
ಬೆಂಗಳೂರು(ಸೆ. 08): ಕನ್ನಡದ ಹಿರಿಯ ನಟ ಆರ್.ಎನ್.ಸುದರ್ಶನ್ ವಿಧಿವಶರಾಗಿದ್ದಾರೆ. ಹಲವು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ 78 ವರ್ಷದ ಸುದರ್ಶನ್ ಇಂದು ಶುಕ್ರವಾರ ತಿಲಕ್ ನಗರದ ಸಾಗರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗಷ್ಟೇ ಸುದರ್ಶನ್ ಅವರು ಕಾಲು ಜಾರಿ ಬಿದ್ದು ಮೂಳೆ ಮುರಿತಕ್ಕೊಳಗಾಗಿದ್ದರು.
ಆರ್.ಎನ್. ಸುದರ್ಶನ್ ಅವರು 1961ರಲ್ಲಿ ವಿಜಯನಗರದ ವೀರಪುತ್ರ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. 21 ವರ್ಷದ ಪ್ರಾಯದಲ್ಲಿ ಸಿನಿಮಾಕ್ಕೆ ಎಂಟ್ರಿಯಾದ ಸುದರ್ಶನ್ ಅವರು ನೂರಾರು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ, ಮಠ ಚಿತ್ರದಲ್ಲಿ ಅವರು ಮಾಡಿದ ಗುರುಗಳ ಪಾತ್ರವು ಸಾಕಷ್ಟು ಜನಪ್ರಿಯವಾಗಿದೆ.
ಕನ್ನಡ ಕಿರುತೆರೆಯಲ್ಲೂ ಅವರು ರಾರಾಜಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ "ಅಗ್ನಿಸಾಕ್ಷಿ" ಧಾರವಾಹಿಯಲ್ಲೂ ಅವರು ಗುರು ಪಾತ್ರ ಮಾಡಿದ್ದರು.
ಆರ್.ಎನ್. ಸುದರ್ಶನ್ ಅವರು ಸಿನಿಮಾ ಕುಟುಂಬದಿಂದಲೇ ಬಂದವರಾಗಿದ್ದರು. ಇವರ ತಂದೆ ಆರ್.ನಾಗೇಂದ್ರರಾವ್ ಅವರು ದಕ್ಷಿಣ ಭಾರತದ ಮಹಾನ್ ಚಿತ್ರ ನಿರ್ದೇಶಕರಲ್ಲೊಬ್ಬರೆನಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಆರ್.ಎನ್.ಜಯಗೋಪಾಲ್ ಅವರು ಸುದರ್ಶನ್ ಅವರ ಸೋದರರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.