ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ರಾಜ್ಯದಲ್ಲಿ ಹಲವು ರೀತಿಯ ಬದಲಾವಣೆಗಳಾಗುತ್ತಿದ್ದು,ಇದೀಗ ಜೆಡಿಎಸ್ ಶಾಸಕರೋರ್ವರು ತಮ್ಮ ಹುದ್ದೆ ತೊರೆದಿದ್ದಾರೆ.
ಬೆಂಗಳೂರು (ಜೂ.16) : ಉದ್ಯಮಿ ಖೋಡೆ ಕುಟುಂಬವು ನಗರದ ಬಿ.ಎಂ.ಕಾವಲು ಪ್ರದೇಶದಲ್ಲಿ 310 ಎಕರೆ ಜಾಗವನ್ನು ಅತಿಕ್ರಮಣ ಮಾಡಿ ಕೊಂಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣಕ್ಕಾಗಿ ಆಡಳಿತಾರೂಢ ಜೆಡಿಎಸ್‌ನ ಹಿರಿಯ ಶಾಸಕ ಎ.ಟಿ.ರಾಮಸ್ವಾಮಿ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಬಹಿರಂಗವಾಗಿದೆ.
ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ರಾಮಸ್ವಾಮಿ ಅವರು ಬರೆದಿರುವ ಆರು ಪುಟಗಳ ಸುದೀರ್ಘ ರಾಜೀನಾಮೆ ಪತ್ರದಲ್ಲಿ ಯಾವ ಕಾರಣಕ್ಕಾಗಿ ತಮ್ಮ ಹುದ್ದೆಗೆ ರಾಜೀ ನಾಮೆ ನೀಡಲಾಗುತ್ತಿದೆ ಎಂಬುದರ ಕುರಿತು ಸವಿವರವಾಗಿ ತಿಳಿಸಿದ್ದಾರೆ.
ಒಟ್ಟು 310 ಎಕರೆ ಪ್ರದೇಶ ಸರ್ಕಾರಿ ಭೂಮಿಯಾಗಿದ್ದರೂ ಭೂಗಳ್ಳರು ಅತಿಕ್ರಮಣ ಮಾಡಿದ್ದಾರೆ. ಆದರೂ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. 2003 ಮತ್ತು 2005ರಲ್ಲಿ ಈ ಜಾಗ ಸರ್ಕಾರದ್ದು ಎಂದು ವರದಿ ಸಹ ನೀಡಲಾಗಿದೆ. ಆದರೆ 2018 ರಲ್ಲಿ ವಿಶೇಷ ಜಿಲ್ಲಾಧಿಕಾರಿ ಕೊಟ್ಟ ವರದಿಯಲ್ಲಿ ಅದನ್ನು ಮರೆಮಾಚಿ ಖಾಸಗಿ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಕಳೆದ ವರ್ಷ ಬೆಳಗಾವಿ ಅಧಿವೇಶನದಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ಬಿ.ಎಂ.ಕಾವಲಿನ ಸರ್ವೆ ನಂ.137 ರಲ್ಲಿನ 310 ಎಕರೆ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳು ಪರಭಾರೆ ಮಾಡಿರುವ ಬಗ್ಗೆ ಪ್ರಸ್ತಾಪಿಸಿದ್ದೆ. ಈ ಬಗ್ಗೆ ಕಂದಾಯ ಸಚಿವರು, ವಿಶೇಷ ಜಿಲ್ಲಾಧಿಕಾರಿಗಳು ಮಾಡಿರುವ ಆದೇಶ ಸರಿ ಇಲ್ಲ ಎಂದು ತಿಳಿಸಿದ್ದರು. ಅಲ್ಲದೆ, ಆದೇಶವನ್ನು ಅಮಾನತಿನಲ್ಲಿಡುವ ಭರವಸೆ ನೀಡಿದ್ದರು.
ಶುಕ್ರವಾರ (ಜೂ.14) ಭರವಸೆಗಳ ಸಮಿತಿ ಸಭೆ ನಡೆಸಲಾಯಿತು. ಈ ವೇಳೆ ಸರ್ಕಾರ ನೀಡಿದ ಭರವಸೆಯಂತೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾಹಿತಿ ತಿಳಿಯಿತು. ಇದರಿಂದ ಮನನೊಂದು ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಹಿಂದಿನ ವಿಶೇಷ ಜಿಲ್ಲಾಧಿಕಾರಿಗಳು 310 ಎಕರೆ ಪ್ರದೇಶ ಸರ್ಕಾರದ್ದು ಎಂಬ ಆದೇಶ ನೀಡಿದ್ದಾರೆ. ಬಹುತೇಕ ದಾಖಲೆಗಳು ಸುಳ್ಳು ಸೃಷ್ಟಿಗಳಾಗಿರುತ್ತವೆ ಎಂದು ತೀರ್ಪಿನಲ್ಲಿ ಹೇಳಿರುತ್ತಾರೆ. ರಾಜ್ಯದ ಹೈಕೋರ್ಟ್ ಸಹ ಇದನ್ನು ಎತ್ತಿ ಹಿಡಿದಿದೆ. ಎಲ್ಲಾ ಆದೇಶಗಳು ಬಿ.ಎಂ.ಕಾವಲ್‌ನ 310 ಎಕರೆ ಪ್ರದೇಶ ಸರ್ಕಾರಿ ಜಮೀನು ಎಂದೇ ಬಂದಿವೆ. ಆದರೆ, 2018 ರ ಅ.23 ರಂದು ಬೆಂಗಳೂರು ದಕ್ಷಿಣ ಉಪವಿಭಾಗದ ವಿಶೇಷ ಜಿಲ್ಲಾಧಿಕಾರಿಗಳು ಹೊಸ ಆದೇಶ ನೀಡಿದರು.
ಒಂದೇ ತಿಂಗಳಲ್ಲಿ 10 ದಿನ ವಿಚಾರಣೆ ನಡೆಸಿ310 ಎಕರೆ ಪ್ರದೇಶ ಸರ್ಕಾರದ್ದಲ್ಲ, ಇಬ್ಬರು ವ್ಯಕ್ತಿಗಳಿಗೆ ಜಂಟಿಯಾಗಿ ಕಂದಾಯ ದಾಖಲೆಗಳಲ್ಲಿ 285ಎಕರೆ ಪ್ರದೇಶವನ್ನು ಖಾತೆ ವರ್ಗಾವಣೆಗೆ ಕ್ರಮ ವಹಿಸಬಹುದು ಎಂಬ ಆದೇಶ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.