ರಣತಂತ್ರ ರೂಪಿಸುತ್ತಿದೆ ಜೆಡಿಎಸ್

By Web DeskFirst Published Aug 11, 2018, 3:15 PM IST
Highlights

ಜೆಡಿಎಸ್ ಇದೀಗ ಹೊಸ ರಣತಣತ್ರವೊಂದನ್ನು ರೂಪಿಸುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿರುವ ಜೆಡಿಎಸ್ ಗೆಲುವಿಗಾಗಿ ಕಾರ್ಯತಂತ್ರ ನಡೆಸುತ್ತಿದೆ. 

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿರುವ ಜೆಡಿಎಸ್ ರಣತಂತ್ರ ರೂಪಿಸಲು  ಕರೆದಿರುವ ಸಭೆಗೆ ಪಕ್ಷದ ಪ್ರಮುಖ ಮುಖಂಡರು ಗೈರಾಗಿದ್ದ ಕಾರಣ ಸಭೆಯು ಅಪೂರ್ಣಗೊಂಡಿದ್ದು, ಸೋಮವಾರ ಮತ್ತೊಮ್ಮೆ ಚರ್ಚಿಸಲು ತೀರ್ಮಾನಿಸಲಾಗಿದೆ.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಶುಕ್ರವಾರ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಚರ್ಚಿಸಲು ಜೆಡಿಎಸ್ ವರಿಷ್ಠ ಎಚ್ .ಡಿ.ದೇವೇಗೌಡ ಅವರು ಸಭೆ ಕರೆದಿದ್ದರು. ಸಭೆಯಲ್ಲಿ ಪಕ್ಷದ  ಅಧ್ಯಕ್ಷ ಎಚ್.ವಿಶ್ವನಾಥ್, ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು. ಆದರೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಕೆಲ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. 

ಹೀಗಾಗಿ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೆ ಮುಂದೂಡಲಾಗಿದೆ. ಸೋಮವಾರ ಮತ್ತೊಮ್ಮೆ ಸಮಾಲೋಚನೆ ನಡೆಸಿ ಚುನಾವಣಾ ಕಾರ್ಯತಂತ್ರದ ಕುರಿತು ಪ್ರಮುಖ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ. ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಹೊಂದಾಣಿಕೆ ಇಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿರುವುದರಿಂದ ಚುನಾವಣೆಯ ಕಾರ್ಯತಂತ್ರ ರೂಪಿಸಬೇಕಿರುವ ಕುಮಾರಸ್ವಾಮಿ ಉಪಸ್ಥಿತಿ ಅಗತ್ಯ. 

ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವ ಕುರಿತು ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರು. ಹೀಗಾಗಿ ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವ ಕಾರಣ ಕಾಂಗ್ರೆಸ್ ವಿರುದ್ಧ ಟೀಕೆ ಮಾಡದೆ ಸೌಹಾರ್ದಯುತವಾಗಿ ಚುನಾವಣೆಯನ್ನು ಎದುರಿಸಬೇಕು.  ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರು ಕಾಂಗ್ರೆಸ್‌ನೊಂದಿಗೆ ಜಿದ್ದಾಜಿದ್ದಿಗೆ ಬೀಳದೆ ಸ್ಪರ್ಧಿಸಬೇಕು. 

ಕಾಂಗ್ರೆಸ್ ಬೆಂಬಲ ಜತೆ ಸರ್ಕಾರ ರಚನೆ ಮಾಡಿರುವ ಕಾರಣ ಪಕ್ಷಕ್ಕೆ ಮುಜುಗರವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂಬ ಸಲಹೆಯನ್ನು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಸಭೆಗೂ ಮುನ್ನ ಪಕ್ಷದ ಕಚೇರಿಗೆ ಆಗಮಿಸಿದ ದೇವೇಗೌಡ ಅವರನ್ನು ಮಹಿಳಾ ಘಟಕದ  ಸದಸ್ಯರು ಪೇಟ ತೊಡಿಸಿ ಆರತಿ ಬೆಳಗುವ ಮೂಲಕ ಸ್ವಾಗತ ಮಾಡಿದ್ದು ವಿಶೇಷ ಎನಿಸಿತು. ದೇವೇಗೌಡ ಅವರನ್ನು ಸ್ವಾಗತಿಸಿದ ಪರಿ ಯಾವ ಕಾರಣಕ್ಕಾಗಿ ಎಂಬ ಕುತೂಹಲ ಕೆರಳಿಸಿತು. 

click me!