ಸ್ಥಳೀಯರಿಗೆ ಖಾಸಗಿ ವಲಯದಲ್ಲಿ ಶೇ.70 ಉದ್ಯೋಗ ಮೀಸಲು!

By Web DeskFirst Published Jul 10, 2019, 9:01 AM IST
Highlights

ಸ್ಥಳೀಯರಿಗೆ ಖಾಸಗಿ ವಲಯದಲ್ಲಿ ಶೇ.70 ಮೀಸಲು: ಕಮಲ್‌ನಾಥ್‌| ಉದ್ಯೋಗ ನೆರೆ ರಾಜ್ಯದವರ ಪಾಲಾಗುವುದನ್ನು ತಪ್ಪಿಸಲು ಕ್ರಮ| ಮಧ್ಯಪ್ರದೇಶದ ಕಾಂಗ್ರೆಸ್‌ ಸರ್ಕಾರದಿಂದ ಮಹತ್ವದ ನಿರ್ಧಾರ

ಭೋಪಾಲ್‌[ಜು.10]: ಮಧ್ಯಪ್ರದೇಶದಲ್ಲಿನ ಉದ್ಯೋಗಗಳು ಬಿಹಾರ ಸೇರಿದಂತೆ ನೆರೆಯ ರಾಜ್ಯಗಳ ವಲಸಿಗರ ಪಾಲಾಗುತ್ತಿವೆ ಎಂಬ ದೂರುಗಳ ಬೆನ್ನಲ್ಲೇ, ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಖಾಸಗಿ ವಲಯದ ಉದ್ಯೋಗದಲ್ಲಿ ಸ್ಥಳೀಯ ಯುವಕರಿಗೆ ಶೇ.70ರಷ್ಟುಮೀಸಲಾತಿ ಕಲ್ಪಿಸುವ ಅವಕಾಶ ನೀಡುವ ಕಾನೂನು ರೂಪಿಸಲು ನಿರ್ಧರಿಸಿದೆ. ಈ ಕುರಿತು ಸ್ವತಃ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಅವರೇ ಮಾಹಿತಿ ನೀಡಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಕಲಾಪದ ಪ್ರಶ್ನೋತ್ತರ ವೇಳೆ ಮಾತನಾಡಿದ ಸಿಎಂ ಕಮಲ್‌ನಾಥ್‌ ಅವರು, ‘ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ, ಉತ್ತರ ಪ್ರದೇಶ ಹಾಗೂ ಬಿಹಾರದ ಹಲವು ನಾಯಕರಿಂದ ನಾನು ಟೀಕೆಗೆ ಒಳಗಾಗುತ್ತೇನೆ ಎಂಬ ಅರಿವಿದೆ. ಆದಾಗ್ಯೂ, ಈ ನಿರ್ಧಾರದಿಂದ ಹಿಂದೆ ಸರಿಯಲ್ಲ’ ಎಂದರು. ಅಲ್ಲದೆ, ಸರ್ಕಾರಿ ನೇಮಕಾತಿಯಲ್ಲೂ ಸ್ಥಳೀಯರಿಗೆ ಮೊದಲ ಆದ್ಯತೆ ಎಂದರು.

ಜೊತೆಗೆ, ಈಗಾಗಲೇ ಮಹಾರಾಷ್ಟ್ರ, ಗುಜರಾತ್‌ ಹಾಗೂ ಪಶ್ಚಿಮ ಬಂಗಾಳದಂಥ ರಾಜ್ಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಥಳೀಯ ಭಾಷೆಗಳನ್ನು ಅಳವಡಿಸಲಾಗಿದೆ. ಈ ಮೂಲಕ ಮಧ್ಯಪ್ರದೇಶದ ಯುವಕರು ಉದ್ಯೋಗ ಗಿಟ್ಟಿಸುವ ಅವಕಾಶವನ್ನು ಕಡಿತಗೊಳಿಸಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರಿ ಉದ್ಯೋಗದಲ್ಲಿಯೂ ಸ್ಥಳೀಯ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಇದೇ ವೇಳೆ ಹೇಳಿದರು.

ಕಳೆದ ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಕಮಲ್‌ನಾಥ್‌ ಅವರು, ರಾಜ್ಯದ ಖಾಸಗಿ ವಲಯದ ಹುದ್ದೆಗಳು ನೆರೆ ರಾಜ್ಯಗಳ ಪಾಲಾಗುತ್ತಿವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಯುವಕರಿಗೆ ಶೇ.70 ಮೀಸಲಾತಿ ಕಲ್ಪಿಸುವ ಖಾಸಗಿ ಉದ್ಯಮಗಳಿಗೆ ಪ್ರೋತ್ಸಾಹ ನೀಡುವುದಾಗಿ ಘೋಷಣೆ ಮಾಡಿದ್ದರು.

click me!