
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆಯಲು ಜೆಡಿಎಸ್ ಬೆಂಗಳೂರಿಗೆ ಸೀಮಿತವಾಗಿದ್ದ ‘ಮನೆ ಮನೆಗೆ ಕುಮಾರಣ್ಣ’ ಕಾರ್ಯಕ್ರಮವನ್ನು ವಿಸ್ತರಿಸಲು ತೀರ್ಮಾನಿಸಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ನೇತೃತ್ವ ದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಯಿತು.
ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮ ನಡೆಸುತ್ತಿದ್ದು, ಇದನ್ನು ರಾಜ್ಯಕ್ಕೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ತುಮಕೂರಿನಿಂದ ಈ ಕಾರ್ಯಕ್ರಮವನ್ನು ಆರಂಭಿಸಲು ನಿರ್ಣಯಿಸಲಾಗಿದೆ. ಬುಧವಾರ ತುಮಕೂರಿನಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ಬಿಜೆಪಿ, ಕಾಂಗ್ರೆಸ್‌ನ ಕಾರ್ಯಕ್ರಮಗಳಿಗೆ ಪರ್ಯಾಯವಾಗಿ ರೈತರ ಸಮಸ್ಯೆಯನ್ನು ಆಲಿಸಲು ರೈತ ಜಾಗೃತಿ ಯಾತ್ರೆ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ, ಯಾವಾಗ ಪ್ರಾರಂಭಿಸಬೇಕು ಎಂಬುದರ ಕುರಿತು ಪಕ್ಷದ ಮುಖಂಡರ ಅಭಿಪ್ರಾಯಗಳನ್ನು ಪಡೆದು ನಂತರ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಸಮಾಲೋಚನೆ ನಡೆಸಲಾಯಿತು.
ಪಕ್ಷದ ಬಲವರ್ಧನೆ ಮತ್ತು ಸಂಘಟಿಸುವ ಕುರಿತು ವಹಿಸಲಾಗಿರುವ ಹೊಣೆಗಾರಿಕೆ ಬಗ್ಗೆ ಚರ್ಚೆ ನಡೆಸಿ ಮತ್ತಷ್ಟು ಶ್ರಮ ವಹಿಸಿ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ನಿರ್ದೇಶನ ನೀಡಿದರು.
ಪ್ರವಾಸವನ್ನು ಒಂಟಿಯಾಗಿ ಕೈಗೊಳ್ಳುವುದಕ್ಕಿಂತ ತಂಡೋಪತಂಡವಾಗಿ ಕೈಗೊಂಡರೆ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ. ಹೀಗಾಗಿ ಮುಖಂಡರು ಪಕ್ಷದ ಕಾರ್ಯಕರ್ತರೊಂದಿಗೆ ತಂಡ ತಂಡವಾಗಿ ಪ್ರವಾಸ ನಡೆಸುವಂತೆ ಸೂಚಿಸಿದರು ಎಂದು ಹೇಳಲಾಗಿದೆ.
ಪಕ್ಷದಲ್ಲಿ 32 ವಿಧಾನಸಭೆ ಸದಸ್ಯರು, 12 ವಿಧಾನಪರಿಷತ್ ಸದಸ್ಯರಿದ್ದಾರೆ. ಪ್ರತಿಯೊಬ್ಬರೂ ಪಕ್ಷದ ಗೆಲುವಿಗೆ ಶ್ರಮಿಸಬೇಕು. 224 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಯಾವ ರೀತಿ ಹೋರಾಟ ನಡೆಸಬೇಕು ಎಂಬುದರ ಬಗ್ಗೆ ಕಾರ್ಯತಂತ್ರ ರೂಪಿಸಬೇಕು. ಪ್ರಸ್ತುತ ಇರುವ ಕ್ಷೇತ್ರವನ್ನು ಉಳಿಸಿಕೊಳ್ಳುವುದರ ಜತೆಗೆ ಉಳಿದ ಕ್ಷೇತ್ರಗಳಲ್ಲಿ ಗೆಲ್ಲುವ ಪ್ರಯತ್ನ ನಡೆಸಬೇಕು ಎಂದು ದೇವೇಗೌಡ ತಿಳಿಸಿದರು.
12 ದಿನಗಳ ಕಾಲ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು ಆಸ್ಪತ್ರೆಯಲ್ಲಿ ಇದ್ದರು. ಹೀಗಾಗಿ ಆ ಕಡೆಗೆ ಹೆಚ್ಚಿನ ಗಮನ ನೀಡಲಾಗಿತ್ತು. ಇದೀಗ ಕುಮಾರಸ್ವಾಮಿ ಅವರು ಮನೆಗೆ ಆಗಮಿಸಿದ್ದರಿಂದ ಪಕ್ಷ ಸಂಘಟನೆಗಾಗಿ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಬಸವರಾಜ ಹೊರಟ್ಟಿ, ಟಿ.ಎ.ಶರವಣ, ಪಕ್ಷದ ಮುಖಂಡ ಜಿ.ಟಿ.ದೇವೇಗೌಡ, ಸಂಸದ ಸಿ.ಎಸ್.ಪುಟ್ಟರಾಜು, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮುಖ್ಯ ಸಚೇತಕ ಮಧು ಬಂಗಾರಪ್ಪ ಸೇರಿದಂತೆ 32 ಶಾಸಕರು, ಮೇಲ್ಮನೆ ಸದಸ್ಯರು ಭಾಗವಹಿಸಿದ್ದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಎಚ್.ಡಿ.ಕುಮಾರಸ್ವಾಮಿ ಭಾಗಿ
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ, ಕನ್ನಡ ರಾಜ್ಯೋತ್ಸವ ದಿನದಂದು ರಾಜ್ಯ ಪ್ರವಾಸ ಆರಂಭಿಸುವುದಾಗಿ ಪ್ರಕಟಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ನಿಮ್ಮೆಲ್ಲರ ಆಶೀರ್ವಾದದಿಂದ ಚೇತರಿಸಿಕೊಳ್ಳುತ್ತಿದ್ದೇವೆ. ಅದಷ್ಟು ಬೇಗ ಗುಣಮುಖವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ನ.1ರಂದು ಕನ್ನಡ ರಾಜ್ಯೋತ್ಸವ. ಅಂದಿನಿಂದ ರಾಜ್ಯ ಪ್ರವಾಸದಲ್ಲಿ ಭಾಗಿಯಾಗುತ್ತೇನೆ ಎಂದರು. ಇಸ್ರೇಲ್ ಪ್ರವಾಸದ ವೇಳೆ ಆರೋಗ್ಯ ಕೆಟ್ಟಿತ್ತು. ಆದರೂ, ರೈತರ ಅನುಕೂಲಕ್ಕಾಗಿ ಪ್ರವಾಸಿ ಮುಗಿಸಿದ್ದೇನೆ. ಈ ವೇಳೆ ಹಲವು ವಿಷಯಗಳನ್ನು ಅಧ್ಯಯನ ನಡೆಸಿದ್ದೇನೆ. ಪಕ್ಷವು ಅಧಿಕಾರಕ್ಕೆ ಬಂದರೆ ಅವುಗಳ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕುಮಾರಸ್ವಾಮಿ ಸೋಮವಾರವಷ್ಟೇ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.