ಬಿಜೆಪಿಗೆ ಸಿಗುತ್ತಾ ಸರ್ಕಾರ ರಚನೆಯ ಅವಕಾಶ..?

By Web DeskFirst Published May 19, 2019, 8:00 AM IST
Highlights

ಕರ್ನಾಟಕ ರಾಜಕೀಯದಲ್ಲಿ ಇದೀಗ ಸಂಪುಟ ವಿಸರ್ಜನೆ ಚರ್ಚೆಗಳು ಜೋರಾಗಿದೆ. ಆದರೆ ಅಂತಿಮ ತೀರ್ಮಾನ ಮಾತ್ರ ರಾಜ್ಯಪಾಲರಿಗೆ ಸೇರಿದ್ದಾಗಿದೆ. 

ಬೆಂಗಳೂರು :  ರಾಜ್ಯ ಸಮ್ಮಿಶ್ರ ಸರ್ಕಾರ ವಿಸರ್ಜಿಸುವುದು ಸೂಕ್ತ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿರಬಹುದು. ಆದರೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಸಂಪುಟ ವಿಧಾನಸಭೆ ವಿಸರ್ಜಿಸಲು ನಿರ್ಧರಿಸಿದರೂ, ಅದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವಿರುವುದು ರಾಜ್ಯಪಾಲರಿಗೆ!

ವಿಧಾನಸಭೆ ವಿಸರ್ಜನೆ ಮಾಡಬೇಕಾದರೆ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ಪಾತ್ರ ಬಹಳ ಮುಖ್ಯ. ಈ ನಿರ್ಧಾರ ಕೈಗೊಳ್ಳಲು ಸಂವಿಧಾನಿಕ ಪ್ರಕ್ರಿಯೆ ಅನುಸರಿಬೇಕಾಗುತ್ತದೆ. ಏಕೆಂದರೆ, ಪರಿಪೂರ್ಣ ಬಹುಮತ ಪಡೆದ ಪಕ್ಷವೊಂದು ಅಧಿಕಾರದಲ್ಲಿದ್ದು, ವಿಧಾನಸಭೆ ವಿಸರ್ಜಿಸುವ ತೀರ್ಮಾನ ಕೈ ಗೊಂಡರೆ ಆಗ ರಾಜ್ಯಪಾಲರ ಪಾತ್ರ ಹೆಚ್ಚಿರುವುದಿಲ್ಲ. 

ಸರ್ಕಾರದ ನಿರ್ಧಾರವನ್ನು ನೇರವಾಗಿ ಅನುಮೋದಿಸಬೇಕಾಗುತ್ತದೆ. ಆದರೆ, ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಇಂತಹ ನಿರ್ಧಾರ ಸಾಧ್ಯವಿಲ್ಲ. ವಿಧಾನಸಭೆ ವಿಸರ್ಜನೆಯ ತೀರ್ಮಾನ ಎರಡು ಪಕ್ಷಗಳ ಒಮ್ಮತದ ನಿರ್ಧಾರವೇ ಎಂದು ಪರಿಶೀಲಿಸಬೇಕಾಗುತ್ತದೆ ಎನ್ನುತ್ತಾರೆ ಸಂವಿಧಾನ ತಜ್ಞರು. 

ಪ್ರಕ್ರಿಯೆ ಹೇಗೆ?: ಹೊರಟ್ಟಿ ಹೇಳಿಕೆಯಂತೆ ಸರ್ಕಾರ ವಿಧಾನಸಭೆ ವಿಸರ್ಜನೆಯ ತೀರ್ಮಾನ ಕೈಗೊಂಡರೆ ಆಗ ಪ್ರಕ್ರಿಯೆ ಹೀಗಿರಬೇಕಾಗುತ್ತದೆ- ಮೊದಲಿಗೆ ಮುಖ್ಯಮಂತ್ರಿಯವರು ಸಚಿವ ಸಂಪುಟ ಸಭೆ ನಡೆಸಬೇಕು. ವಿಸರ್ಜನೆ ನಿರ್ಧಾರವನ್ನು ಕೈಗೊಳ್ಳಬೇಕು. ಅನಂತರ ವಿಧಾನಸಭೆ ವಿಸರ್ಜನೆ ಮಾಡಲು ಸಂಪುಟ ತೀರ್ಮಾನ ಕೈಗೊಂಡಿದೆ ಎಂಬುದನ್ನು ಉಲ್ಲೇಖಿಸಿ ಮುಖ್ಯಮಂತ್ರಿಯವರು ರಾಜ್ಯಪಾಲರಿಗೆ ಪತ್ರ ಬರೆದು, ವಿಧಾನಸಭೆ ವಿಸರ್ಜಿಸುವ ಮನವಿ ಮಾಡಬೇಕು. ಈ ಪತ್ರದಲ್ಲಿ ಸರ್ಕಾರ ವಿಸರ್ಜಿಸಲು ಸಕಾರಣವನ್ನು ನೀಡಬೇಕು.

ರಾಜ್ಯಪಾಲರಿಗೆ ಸಮ್ಮಿಶ್ರ ಸರ್ಕಾರವು ನೀಡಿದ ಕಾರಣ ಒಪ್ಪಿಗೆಯಾದರೆ ಇದನ್ನು ಒಪ್ಪುವ ಮುನ್ನ ಪ್ರತಿಪಕ್ಷದ ಸ್ಥಾನ ಬಲವನ್ನು ಗಮನಿಸ ಬೇಕಾಗುತ್ತದೆ. ಪ್ರತಿಪಕ್ಷಕ್ಕೆ ಹೆಚ್ಚಿನ ಸಂಖ್ಯಾಬಲವಿಲ್ಲದಿದ್ದರೆ ಆಗ ನೇರವಾಗಿ ವಿಸರ್ಜನೆ ಪ್ರಕ್ರಿಯೆ ಆರಂಭಿಸಬಹುದು. ಪ್ರತಿಪಕ್ಷದ ಸಂಖ್ಯಾಬಲ ಉತ್ತಮವಿದ್ದರೆ ಅಥವಾ ಆ ಪಕ್ಷ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿದ್ದರೆ ಆಗ ವಿಧಾನಸಭೆ ವಿಸರ್ಜನೆ ಕುರಿತು ಆ ಪಕ್ಷದ ಶಾಸಕಾಂಗ ಪಕ್ಷದ ನಾಯಕನ ಅಭಿಪ್ರಾಯ ಕೇಳಬೇಕಾಗುತ್ತದೆ. 

ಕರ್ನಾಟಕದ ಸಂದರ್ಭದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದೆ. ಹೀಗಾಗಿ ಬಿಜೆಪಿ ಅಭಿಪ್ರಾಯವನ್ನು ರಾಜ್ಯಪಾಲರು ಕೇಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ರಚನೆಯ ಆಸಕ್ತಿ ವ್ಯಕ್ತಪಡಿಸಿದರೆ, ಆಗ ಆ ಪಕ್ಷಕ್ಕೆ ಅವಕಾಶ ನೀಡಬೇಕಾಗುತ್ತದೆ. ಒಂದು ವೇಳೆ ಬಿಜೆಪಿ ಸರ್ಕಾರ ರಚನೆಗೆ ಹಿಂದೇಟು ಹಾಕಿದರೆ ಅಥವಾ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ವಿಫಲವಾದರೆ ರಾಜ್ಯಪಾಲರು 90 ದಿನಗಳ ಕಾಲ ವಿಧಾನಸಭೆಯನ್ನು ಅಮಾನತಿನಲ್ಲಿಡುತ್ತಾರೆ. ಅನಂತರ ವಿಧಾನಸಭೆಯನ್ನು ವಿಸರ್ಜನೆ ಮಾಡುವರು ಎಂದು ಸಂವಿಧಾನ ತಜ್ಞರು ಹೇಳುತ್ತಾರೆ.

ಬಿಜೆಪಿ ಕಾದು ನೋಡುವ ತಂತ್ರ: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಯಾವುದೇ ದಿಢೀರ್ ನಿರ್ಧಾರ ಕೈಗೊಳ್ಳದೆ ಚರ್ಚೆ ನಡೆಸಿ ಎಲ್ಲರ ಒಮ್ಮತ ಅಭಿಪ್ರಾಯದ ಮೇಲೆ ಮುಂದಿನ ನಡೆ ಇಡುವ ಬಗ್ಗೆ ಚಿಂತನೆ ನಡೆಸಿದೆ. 

click me!