ಪಾಕ್'ನಿಂದ ಭಾರತೀಯ ಜಾಧವ್'ಗೆ ಗಲ್ಲು: ಮೇಲ್ಮನವಿಗೆ 60 ದಿನ ಅವಕಾಶ

By Suvarna Web DeskFirst Published Apr 11, 2017, 5:04 PM IST
Highlights

ನೀತಿ ನಿಯಮದ ಮೇಲೆಯೇ ಪ್ರಕ್ರಿಯೆಗಳು ನಡೆದು ಶಿಕ್ಷೆ ವಿಧಿಸಲಾಗಿದೆ. ರಾಷ್ಟ್ರದ ಭದ್ರತೆ ಹಾಗೂ ಸ್ಥಿರತೆಯ ವಿರುದ್ಧ ಯಾರೆ ಕೆಲಸ ಮಾಡಿದರೂ ಪಾಕಿಸ್ತಾನ ಸುಮ್ಮನಿರುವುದಿಲ್ಲ'

ಇಸ್ಲಾಮಾಬಾದ್(ಏ.11): ಬೇಹುಗಾರಿಕೆ ಆರೋಪದ ಮೇಲೆ ಪಾಕ್'ನ ಮಿಲಿಟರಿ ಕೋರ್ಟ್'ನಿಂದ ಗಲ್ಲು ಶಿಕ್ಷೆ ಒಳಗಾಗಿರುವ ಭಾರತೀಯ ನಾಗರಿಕ ಕುಲ್'ಭೂಷಣ್ ಜಾಧವ್ ಅವರು ತಮ್ಮ ತೀರ್ಪಿನ ವಿರುದ್ದ ಸೇನಾ ಮುಖ್ಯಸ್ಥರು ಹಾಗೂ ಅಧ್ಯಕ್ಷರಿಗೆ ಮೇಲ್ಮನವಿ ಸಲ್ಲಿಸಬಹುದು ಎಂದು ರಕ್ಷಣಾ ಸಚಿವ ಖ್ವಾಜಾ ಆಸೀಫ್ ತಿಳಿಸಿದ್ದಾರೆ.

ಸಂಸತ್ತಿನ ಮೇಲ್ಮನೆಯಲ್ಲಿ ಮಾತನಾಡಿ, ಜಾಧವ್ ಶಿಕ್ಷೆಯ ಬಗ್ಗೆ ಭಾರತ ಮಾಡುತ್ತಿರುವ ಟೀಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ನೆಲದ ಕಾನೂನು, ನೀತಿ ನಿಯಮದ ಮೇಲೆಯೇ ಪ್ರಕ್ರಿಯೆಗಳು ನಡೆದು ಶಿಕ್ಷೆ ವಿಧಿಸಲಾಗಿದೆ. ರಾಷ್ಟ್ರದ ಭದ್ರತೆ ಹಾಗೂ ಸ್ಥಿರತೆಯ ವಿರುದ್ಧ ಯಾರೆ ಕೆಲಸ ಮಾಡಿದರೂ ಪಾಕಿಸ್ತಾನ ಸುಮ್ಮನಿರುವುದಿಲ್ಲ' ಎಂದು ತಿಳಿಸಿದರು.

ಪಾಕ್ ವಿಧಿಸಿರುವ ಗಲ್ಲು ಶಿಕ್ಷೆ ತೀರ್ಪನ್ನು ಖಂಡಿಸಿರುವ ಭಾರತ ಸರ್ಕಾರ, ಇದು ಉದ್ದೇಶಪೂರ್ವಕ ಕೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ಕುಲಭೂಷಣ್ ಜಾದವ್'ರ ಪರವಾಗಿ ತಾನು ಯಾವುದೇ ಹಂತಕ್ಕೆ ಬೇಕಾದರೂ ಹೋಗಲು ಸಿದ್ಧ ಎಂದು ಭಾರತ ಸರಕಾರ ಹೇಳಿದೆ. ಕುಲಭೂಷಣ್'ರನ್ನು ನೇಣಿಗೆ ಹಾಕಿದ್ದೇ ಆದಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದೂ ಭಾರತ ಎಚ್ಚರಿಕೆ ನೀಡಿದೆ. ಆದರೆ, ಕಾನೂನು ಪ್ರಕಾರವಾಗಿಯೇ ಕುಲಭೂಷಣ್'ರ ವಿಚಾರಣೆ ನಡೆಸಿ ತೀರ್ಪು ನೀಡಲಾಗಿದೆ. ಭಾರತದಿಂದ ಏನೇ ದಾಳಿ ನಡೆದರೂ ಎದುರಿಸಲು ತಾನು ಸಿದ್ಧವಿರುವುದಾಗಿ ಪಾಕಿಸ್ತಾನ ಸರಕಾರ ಹೇಳಿದೆ.

click me!