ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ವಿರುದ್ಧ ಕಣಕ್ಕೆ ಇಳಿದಿದ್ದ ಯಶ್ ದರ್ಶನ್ ಸಿನಿಮಾ ಹಾಡಿಗೂ ಜೆಡಿಎಸ್ ಬ್ಯಾನ್ ಮಾಡಿದೆ.
ರಾಮನಗರ [ಜು.28]: ಮಂಡ್ಯ ಲೋಕಸಭಾ ಚುನಾವಣೆ ಸೋಲಿನ ಸಿಟ್ಟನ್ನು ಜೆಡಿಎಸ್ಸಿಗರು ಇನ್ನೂ ಮರೆತಂತೆ ಕಾಣುತ್ತಿಲ್ಲ. ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ‘ಜೋಡೆತ್ತು’ಗಳಂತೆ ದುಡಿದಿದ್ದ ನಟರಾದ ದರ್ಶನ್, ಯಶ್ ಮೇಲೆ ಮುನಿಸಿಕೊಂಡಿದ್ದ ಜೆಡಿಎಸ್ಸಿಗರು, ಈಗ ರಾಮನಗರದಲ್ಲಿ ನಡೆದ ರಸಸಂಜೆ ಕಾರ್ಯಕ್ರಮದಲ್ಲೂ ಈ ಇಬ್ಬರು ನಟರ ಚಿತ್ರಗೀತೆಗಳಿಗೆ ನಿಷೇಧ ಹೇರಿ ಮತ್ತೊಮ್ಮೆ ತಮ್ಮ ಆಕ್ರೋಶ ಪ್ರದರ್ಶಿಸಿದ್ದಾರೆ!
ರಾಮನಗರದ ಚಾಮುಂಡೇಶ್ವರಿ ಕರಗ ಮಹೋತ್ಸವ ಪ್ರಯುಕ್ತ ಜೆಡಿಎಸ್ ಪಕ್ಷದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ (ಜು.23) ರಾತ್ರಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ನೇತೃತ್ವದಲ್ಲಿ ಸಂಗೀತ ರಸಸಂಜೆ ಆಯೋಜಿಸಲಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಯಶ್ ಅಭಿನಯಿಸಿದ ಚಿತ್ರದ ಗೀತೆಗಳನ್ನು ಹಾಡಲೇಬಾರದೆಂದು ಆಯೋಜಕರೇ ತಾಕೀತು ಮಾಡಿದ್ದರು ಎನ್ನುವ ವಿಚಾರ ಇದೀಗ ತಡವಾಗಿ ಬಹಿರಂಗಗೊಂಡಿದೆ.
ಅದರಂತೆ ಕಾರ್ಯಕ್ರಮ ಆರಂಭಗೊಂಡು ಸುಮಾರು ಹೊತ್ತು ಕಳೆದರೂ ದರ್ಶನ್ ಮತ್ತು ಯಶ್ ಅಭಿನಯದ ಚಿತ್ರಗಳ ಹಿಟ್‌ಹಾಡುಗಳನ್ನು ಹಾಡದಿದ್ದಾಗ ಅಭಿಮಾನಿಗಳು ಡಿ-ಬಾಸ್, ಡಿ- ಬಾಸ್, ರಾಕಿ ಭಾಯ್, ರಾಕಿ ಭಾಯ್ ಎಂದು ಬೇಡಿಕೆಯ ಕೂಗು ಹಾಕುತ್ತಿದ್ದರು. ಆದರೆ, ಆಯೋಜಕರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಈ ನಟರಿಬ್ಬರ ಚಿತ್ರದ ಗೀತೆ ಹಾಡುವ ಧೈರ್ಯ ಯಾರೂ ತೋರಲಿಲ್ಲ.
ಅಭಿಮಾನಿಗಳ ಬೇಡಿಕೆ ಮುಗಿಲು ಮುಟ್ಟುತ್ತಿದ್ದಂತೆ ಖುದ್ದು ನಿರೂಪಕಿ ಅನುಶ್ರೀ ‘ನೀವು ನಮ್ಮ ಕಷ್ಟಅರ್ಥ ಮಾಡಿಕೊಳ್ಳಿ ಪ್ಲೀಸ್..’ ಎಂದು ಮನವಿ ಮಾಡುತ್ತಲೇ ಇದ್ದರು. ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಅಭಿಮಾನಿಗಳು ಮಾತ್ರ ಹೆಚ್ಚೆಚ್ಚು ಕೂಗು ಹಾಕುತ್ತಲೇ ಇದ್ದರು. ಆದರೂ ಯಶ್, ದರ್ಶನ್ ಚಿತ್ರದ ಹಾಡು ಹಾಡದಿರುವುದು ಇಬ್ಬರೂ ನಟರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ಈ ಕುರಿತು ಈಗ ದರ್ಶನ್ ಅಭಿಮಾನಿಗಳು ಸಾಮಾಜಿಕ ತಾಣಗಳ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಸುಮಲತಾ ಅಂಬರೀಷ್ ವಿರುದ್ಧ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ದರ್ಶನ್ ಮತ್ತು ಯಶ್ ಅವರು ಅಬ್ಬರದ ಪ್ರಚಾರ ನಡೆಸಿದ್ದೂ ಒಂದು ಕಾರಣ ಎನ್ನುವ ಭಾವನೆ ಜೆಡಿಎಸ್ಸಿಗರಲ್ಲಿತ್ತು. ಹೀಗಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ನಟರಿಬ್ಬರ ವಿರುದ್ಧ ಪದೇ ಪದೆ ತಮ್ಮ ಆಕ್ರೋಶ ಹೊರಹಾಕುತ್ತಿದ್ದರು.