
ಬೆಂಗಳೂರು : ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಬೇಸರಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.
ಬರುವ 2-3 ದಿನಗಳಲ್ಲಿ ಅಥವಾ ಹೆಚ್ಚೆಂದರೆ ಒಂದು ವಾರದೊಳಗೆ ವಿಶ್ವನಾಥ್ ಅವರು ಪಕ್ಷದ ವರಿಷ್ಠ ನಾಯಕ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ರಾಜೀನಾಮೆ ಸ್ವೀಕರಿಸುವಂತೆ ಮನವೊಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಎರಡು ಬಾರಿ ವಿಶ್ವನಾಥ್ ಅವರು ರಾಜೀನಾಮೆ ನೀಡಲು ಮುಂದಾಗಿದ್ದರು.
ಆ ಬಗ್ಗೆ ಬಹಿರಂಗ ವಾಗಿಯೂ ಪ್ರಸ್ತಾಪಿಸಿದ್ದರು. ಆದರೆ, ದೇವೇಗೌಡರು ಇದಕ್ಕೆ ಒಪ್ಪಿರಲಿಲ್ಲ. ಈ ಬಾರಿ ದೇವೇಗೌಡರು ಒಪ್ಪದಿದ್ದರೂ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯದಿರಲು ನಿರ್ಧರಿಸಿದ್ದಾರೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ. ರಾಜ್ಯಾಧ್ಯಕ್ಷರಾಗಿದ್ದರೂ ಅವರನ್ನು ಸರ್ಕಾರದ ಸಮನ್ವಯ ಸಮಿತಿ ಸದಸ್ಯರನ್ನಾಗಿ ಮಾಡಿರಲಿಲ್ಲ. ಈ ಬಗ್ಗೆ ಹಲವು ಬಾರಿ ಅವರು ಪ್ರಸ್ತಾಪಿಸಿದ್ದರು.
ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ರಾಜ್ಯಾಧ್ಯಕ್ಷರನ್ನು ಹೊರಗಿಟ್ಟರೆ ಅದು ಹೇಗೆ ಸಮನ್ವಯ ಸಮಿತಿ ಆಗುತ್ತದೆ ಎಂಬ ಧಾಟಿಯಲ್ಲೇ ಖಾರವಾಗಿ ಪ್ರಶ್ನಿಸಿದ್ದರು. ಆದರೆ, ಈ ಬಗ್ಗೆ ದೇವೇಗೌಡರಾಗಲಿ ಅಥವಾ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರಾಗಲಿ ಚಕಾರ ಎತ್ತಿರಲಿಲ್ಲ. ಇದು ಕೂಡ ವಿಶ್ವನಾಥ್ ಅವರಿಗೆ ಬೇಸರ ಉಂಟು ಮಾಡಿದೆ.
ವಿಶ್ವನಾಥ್ ಕೆಲ ತಿಂಗಳುಗಳ ಹಿಂದೆ ತಮ್ಮ ಅನಾರೋಗ್ಯದ ಕಾರಣಕ್ಕಾಗಿ ರಾಜೀನಾಮೆ ನೀಡಲು ಮುಂದಾಗಿದ್ದರು. ಆಗ ದೇವೇಗೌಡರು ನಿರಾಕರಿಸಿದ್ದರಿಂದ ಸುಮ್ಮನಾಗಿದ್ದರು. ನಂತರ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ಸಿದ್ಧರಾಗಿದ್ದರು. ಆಗಲೂ ಗೌಡರು ಒಪ್ಪಿರಲಿಲ್ಲ. ನಂತರ ಅವರು ಸಮನ್ವಯ ಸಮಿತಿ ಬಗ್ಗೆ ಟೀಕಿಸಿದ್ದರು. ಇತ್ತೀಚೆಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್‌ನ ಸಚಿವ ಸಾ.ರಾ.ಮಹೇಶ್ ವಿರುದ್ಧ ಹರಿಹಾಯ್ದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.