ಸಿಎಂ-ಮಂಜೇಗೌಡ ಸಂಭಾಷಣೆ ಅಧಿಕಾರ ದುರ್ಬಳಕೆಯ ಸುಳಿವು

By Suvarna Web DeskFirst Published Mar 21, 2018, 7:00 AM IST
Highlights

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಫೋನ್‌ ಸಂಭಾಷಣೆಯನ್ನು ಗಮನಿಸಿದರೆ ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಳ್ಳಲಿದ್ದಾರೆ ಎಂದು ಜೆಡಿಎಸ್‌ ರಾಜ್ಯ ವಕ್ತಾರ ವಿ.ರಾಘವೇಂದ್ರ ರಾವ್‌ ಆರೋಪಿಸಿದ್ದಾರೆ.

ಬೆಂಗಳೂರು : ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಫೋನ್‌ ಸಂಭಾಷಣೆಯನ್ನು ಗಮನಿಸಿದರೆ ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಳ್ಳಲಿದ್ದಾರೆ ಎಂದು ಜೆಡಿಎಸ್‌ ರಾಜ್ಯ ವಕ್ತಾರ ವಿ.ರಾಘವೇಂದ್ರ ರಾವ್‌ ಆರೋಪಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡರಿಗೆ ರಾಜೀನಾಮೆ ಕೊಟ್ಟು ಚುನಾವಣೆಗೆ ನಿಲ್ಲುವಂತೆ ಸಿಎಂ ಹೇಳಿದ್ದಾರೆ. ಆರ್‌ಟಿಒ ಇಲಾಖೆಯ ಸಾಮಾನ್ಯ ನೌಕರನನ್ನು ಚುನಾವಣೆಗೆ ನಿಲ್ಲುವಂತೆ ಹೇಳುವುದು ಗಂಭೀರವಾದ ವಿಷಯವಾಗಿದ್ದು, ಸರ್ಕಾರದಲ್ಲಿ ಭ್ರಷ್ಟಾಚಾರ ವಿಪರೀತವಾಗಿದೆ. ಸರ್ಕಾರಿ ನೌಕರರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಳ್ಳುವುದು ಸಾಬೀತಾಗಿದೆ ಎಂದರು.

ಹೊಳೆನರಸೀಪುರದಲ್ಲಿ ಮಂಜೇಗೌಡರನ್ನು ಗೆಲ್ಲಿಸಲು ಮುಖ್ಯಮಂತ್ರಿಗಳು ತೀರ್ಮಾನ ಮಾಡಿದ್ದಾರೆ. 1999ರಲ್ಲಿ ಸಿದ್ದರಾಮಯ್ಯ ಸೋಲು ಅನುಭವಿಸಿದಾಗ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮುಂದೆ ಕಣ್ಣೀರು ಹಾಕಿದ್ದರು. ಆಗ ದೇವೇಗೌಡರು ಸಿದ್ದರಾಮಯ್ಯನವರಿಗೆ ಸಮಾಧಾನ ಮಾಡಿ ರಾಜಕೀಯ ಶಕ್ತಿ ನೀಡಿದ್ದರು.

ಆದರೆ ಈಗ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಮಕ್ಕಳನ್ನು ಗೆಲ್ಲಿಸಿದ್ದು ಸಾಕು ಎಂದು ಹೇಳುವ ಅವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ ಅವರು, ಹೊಳೆನರಸೀಪುರದಲ್ಲಿ ಸಾಕಷ್ಟುಅಭಿವೃದ್ಧಿಯಾಗಿರುವ ಬಗ್ಗೆ ಸಂಭಾಷಣೆಯಲ್ಲಿ ಸೋಮಣ್ಣ ಎಂಬುವರು ಹೇಳಿದ್ದಾರೆ. ಬೇಕಾದಾಗ ಹೋಗಿ ದೇವೇಗೌಡರ ಕಾಲು ಹಿಡಿದುಕೊಳ್ಳುತ್ತಾರೆ ಎಂದು ಇದೇ ವೇಳೆ ಕಿಡಿಕಾರಿದರು.

click me!