
ಬೆಂಗಳೂರು : ರಾಷ್ಟ್ರ ಮಟ್ಟದಲ್ಲಿ ಎನ್‌ಡಿಎ ಭಾಗವಾದರೂ ಜೆಡಿಯು (ನಿತೀಶ್ ಕುಮಾರ್ ಬಣ) ರಾಜ್ಯದ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ.
ರಾಜ್ಯದಲ್ಲಿ ಪಕ್ಷದ ಸಂಘಟನೆ ಪ್ರಬಲವಾಗಿರುವ ಸುಮಾರು 25ರಿಂದ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಲಾಗುವುದು. ಈ ತಿಂಗಳ 16ರಂದು ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಲಾಗುವುದು ಎಂದು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷವು ಸಜ್ಜಾಗಿದೆ. ಜೆಡಿಯು ಹೊರತು ಪಡಿಸಿ ಸರ್ಕಾರ ರಚಿಸಲು ಸಾಧ್ಯವಿಲ್ಲದಂತೆ ನಾವು ಕೆಲಸ ಮಾಡುತ್ತೇವೆ. ಒಡಿಶಾ ಸೇರಿ ಹಲವು ಕಡೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಮಹತ್ವದ ಪಾತ್ರ ವಹಿಸಿದ್ದ ಪಕ್ಷದ ಮುಖಂಡ ಚಂದ್ರ ಮಿಶ್ರಾರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರು ಚುನಾವಣಾ ತಂತ್ರ ರೂಪಿಸಲಿದ್ದಾರೆ. ಕೇಂದ್ರದಲ್ಲಿ ಎನ್‌ಡಿಯ ಭಾಗವಾದರೂ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಕಣಕ್ಕಿಳಿಯಲಾಗುವುದು ಎಂದರು.
ಇದೇ ತಿಂಗಳ 11ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಕ್ಕೆ ಭೇಟಿ ನೀಡಲಿದ್ದು, ಚುನಾವಣಾ ಪ್ರಚಾರದಲ್ಲಿ ತೊಡಗಲಿದ್ದಾರೆ. ಇತ್ತೀಚೆಗೆ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದು, ಎಲ್ಲಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಬೇಕಾದ ಅಗತ್ಯ ಇಲ್ಲ. ಪಕ್ಷದ ಅಭ್ಯರ್ಥಿಗಳು ಎಲ್ಲಿ ಸಮರ್ಥರಿದ್ದಾರೋ ಅಂತಹ ಕಡೆಗಳಲ್ಲಿ ಮಾತ್ರ ಕಣಕ್ಕೆ ಇಳಿಸುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿದರು.
ಪಕ್ಷದ ಹೆಸರು, ಚಿಹ್ನೆ ಬಳಕೆ ಮಾಡಲು ನಿತೀಶ್ ಕುಮಾರ್ ಬಣಕ್ಕೆ ಮಾತ್ರ ಹೈಕೋರ್ಟ್ ಮತ್ತು ಚುನಾವಣಾ ಆಯೋಗ ಹೇಳಿದೆ. ಹೀಗಾಗಿ ಯಾವುದೇ ಗೊಂದಲ ಇಲ್ಲ. ಶರದ್ ಯಾದವ್ ಬಣ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರೂ ನಮಗೇನೂ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಟ ಉಪೇಂದ್ರ ಗುಂಪು ಸೇರಿದಂತೆ ಇತರೆ ಗುಂಪುಗಳು ಪಕ್ಷದೊಂದಿಗೆ ಸಂಪರ್ಕದಲ್ಲಿವೆ. ನಮ್ಮ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸಲಾಗುವುದು. ರಾಜ್ಯದಲ್ಲಿ 2.56 ಕೊಟಿ ಯುವಜನಾಂಗ ಇದ್ದು, ಅವರನ್ನು ಹೆಚ್ಚಾಗಿ ಆಕರ್ಷಿಸಲು ಪ್ರಯತ್ನಿಸಲಾಗುವುದು. ರಾಜ್ಯದಲ್ಲಿ ಪಕ್ಷಕ್ಕೆ ಬಹುಮತ ಬಂದರೆ ಐದು ವರ್ಷಗಳಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು ಎಂದು ಮಹಿಮಾ ಪಟೇಲ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.