
ಬೆಂಗಳೂರು (ಡಿ.26): ಗುಜರಾತ್ ಚುನಾವಣೆಯ ನಂತರ ಪ್ರಬಲ ದಲಿತ ಮುಖಂಡನಾಗಿ ಬೆಳಕಿಗೆ ಬಂದಿರುವ ಅಲ್ಲಿನ ಶಾಸಕ ಜಿಗ್ನೇಶ್ ಮೇವಾನಿ ಕರ್ನಾಟಕದ ನಿರ್ಭಯಾ ಪ್ರಕರಣ ಎಂದೇ ಗುರುತಿಸಲಾಗಿರುವ, ವಿಜಯಪುರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ದಲಿತ ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಲಿದ್ದಾರೆ.
ಬಹುತೇಕ ಜನವರಿ ಎರಡನೇ ವಾರದಲ್ಲಿ ವಿಜಯಪುರಕ್ಕೆ ಆಗಮಿಸಿ ಅವರ ಕುಟುಂಬವನ್ನು ಭೇಟಿ ಮಾಡಿ ಜಿಗ್ನೇಶ್ ಸಾಂತ್ವನ ಹೇಳಲಿದ್ದಾರೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಪರ ದಲಿತರನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಜಿಗ್ನೇಶ್ ಮೇವಾನಿ ಅವರನ್ನು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಪ್ರಚಾರಕ್ಕೆ ಬಳಸಿಕೊಳ್ಳಲು ಈಗಾಗಲೇ ಪಕ್ಷ ನಿರ್ಧರಿಸಿದೆ. ಇದಕ್ಕೆ ಜಿಗ್ನೇಶ್ ಕೂಡ ಒಪ್ಪಿಗೆಯನ್ನು ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿರುವ ವಿಜಯಪುರದ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಲು ಕರೆಸುವುದು ಮತ್ತು ಆ ಮೂಲಕವೇ ಅವರು ರಾಜ್ಯದಲ್ಲಿ ತಮ್ಮ ಪ್ರಚಾರ ಯಾತ್ರೆಯನ್ನು ಆರಂಭಿಸುವುದು ಸೂಕ್ತ ಎಂದು ಕಾಂಗ್ರೆಸ್ ನಾಯಕತ್ವ ಚಿಂತಿಸಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅವರು ಜನವರಿ ಎರಡನೇ ವಾರದಲ್ಲಿ ವಿಜಯಪುರಕ್ಕೆ ಆಗಮಿಸಲಿದ್ದಾರೆ ಎಂದು ಮೂಲಗಳು ಹೇಳಿ ಹಿಂದು ಸಂಘಟನೆಗಳ ವಿರುದ್ಧ ದಲಿತರನ್ನು ಸಂಘಟಿಸುವಲ್ಲಿ ಎತ್ತಿದ ಕೈ ಎನಿಸಿರುವ ಜಿಗ್ನೇಶ್ ಅವರು ವಿಜಯಪುರಕ್ಕೆ ಆಗಮಿಸಿದ ಸಂದರ್ಭದಲ್ಲೇ ಸಮಾವೇಶವೊಂದನ್ನು ನಡೆಸಲು ಕಾಂಗ್ರೆಸ್ ಉದ್ದೇಶಿಸಿದೆ. ಅಲ್ಲದೆ, ಚುನಾವಣೆ ವೇಳೆಗೆ ಹತ್ತಾರು ಬಾರಿ ಅವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ನಿರ್ಭಯಾ ಪ್ರಕರಣ ಎಂದೇ ಪರಿಗಣಿಸಲಾಗಿರುವ ವಿಜಯಪುರದ ಬಾಲಕಿಯ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಸುವರ್ಣ ನ್ಯೂಸ್ ಇಡೀ ರಾಜ್ಯದ ಗಮನಕ್ಕೆ ಬರುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.