
ಬೆಂಗಳೂರು : ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಬದುಕಿನಲ್ಲಿ ಪರಿವರ್ತನಾ ಮನ್ವಂತರಕ್ಕೆ ಪಶ್ಚಿಮ ವಿಭಾಗದ ಪೊಲೀಸರು ಯೋಜನೆ ರೂಪಿಸಿದ್ದು, ಈಗ ಭರವಸೆ ಶೀರ್ಷಿಕೆಯಡಿ ಅದನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ.
ಗಾಂಧಿ ನಗರದ ತೇರಾಪಂತ್ ಭವನದಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಪಿ ರವಿ.ಡಿ.ಚೆನ್ನಣ್ಣನವರ್ ಅವರು, ಅಕ್ರಮ ಚಟುವಟಿಕೆಗಳನ್ನು ತೊರೆದು ಹೊಸದಾರಿಗೆ ಬರುವವರಿಗೆ ಬದುಕು ಕಟ್ಟಿಕೊಳ್ಳಲು ಸಹಕರಿಸುವುದಾಗಿ ಭರವಸೆ ನೀಡಿದರು.
ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಹೊಸ ಜೀವನ ಹಾಗೂ ಭವಿಷ್ಯ ರೂಪಿಸುವ ಸಲುವಾಗಿ ಭರವಸೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಿಂದ ವಿಮುಖರಾಗಿ ಹೊಸ ದಾರಿಯಲ್ಲಿ ಹೆಜ್ಜೆ ಹಾಕುವ ಮನಸ್ಸಿನವರಿಗೆ ಸ್ವಾಗತಿಸುತ್ತೇನೆ. ನಿಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ಕೊಡಿಸಲು ಯತ್ನಿಸುತ್ತೇನೆ ಎಂದರು.
ಆಟೋ ಚಾಲಕ, ಮೆಕ್ಯಾನಿಕ್, ಮೊಬೈಲ್ ರಿಪೇರಿ, ಗಾರ್ಮೆಂಟ್ಸ್ ಹೀಗೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ವಾಗ್ದಾನ ಮಾಡಿದ ಡಿಸಿಪಿ ಅವರು, ಈ ಭರವಸೆ ಹೊರತಾಗಿಯೂ ದುಷ್ಕೃತ್ಯಗಳನ್ನು ಮುಂದುವರೆಸುವ ಸಮಾಜಘಾತುಕ ಶಕ್ತಿಗಳನ್ನು ಹೆಡೆಮುರಿ ಕಟ್ಟುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು 100 ಕ್ಕೂ ಅಧಿಕ ರೌಡಿಶೀಟರ್‌ಗಳು ಭಾಗವಹಿಸಿದ್ದರು. ಕೆಲವರು ಪಾತಕಲೋಕದಿಂದ ಸಮಾಜಕ ಮುಖ್ಯವಾಹಿನಿಗೆ ಬರುವುದಾಗಿ ಅವರು ವಾಗ್ದಾನ ಸಹ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.