೆ. ವಿಚಿತ್ರವೆಂದರೆ, ಯಾವುದೇ ಸಂದರ್ಭದಲ್ಲಿ ಆಧಾರ್‌ ಲೋಪಗಳಿಗೆ ಪ್ರಾಧಿಕಾರವನ್ನು ಹೊಣೆ ಮಾಡದಂತೆ ಕಾಯ್ದೆ ಅದಕ್ಕೆ ಕಾನೂನು ರಕ್ಷಣೆ ನೀಡುತ್ತದೆ. ಅಲ್ಲದೆ, ಪ್ರಾಧಿಕಾರದ ಯಾವುದೇ ವ್ಯಕ್ತಿಯ ವಿರುದ್ಧ ಕೂಡ ಯಾವುದೇ ಲೋಪ ಪ್ರಶ್ನಿಸಿ ಹೊಣೆಗಾರಿಕೆ ನಿಗದಿ ಮಾಡುವ ಅವಕಾಶ ಕೂಡ ಕಾಯ್ದೆಯಲ್ಲಿಲ್ಲ. ಆ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಹೊಣೆಗಾರಿಕೆ ನಿಗದಿ ಮಾಡಬೇಕಿದೆ.
ಸರಿಪಡಿಸಬೇಕೆ? ಆಧಾರ್‌ ಡೇಟಾ ಹೊಸತಾಗಿ ತಾಳೆಹಾಕಿ
ಕನಿಷ್ಠ ಈ ಹಂತದಲ್ಲಾದರೂ ಆಧಾರ್‌ ನೋಂದಣಿಯಲ್ಲಿನ ದೋಷಗಳನ್ನು, ಹಿಂದೆ ಆಗಿ­ರುವ ಲೋಪಗಳನ್ನು ಸರಿಪಡಿಸದೇ ಇದ್ದರೆ ದೊಡ್ಡ ಅನಾಹುತ ಕಟ್ಟಿಟ್ಟಬುತ್ತಿ. ನಕಲಿ ಪಾಸ್‌ಪೋರ್ಟ್‌, ಬ್ಯಾಂಕ್‌ ಖಾತೆ, ಮತದಾರರ ಪಟ್ಟಿಗಳು ಸರಿಪಡಿಸಲಾದ ಪ್ರಮಾಣದಲ್ಲಿ ಸೃಷ್ಟಿ­ಯಾಗಲಿವೆ. ಇವತ್ತು ಇದು ನಮಗೆ ದೊಡ್ಡ ಪ್ರಮಾಣದಲ್ಲಿ ಗೋಚರಿಸದೇ ಇರಬಹುದು. ಆದರೆ, ಭವಿಷ್ಯದಲ್ಲಿ ಹಲವು ಹತ್ತು ಪಟ್ಟಾಗಿ ಈ ಲೋಪಗಳು ಬೆಳೆದು, ಅನಾಹುತಕಾರಿ­ಯಾಗಲಿವೆ. ಆಧಾರ್‌ ಕಾರ್ಡನ್ನೇ ಎಲ್ಲಕ್ಕೂ ಮಾನದಂಡವನ್ನಾಗಿ ಮಾಡುವುದರಿಂದ ನಕಲಿ ಆಧಾರ್‌ ಮೇಲೆ ಸೃಷ್ಟಿಯಾಗುವ ನಕಲಿ ದಾಖಲೆಗಳನ್ನು ಹೇಗೆ ಪತ್ತೆ ಮಾಡುವುದು, ಹೇಗೆ ಸರಿ­ಪಡಿ­ಸುವುದು ಎಂಬುದೇ ದೊಡ್ಡ ತಲೆನೋವಾಗಲಿದೆ. ಹಾಗಾದರೆ, ಯಾರ ವಿರುದ್ಧ ಕ್ರಮ ಕೈಗೊಳ್ಳಬೇಕು, ಯಾರ ವಿರುದ್ಧ ಕೇಸು ಹಾಕುವುದು? ನಕಲಿ ಆಧಾರ್‌ ಹಿಡಿದು ಬರುವವರು ಸೃಷ್ಟಿಸುವ ಉಗ್ರ ದಾಳಿಗಳಿಗೆ ಬಲಿಯಾದವರ ಮನೆಮಂದಿ ಯಾರನ್ನು ಕೇಳು­ವುದು? ಯುಐಡಿಎಐ ಇದಕ್ಕೆಲ್ಲಾ ಉತ್ತರಿಸುತ್ತದೆಯೇ? ಆಧಾರ್‌ ಕಾಯ್ದೆಯ ಸೆಕ್ಷನ್‌ 3.3 ಮತ್ತು 4.3ಗಳಿಗೆ ಯುಐಡಿಎಐ ಬದ್ಧ​ವಾಗಿ­­ರುವುದೇ ಆದರೆ, ಈಗಲೂ ಕಾಲ ಮಿಂಚಿಲ್ಲ. ಈಗಾಗಲೇ ಸಂಗ್ರಹಿಸಿರುವ ದತ್ತಾಂಶ ಮತ್ತು ನೋಂದಣಿಗಳ ಮರು​ಪರಿಶೀಲನೆ ಆಗಬೇಕಿದೆ. ವೈಯಕ್ತಿಕ ವಿವರ, ಬಯೋಮೆಟ್ರಿಕ್‌ ಮಾಹಿತಿ ಮುಂತಾದ ದತ್ತಾಂಶಗಳ ತಾಳೆ ಮಾಡಬೇಕಿದೆ. ಪುನರ್‌ ದೃಢ​ಪಡಿಸಿ​ಕೊಳ್ಳುವ ಮೂಲಕ ಎಲ್ಲಾ ದತ್ತಾಂಶವನ್ನು ಖಚಿತಪಡಿಸಬೇಕಿದೆ. ಇದು ಆಗಲೇಬೇಕಾದ ಕಾರ್ಯ. ಇಲ್ಲವಾದಲ್ಲಿ, ದೇಶದ ಹಿತಾಸಕ್ತಿಗೇ ಅಪಾಯವಿದೆ.

ಲೇಖನ: ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ, (ಕನ್ನಡಪ್ರಭ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿವಿ ನೋಡ್ತಿದ್ದ ಬಾಲಕಿಗೆ ಅಪ್ಪನ ಆಗಮನದ ಬಗ್ಗೆ ಸೂಚನೆ ನೀಡಿದ ಜರ್ಮನ್ ಶೆಫರ್ಡ್‌ ಶ್ವಾನ: ವೀಡಿಯೋ ಭಾರಿ ವೈರಲ್
ಭಾರತ ಮಾತ್ರವಲ್ಲ ಮೆಕ್ಸಿಕೋದಲ್ಲೂ ಅದೇ ಕತೆ, ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು