ಹಿರಿಯ ನಾಯಕರೋರ್ವರ ಭೇಟಿ ಮಾಡಿದ ವಿಶ್ವನಾಥ್ : ಕುತೂಹಲ ಮೂಡಿಸಿದ ನಡೆ

By Web DeskFirst Published Jun 20, 2019, 11:57 AM IST
Highlights

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಚ್.ವಿಶ್ವನಾಥ್ ಇದೀಗ ಹಿರಯ ನಾಯಕರೋರ್ವರನ್ನು ಭೇಟಿ ಮಾಡಿದ್ದು, ಈ ಭೇಟಿ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ. 

ಬೆಂಗಳೂರು [ಜೂ.20] : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿ ಬುಧವಾರ ರಹಸ್ಯ ಚರ್ಚೆ ನಡೆಸಿದ್ದು, ಕುತೂಹಲ ಕೆರಳಿಸಿದೆ. ಮಂಗಳವಾರ ಎಚ್.ವಿಶ್ವನಾಥ್ ಅವರು ಲಕ್ಕಸಂದ್ರದ ರಾಮಲಿಂಗಾ ರೆಡ್ಡಿ ಅವರ ಮನೆಗೆ ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿ ದರು. 

ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗದೆ ಬಹಿರಂಗವಾಗಿ ನಾಯಕರ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದ ರಾಮಲಿಂಗಾ ರೆಡ್ಡಿ ಹಾಗೂ ಜೆಡಿಎಸ್‌ನಲ್ಲಿ ಸಚಿವ ಸ್ಥಾನ ಸಿಗದೆ ಪಕ್ಷದ ನಡೆಗಳ ಬಗ್ಗೆ ಬಹಿರಂಗ ಟೀಕೆ ಮಾಡುತ್ತಿರುವ ವಿಶ್ವನಾಥ್ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮ ಲಿಂಗಾ ರೆಡ್ಡಿ, ನಾನು ಸಚಿವ ಸ್ಥಾನ ಕೊಡುವಂತೆ ಯಾರ ಮನೆ ಬಾಗಿಲಿಗೂ ಹೋಗಿ ಕೇಳುವುದಿಲ್ಲ. ಸಚಿವ ಸ್ಥಾನದ ಆಸೆ ನನಗಿಲ್ಲ. ಸಚಿವ ಸ್ಥಾನಗಳ ಹಂಚಿಕೆಯಲ್ಲಿ ತಾರತಮ್ಯ ಆಗಿರುವ ಬಗ್ಗೆ ಮಾತನಾಡಿದ್ದೇನೆ ಅಷ್ಟೇ ಎಂದರು. ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿದ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಲ್ಲರೂ ದೆಹಲಿಗೆ ಹೋಗಿದ್ದು ಏಕೆ ಎಂದು ನನಗೆ ಗೊತ್ತಿಲ್ಲ. ಅವರೆಲ್ಲಾ ನಮಗೆ ಹೇಳಿ ದೆಹಲಿಗೆ ಹೋಗುತ್ತಾರಾ ಎಂದು ಪ್ರಶ್ನಿಸಿದರು. 

ಇದೇ ವೇಳೆ ಮಾಜಿ ಸಚಿವ ರೋಷನ್ ಬೇಗ್ ಅಮಾನತು ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಜಿಂದಾಲ್ ಜಮೀನು ಪರಭಾರೆ ವಿವಾದದ ಬಗ್ಗೆ ಮಾತನಾಡಿದ ಅವರು, ಬಳ್ಳಾರಿ ಗಣಿಗಾರಿಕೆ ವಿಚಾರಕ್ಕೂ ಜಿಂದಾಲ್ ವಿಚಾರಕ್ಕೂ ಹೋಲಿಕೆ ಸರಿಯಲ್ಲ. ಈ ವಿಚಾರ ನನಗಿಂತ ಎಚ್.ಕೆ. ಪಾಟೀಲ್ ಅವರಿಗೆ ಚೆನ್ನಾಗಿ ಗೊತ್ತು. ಈ ವಿಚಾರ ಎಲ್ಲ ಗೊತ್ತಿರುವುದಕ್ಕೆ ನಾನೇನು ಸಚಿವ ಸಂಪುಟದಲ್ಲಿ ಇಲ್ಲ ಎಂದು ಹೇಳಿದರು.

click me!