
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಒಂದು ಪಕ್ಷ ಮೈತ್ರಿ ಧರ್ಮವನ್ನು ಉಲ್ಲಂಘಿಸಿದರೆ ಅದು ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ಪತನಕ್ಕೆ ನಾಂದಿ ಹಾಡಲಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ದೇವೇಗೌಡ, ‘ಒಂದು ವೇಳೆ ಯಾರಾದರೂ ತಾವು ಎಲ್ಲರಿಗಿಂತ ಮೇಲು ಮತ್ತು ಜೊತೆಗಾರ ಪಕ್ಷದ ಮೇಲೆ ಹಿಡಿತ ಸಾಧಿಸುವ ಯೋಚನೆ ಹೊಂದಿದ್ದರೆ ಅದು ಅಂತಿಮವಾಗಿ ದುರಂತಕ್ಕೆ ಕಾರಣವಾಗಲಿದ್ದು, ಕೋಮುವಾದಿ ಶಕ್ತಿಗಳಿಗೆ ಪ್ರಯೋಜನವಾಗಲಿದೆ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರು ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮವನ್ನು ಉಲ್ಲಂಘಿಸುತ್ತಿದೆ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸುಗಮವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದ ಬೆನ್ನಲ್ಲೇ, ದೇವೇಗೌಡರು ಮೈತ್ರಿ ಧರ್ಮ ಪರಿಪಾಲನೆಯ ಮಾತನಾಡಿದ್ದಾರೆ.
ಅಲ್ಲದೇ, ಕರ್ನಾಟಕದಲ್ಲಿ ಕೋಮುವಾದಿ ಶಕ್ತಿಗಳನ್ನು ದೂರ ಇಡುವ ಉದ್ದೇಶ ದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಮ್ಮಿಶ್ರ ಸರ್ಕಾರದ ಸುಗಮ ಕಾರ್ಯನಿರ್ವ ಹಣೆಗಾಗಿ ಸೂತ್ರವೊಂದನ್ನು ಕಂಡುಕೊಳ್ಳುವ ನಿಟ್ಟಿನಿಂದ ಕಾರ್ಯ ನಿರ್ವಹಿಸುತ್ತಿವೆ ಎಂದು ದೇವೇಗೌಡ ಹೇಳಿದ್ದಾರೆ. ಇದೇ ವೇಳೆ, ಸಮ್ಮಿಶ್ರ ಸರ್ಕಾರ ಸುಗಮವಾಗಿ ಕಾರ್ಯನಿರ್ವಹಿಸು ವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಸಕ್ತಿ ಹೊಂದಿದ್ದಾರೆ ಎಂದು ಬಸವರಾಜ ಹೊರಟ್ಟಿ ಅವರ ಹೇಳಿಕೆಯನ್ನು ದೇವೇಗೌಡ ತಳ್ಳಿಹಾಕಿದ್ದಾರೆ.
‘ಸಿದ್ದರಾಮಯ್ಯ ಅವರಿಗೆ ಇಂತಹ ಉದ್ದೇಶ ಇಲ್ಲ. ಏಕೆಂದರೆ ಅವರು 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇದ್ದವರು. ಹೀಗಾಗಿ ಸಹಜವಾಗಿಯೇ ತಮ್ಮ ಆಡಳಿತ ಅವಧಿಯಲ್ಲಿ ಜಾರಿಗೊಳಿಸಿದ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಬಯಸಿದ್ದಾರೆ.
ಕೆಲವರಿಗೆ ಈ ರೀತಿ ಹೇಳುವ ಅಧಿಕಾರ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವೆಲ್ಲಾ ಸಹಜ ಮತ್ತು ಎಲ್ಲಾ ಪಕ್ಷಗಳಲ್ಲೂ ಇರುತ್ತವೆ’ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.