ಒವೈಸಿ ಪಕ್ಷ, ಎಸ್‌ಡಿಪಿಐ ಜತೆ ಜೆಡಿಎಸ್ ಮೈತ್ರಿ?

By Suvarna Web DeskFirst Published Mar 1, 2018, 2:05 PM IST
Highlights
  • ಹಿರಿಯ ನಾಯಕರ ಮಟ್ಟದಲ್ಲಿ ಅಲ್ಲವಾದರೂ ಎರಡನೇ ಹಂತದ ನಾಯಕರ ಮಟ್ಟದಲ್ಲಿ ಮಾತುಕತೆ
  • ಇತರೇ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಎಂಟತ್ತು ದಿನಗಳಲ್ಲಿ ಸ್ಪಷ್ಟ ನಿರ್ಧಾರ 

ಬೆಂಗಳೂರು: ಬಿಎಸ್‌ಪಿ ಮತ್ತು ಎನ್‌ಸಿಪಿ ಜತೆ ಮೈತ್ರಿ ಸಾಧಿಸಿದ ಬೆನ್ನಲ್ಲೇ ಜೆಡಿಎಸ್ ಮುಸ್ಲಿಂ ಸಮುದಾಯ ಸೆಳೆಯುವ ಉದ್ದೇಶದಿಂದ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ತೆರೆಮರೆ ಯಲ್ಲಿ ಪ್ರಯತ್ನ ನಡೆಸಿದೆ.

ಇದೇ ವೇಳೆ ಎಸ್‌ಡಿಪಿಐ ಜತೆ ಕೂಡ ಹೊಂದಾಣಿಕೆಯ ಪ್ರಯತ್ನ ನಡೆಯುತ್ತಿರುವುದು ಗೊತ್ತಾಗಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಬಗ್ಗೆ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಲು ಹಿಂಜರಿಯುತ್ತಿದ್ದಾರೆ.

ಹಿರಿಯ ನಾಯಕರ ಮಟ್ಟದಲ್ಲಿ ಅಲ್ಲವಾದರೂ ಎರಡನೇ ಹಂತದ ನಾಯಕರ ಮಟ್ಟದಲ್ಲಿ ಮಾತುಕತೆ ನಡೆದಿರುವುದಾಗಿ ತಿಳಿದು ಬಂದಿದೆ.

ಈ ನಡುವೆ ಜೆಡಿಎಸ್ ನಾಯಕರಿಗೆ ಈ ಎರಡೂ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಆತಂಕವೂ ಇದೆ. ಇದು ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಬಹುದೇನೊ ಎಂಬ ಚಿಂತೆ ವರಿಷ್ಠ ನಾಯಕರಲ್ಲಿದೆ.

ಹೀಗಾಗಿಯೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಪಕ್ಷ ಮುಸ್ಲಿಂ ಮತದಾರರನ್ನು ಸೆಳೆಯುವಲ್ಲಿ ಬಹುತೇಕ ಯಶಸ್ವಿಯಾಗಿರುವುದರಿಂದ ಅದನ್ನು ಒಡೆಯುವ ಯತ್ನದ ಭಾಗವಾಗಿ ಎಂಐಎಂ ಮತ್ತು ಎಸ್‌ಡಿಪಿಐ ಜತೆ ಹೊಂದಾಣಿಕೆ ಸೂಕ್ತ ಎಂಬ ಅಭಿಪ್ರಾಯವನ್ನು ಪಕ್ಷದ ಕೆಲವು ಮುಖಂಡರು ವರಿಷ್ಠರ ಬಳಿ ಪ್ರಸ್ತಾಪಿಸಿದ್ದಾರೆ.

ಜತೆಗೆ ಆ ಉಭಯ ಪಕ್ಷಗಳ ಮುಖಂಡರನ್ನೂ ಸಂಪರ್ಕಿಸಿ ಮಾತುಕತೆಯ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯ, ಓವೈಸಿಯ ಎಐಎಂಐಎಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎಂದರು.

8-10 ದಿನದಲ್ಲಿ ನಿರ್ಧಾರ: ಈ ನಡುವೆ ವಿಜಯಪುರದಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ಒವೈಸಿ ಸೇರಿದಂತೆ ಇತರೇ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಎಂಟತ್ತು ದಿನಗಳಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

click me!