
ಬೆಂಗಳೂರು [ಜೂ.21] : ಮೈತ್ರಿ ಸರ್ಕಾರ ರಚನೆಗೆ ನಾವೇನು ಮುಂದಾಗಿರಲಿಲ್ಲ. ದೆಹಲಿಯ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ಗುಲಾಮ್ ನಬಿ ಅಜಾದ್ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರೇ ಮುಂದಾಗಿ ಜೆಡಿಎಸ್ ಸರ್ಕಾರ ರಚನೆ ಮಾಡುವಂತೆ ಹೇಳಿದ್ದರು’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
‘ಜೆಡಿಎಸ್ ಜತೆಗಿನ ಮೈತ್ರಿಯಿಂದಾಗಿಯೇ ಲೋಕಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ಸಿಗೆ ಸೋಲಾಯಿತು. ಈ ಮೈತ್ರಿ ಮುಂದುವರಿದರೆ ಕಾಂಗ್ರೆಸ್ಸಿಗೆ ಕಷ್ಟವಾಗುತ್ತದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಲಹೆ ಮಾಡಿದ್ದಾರೆನ್ನಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಗುರುವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಜೆಡಿಎಸ್ ನಡೆದುಕೊಂಡಿಲ್ಲ. ಪಕ್ಷದಿಂದ ಯಾವುದೇ ರೀತಿಯಲ್ಲಿಯೂ ಸಮ್ಮಿಶ್ರ ಸರ್ಕಾರಕ್ಕೆ ಸಮಸ್ಯೆಯಾಗುವುದಿಲ್ಲ. ಸರ್ಕಾರ ರಚನೆ ಮಾಡುತ್ತೇವೆ ಎಂದು ನಾವೇನು ಮುಂದಾಗಿರಲಿಲ್ಲ. ಕಾಂಗ್ರೆಸ್ ವರಿಷ್ಠರೇ ಮುಂದಾಗಿ ಸಮ್ಮಿಶ್ರ ಸರ್ಕಾರ ರಚಿಸಿದ್ದಾರೆ ಎಂದು ತೀಕ್ಷ್ಣವಾಗಿ ಹೇಳಿದರು.
ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಚಾರ ಪ್ರಸ್ತಾಪಕ್ಕೆ ಬಂದಾಗಲೂ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆ ಹುದ್ದೆ ನೀಡುವಂತೆ ತಿಳಿಸಿದ್ದೆ. ಆದರೆ ಕಾಂಗ್ರೆಸ್‌ನ ವರಿಷ್ಠರೇ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ ಎಂದು ತಿಳಿಸಿದ್ದರು.
ನಾವೇನೂ ಹೋಗಿ ಕೇಳಿರಲಿಲ್ಲ ಎಂದು ತಿಳಿಸಿದರು. ಜೆಡಿಎಸ್ ಪಕ್ಷದ ಯಾವೊಬ್ಬ ಸದಸ್ಯರಿಂದಲೂ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗುವುದಿಲ್ಲ. ಕಾಂಗ್ರೆಸ್ ಸದಸ್ಯರೇ ಮೈತ್ರಿ ಸರ್ಕಾರದ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ನಮ್ಮ ಪಕ್ಷದ ಒಂದು ಸಚಿವ ಸ್ಥಾನವನ್ನು ಪಕ್ಷೇತರ ಶಾಸಕರಿಗೆ ಬಿಟ್ಟು ಕೊಡಲಾಗಿದೆ ಎಂದು ತುಸು ಏರಿದ ಧ್ವನಿಯಲ್ಲೇ ಹೇಳಿದರು.
ದೆಹಲಿಗೆ ತೆರಳಿದ್ದ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ ಮೈತ್ರಿ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುವ ರೀತಿಯಲ್ಲಿ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂಬುದಾಗಿ ಮನವಿ ಮಾಡಿಕೊಂಡಿ ದ್ದೇನೆ. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ ವಿದ್ಯಮಾನವನ್ನಾಗಲಿ, ಚುನಾವಣೆಯಲ್ಲಿಸೋಲು-ಗೆಲುವಿನ ವಿಚಾರವನ್ನಾಗಲಿ, ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿಯನ್ನಾಗಲಿ ಪ್ರಸ್ತಾಪಿಸಿಲ್ಲ.
ಅಲ್ಲದೇ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಅವರನ್ನು ಭೇಟಿಯಾಗಿಲ್ಲ ಎಂದು ಗೌಡರು ಇದೇ ವೇಳೆ ಸ್ಪಷ್ಟಪಡಿಸಿದರು.
ಚುನಾವಣೆಯಲ್ಲಿ ಸೋಲು- ಗೆಲುವು ಸಹಜ. ಇದರಿಂದ ಮನ ನೊಂದು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ರಾಹುಲ್ ಗಾಂಧಿಗೆ ಸಲಹೆ ನೀಡಲಾಗಿದೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಮತ್ತೆ ಶ್ರಮ ವಹಿಸಬೇಕು. ಸೋಲಿನಿಂದ ಹತಾಶೆಯಾಗದೆ ಆಡಳಿ ತಾರೂಢ ಬಿಜೆಪಿ ನೇತೃತ್ವದ ಸರ್ಕಾರ ನಿರೀಕ್ಷಿಸದ ರೀತಿಯಲ್ಲಿಪಕ್ಷವನ್ನು ಕಟ್ಟಬೇಕು ಎಂಬ ಸಲಹೆಗಳನ್ನು ನೀಡಿದ್ದೇನೆ ಎಂದರು.
ಮುಂದಿನ ದಿನಗಳಲ್ಲಿ ಮತ್ತೊಂದು ಸುತ್ತಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಲಿದ್ದು, ಅದಕ್ಕಾಗಿ ಸಿದ್ಧ ಞವಾಗುವಂತೆ ಹೇಳಿದ್ದೇನೆಯೇ ಹೊರತು ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂಬು ದಾಗಿ ಹೇಳಿಲ್ಲ ಎಂದು ಗೌಡರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.