
ಬೆಂಗಳೂರು (ಜ.16): ಮೊಬೈಲ್ ತಂತ್ರಜ್ಞಾನದಲ್ಲಿ ಹೊಸ ಯುಗವನ್ನೇ ಸೃಷ್ಟಿಸಿದ್ದ ಜಿಯೋ ಪ್ರಾರಂಭದ ದಿನಗಳಲ್ಲಿ ತನ್ನ ಬಳಕೆದಾರರಿಗೆ ಉಚಿತ ಕರೆ ಮತ್ತು ಡೇಟಾ ಸೌಲಭ್ಯವನ್ನು ಒದಗಿಸಿತ್ತು. ಇದೀಗ ಮತ್ತೊಮ್ಮೆ ಹೊಸ ವರ್ಷದ ಕೊಡುಗೆಯಾಗಿ ಇದೇ ರೀತಿ ಉಡುಗೊರೆ ನೀಡಲು ಮುಂದಾಗಿದೆ. ಅದೇನೆಂದರೆ ಜಿಯೋ ಇಂಟರ್‌ನೆಟ್ ಸೇವೆಯನ್ನು ರಾತ್ರಿ 12 ಗಂಟೆಯ ಒಳಗಾಗಿ ಅಪ್‌ಗ್ರೇಡ್ ಮಾಡಿದಲ್ಲಿ ದಿನಕ್ಕೆ 10 ಜಿಬಿ ಡೇಟಾ, ಅನಿಯಮಿತ ಕರೆ, ಹೈಸ್ಪೀಡ್ ಇಂಟರ್‌ನೆಟ್ ಸೌಲಭ್ಯ ನೀಡಲಿದೆ. 2018 ಮಾರ್ಚ್ 31ರ ವರೆಗೂ ಈ ಸೇವೆ ಲಭ್ಯವಾಗಲಿದೆ. ಹೀಗೊಂದು ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹಾಗಾದರೆ ನಿಜಕ್ಕೂ ಜಿಯೋ ಹೊಸವರ್ಷದ ಕೊಡುಗೆಯಾಗಿ ಇಂಥದ್ದೊಂದು ಆಫರ್ ನೀಡಿದ್ದು ನಿಜವೇ ಎಂದು ಹುಡುಕ ಹೊರಟಾಗ ಈ ಸುದ್ದಿಯ ಹಿಂದಿನ ಅಸಲಿ ಕತೆ ತಿಳಿಯಿತು. ಇದೊಂದು ವದಂತಿ ಎಂದು ತಿಳಿಯಿತು. ಏಕೆಂದರೆ ಈ ಸುದ್ದಿ ನಿಜವೇ ಆಗಿದ್ದಲ್ಲಿ ಜಿಯೋದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಸುದ್ದಿ ಪ್ರಕಟಗೊಂಡಿರಬೇಕಿತ್ತು. ಆದರೆ ಜಿಯೋ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂತಹ ಯಾವುದೇ ಸುದ್ದಿ ಪ್ರಕಟವಾಗಿಲ್ಲ.
ಹಾಗಾಗಿ ಈ ಸುದ್ದಿ ಸಂಪೂರ್ಣವಾಗಿ ಸತ್ಯಕ್ಕೆ ದೂರವಾದದ್ದು ಎಂದು ಹೇಳಬಹುದು. ಒಂದು ವೇಳೆ ಜಿಯೋ ಆಫರ್‌ಗಾಗಿ ನೀವು ಮೊಬೈಲ್ ಅಪ್‌ಗ್ರೇಡ್ ಲಿಂಕ್‌ನ್ನು ಒತ್ತಿದಲ್ಲಿ ನಿಮಗೂ, ನಿಮ್ಮ ಮೊಬೈಲ್‌ಗೂ ಹಾನಿಯಾಗಲಿದೆ. ಅಂದರೆ ಈ ಲಿಂಕ್ ಒತ್ತಿದಾಗ ಮೊಬೈಲ್ ಕಾರ್ಯವೇಗ ನಿಧಾನವಾಗಲಿದೆ. ವೈರಸ್‌ಗಳು ಬಂದು ಸೇರಿಕೊಳ್ಳಲಿವೆ. ಅನವಶ್ಯಕ ಜಾಹೀರಾತುಗಳು ಬರಲಿವೆ. ಅಲ್ಲದೆ ನಿಮ್ಮ ಮೊಬೈಲ್ ನಲ್ಲಿರುವ ವೈಯಕ್ತಿಕ ಡೇಟಾಗಳನ್ನು ಕದಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ರೀತಿ ಆಫರ್ ಸಂದೇಶಗಳು ಬಂದಾಗ ಎಚ್ಚರದಿಂದಿರುವುದು ಒಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.