ಹೃದಯಕ್ಕೂ ಯೋಗಕ್ಕೂ ಏನು ಸಂಬಂಧ?

By Web Desk  |  First Published Jun 20, 2019, 11:22 AM IST

ಜೂ. 21 ರಂದು ಅಂತರಾಷ್ಟ್ರೀಯ ಯೋಗ ದಿನ | ಈ ಬಾರಿಯ ವಿಶ್ವ ಯೋಗ ದಿನದ ಘೋಷವಾಕ್ಯ ‘ಹೃದಯಕ್ಕಾಗಿ ಯೋಗ’ | 


ಯೋಗಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ದೊರಕಿದಂದಿನಿಂದ ವಿಶ್ವ ಯೋಗದಿನವನ್ನು ಪ್ರತಿ ವರ್ಷದ ಜೂ.21 ರಂದು ಅಭಿವೃದ್ಧಿಗಾಗಿ ಯೋಗ, ಶಾಂತಿಗಾಗಿ ಯೋಗ ಹೀಗೆ ಒಂದೊಂದು ಘೋಷವಾಕ್ಯದಡಿ ಆಚರಿಸಿಕೊಂಡು ಬರಲಾಗುತ್ತಿದೆ.

ಈ ಬಾರಿಯ ವಿಶ್ವಯೋಗ ದಿನದ ಘೋಷವಾಕ್ಯ ‘ಹೃದಯಕ್ಕಾಗಿ ಯೋಗ’ ಎಂಬುದಾಗಿದ್ದು, ಈ ಹಿನ್ನೆಲೆಯಲ್ಲಿ ಹೃದಯ ಹಾಗೂ ಯೋಗಕ್ಕೆ ಇರುವ ಸಂಬಂಧ ಏನು? ಹೃದಯದ ಆರೋಗ್ಯವನ್ನು ಯೋಗ ಹೇಗೆ ಕಾಪಾಡಬಲ್ಲದು ಎಂಬ ಮಾಹಿತಿ ಇಲ್ಲಿದೆ.

Tap to resize

Latest Videos

undefined

ಯೋಗ ಪಟು ಸಮೀಕ್ಷಾ ಸಾಧನೆಗೆ ಕರುನಾಡ ಸಲಾಂ!

ಹಿಡಿಯಗಲದ ಹೃದಯಕ್ಕೆ ಇಡೀ ವಿಶ್ವವನ್ನೇ ಒಂದುಗೂಡಿಸುವ ಶಕ್ತಿ ಇರುವುದಂತೂ ಸತ್ಯ. ಕೇವಲ ಕುತ್ತಿಗೆಯ ಮೇಲ್ಭಾಗದ ಮಾತಿಗಿಂತ ಹೃದಯಪೂರ್ವಕ ಮಾತುಗಳಲ್ಲಿ ಹೆಚ್ಚಿನ ಮಾಧುರ್ಯವಿರುತ್ತದೆ. ಪ್ರಾಮಾಣಿಕವಾಗಿರುವ ಇಂತಹ ಹೃದಯಾಂತರಾಳದ ಮಾತುಗಳು ಹೆಚ್ಚು ದೃಢವಾಗಿಯೂ ಇರುತ್ತದೆ. ಜಗಳ, ಯುದ್ಧಗಳಂತಹ ದೇಶದ ಆಂತರಿಕ, ಬಾಹ್ಯ ಕಲಹಗಳಿಗೆ ಹೃದಯ ವೈಶಾಲ್ಯತೆಯ ನಡೆ ಎಂಬುದು ರಾಮಬಾಣ.

ಹೀಗಾಗಿಯೇ ಈ ಬಾರಿಯ ವಿಶ್ವಯೋಗ ದಿನದ ಘೋಷವಾಕ್ಯ ‘ಹೃದಯಕ್ಕಾಗಿ ಯೋಗ’ ಎಂಬುದು ಹೆಚ್ಚು ಅರ್ಥಪೂರ್ಣವಾಗಿದೆ. ವಸುಧೈವ ಕುಟುಂಬಕಂ (ಇಡೀ ವಿಶ್ವವೇ ಒಂದು ಕುಟಂಬ) ಎಂದು ಸಾರಿದ ಭಾರತೀಯ ಸಂಸ್ಕೃತಿಯಲ್ಲಿ ಇಂತಹದ್ದೊಂದು ಹೃದಯ ವೈಶಾಲ್ಯತೆ ಕಂಡುಬರುತ್ತದೆ. ಆದ್ದರಿಂದಲೇ ವಿಶ್ವದ ಹತ್ತು ಹಲವು ನಾಗರಿಕತೆಗಳು ಸಂಪೂರ್ಣ ಅವಸಾನ ಹೊಂದಿದ್ದರೂ, ನೂರಾರು ಪರಕೀಯರು ಭಾರತದ ಮೇಲೆ ದಂಡೆತ್ತಿ ಬಂದರೂ ಭಾರತೀಯತೆ ಎಂಬುದು ಋಷಿಮುನಿಗಳ ಕಾಲದಿಂದಲೂ ಹಾಗೆಯೇ ಉಳಿದುಕೊಂಡು ಬಂದಿದೆ. 

ಒಂದು ಒಳ್ಳೆಯ ಕೆಲಸ ಮಾಡಲು ಮನಸ್ಸಿನಷ್ಟೇ ಹೃದಯವೂ ಸಹಕಾರಿ. ಹೃದಯವು ದುರ್ಬಲವಾಗಿ ಬಿಟ್ಟರೆ ಮನುಷ್ಯ ಕಂಗೆಟ್ಟು ಹೋಗುತ್ತಾನೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಮಹಾಭಾರತದಲ್ಲಿ ಕಂಡುಬರುವ ಅರ್ಜುನ. ಯುದ್ಧಭೂಮಿಯಲ್ಲಿ ಕೆಟ್ಟ ಶಕ್ತಿಗಳು ಎದುರಿಗೆ ಕಾಣುತ್ತಿದ್ದರೂ, ಅರ್ಜುನನ ಹೃದಯದ ದೌರ್ಬಲ್ಯದಿಂದಾಗಿ ಆ ಕೆಟ್ಟ ಶಕ್ತಿಗಳೂ ಅವನಿಗೆ ಒಳ್ಳೆಯದಾಗಿಯೇ ಕಂಡಿತು.

ವಿಶ್ವ ಯೋಗ ದಿನ ಸಂಭ್ರಮಿಸುವ 7 ವಿಧಾನಗಳು : ನೀವೇನು ಮಾಡಬಹುದು?

ಮುಂಭಾಗದ ಶತ್ರುಜನರಲ್ಲೂ ಈತನ ಹೃದಯ ತನ್ನ ಸಂಬಂಧಿಗಳನ್ನೇ ಕಾಣಲು ಆರಂಭಿಸಿತು. ಹೀಗಾಗಿಯೇ ಆತ ಯುದ್ಧರಂಗಕ್ಕೆ ಬೆನ್ನು ಹಾಕಿ ಕುಳಿತುಕೊಳ್ಳುವಂತಾಯಿತು. ಈ ಸಂದರ್ಭದಲ್ಲಿ ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯ ಮುಖಾಂತರ ‘ಕ್ಷುದ್ರಂ ಹೃದಯ ದೌರ್ಬಲ್ಯಂ ತಕ್ತ್ವ ಉತ್ತಿಷ್ಠ ಪರಂತಪ’ ಎಂದು ಹೃದಯ ದೌರ್ಬಲ್ಯವನ್ನು ಬಿಟ್ಟು ಮೇಲೇಳಲು ಹುರುದುಂಬಿಸಿ ಅರ್ಜುನನ ಕಣ್ಣು ತೆರೆಸಿದ.

ನಂತರ ಅರ್ಜುನನ ಹೃದಯವೂ ದೃಢಗೊಂಡು ಶತ್ರುಗಳನ್ನು ಸೋಲಿಸಿ ಯುದ್ಧವನ್ನು ಗೆದ್ದ.ಈ ಮೂಲಕ ಹೃದಯದಲ್ಲಿನ ನಿರ್ಧಾರದಿಂದ ದುಷ್ಟಶಕ್ತಿಗಳನ್ನು ಕಿತ್ತೊಗೆಯುವುದು ಅಸಾಧ್ಯವೇನಲ್ಲ ಎಂದು ತೋರಿಸಿದ. ಇದಕ್ಕೆಲ್ಲಾ ಮೂಲ ಕಾರಣ ಹೃದಯವೆಂಬ ಹಿಡಿಯಗಲದ ವಸ್ತುವೇ ಆಗಿದೆ. 

ಇಂದಿನ ದಿನಗಳಲ್ಲಿ ಅಪಘಾತವಾದರೆ ಅದನ್ನು ಮೊಬೈಲಿನಲ್ಲಿ ಸೆರೆಹಿಡಿಯುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಯಾರೋ ಸತ್ತರೆ ನಮಗೇನು ಎಂಬ ಸ್ವಾರ್ಥಭಾವವನ್ನು ನಮ್ಮ ಹೃದಯದಲ್ಲಿ ತುಂಬಿಸಿಕೊಳ್ಳುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ಹೃದಯದ ಕಾಠಿಣ್ಯ ಹೋಗಲಾಡಿಸಿ, ನಮ್ಮ ಹತ್ತಿರದಲ್ಲೇ ಇರಲಿ, ದೂರದಲ್ಲೇ ಇರಲಿ ಹೃದಯವಿದ್ರಾವಕ ಘಟನೆಗಳು ನಡೆದಾಗ ಅದಕ್ಕೆ ಸೂಕ್ತವಾಗಿ ಸ್ಪಂದಿಸುವುದರ ಮೂಲಕ ಭಾರತೀಯ ಪರಂಪರೆಯ ಹೃದಯ ವೈಶಾಲ್ಯತೆಯನ್ನು ಇಡೀ ವಿಶ್ವಕ್ಕೆ ಸಾರುವಂತವರಾಗಬೇಕು.  ಈ ಹಿನ್ನೆಲೆಯಲ್ಲಿ ಈ ಬಾರಿ ‘ಹೃದಯಕ್ಕಾಗಿ ಯೋಗ’ ಎಂಬ ವಿಶ್ವ ಯೋಗದಿನದ ಘೋಷವಾಕ್ಯ ನಿಜಕ್ಕೂ ಅರ್ಥಪೂರ್ಣವಾಗಿದೆ. 

ಯೋಗದಿಂದ ಆರೋಗ್ಯ ರಕ್ಷಣೆ ಹೇಗೆ? ಮೂಲ ಅಂಶಗಳು ಇಲ್ಲಿವೆ

ಮಾನವನ ದೈಹಿಕ ಆರೋಗ್ಯ ಸದೃಢವಾಗಿರಬೇಕು ಎಂದರೆ ಹೃದಯ ಆರೋಗ್ಯಪೂರ್ಣವಾಗಿ ಕೆಲಸ ಮಾಡಬೇಕು. ಹೃದಯಕ್ಕೆ ರಕ್ತ ಪೂರೈಸುವ, ಹೃದಯದಿಂದ ರಕ್ತ ಹೊರ ಕಳಿಸುವ ಅಪಧಮನಿ, ಅಭಿಧಮನಿಗಳು
ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಜೀವಿಯ ಆಯಸ್ಸು ಮುಗಿದಂತೆಯೇ. ಇವುಗಳು ಸರಿಯಾಗಿರಲು ಪ್ರಕೃತಿಗೆ ಪೂರಕವಾದ ಚಟುವಟಿಕೆಯನ್ನೇ ಮಾಡುತ್ತಿರಬೇಕು. ಧೂಮಪಾನ, ಮದ್ಯಪಾನ ಮೊದಲಾದ ಕೆಟ್ಟ ಚಟಗಳಿಂದ ದೂರವಿರಬೇಕು.

ದುರದೃಷ್ಟವಶಾತ್ ಇಂದಿನ ದಿನದಲ್ಲಿ ಹದಿಹರೆಯದಲ್ಲೂ ಹಾರ್ಟ್‌ಫೇಲ್, ಹಾರ್ಟ್ ಅಟ್ಯಾಕ್ ಗಳಂತಹ ಗಂಭೀರ ಹೃದ್ರೋಗಗಳು ಕಂಡುಬರುತ್ತಿರುವುದು ಆತಂಕಕಾರಿ. ಈ ಎಲ್ಲ ಹೃದಯ ಸಂಬಂಧಿ ದೈಹಿಕ, ಮಾನಸಿಕ ಕ್ಲೇಶ ದೂರವಾಗಲೂ ಬಾಲ್ಯದಿಂದಲೂ ಯೋಗಾಭ್ಯಾಸವನ್ನು ಮಾಡುವುದು ಅತ್ಯಂತ ಸಹಕಾರಿ. 

- ಸುಧೀಂದ್ರ ಜಮ್ಮಟ್ಟಿಗೆ 

click me!