
ಬೆಂಗಳೂರು(ನ 07): ಶೂಟಿಂಗ್ ವೇಳೆ, ಅದರಲ್ಲೂ ಸ್ಟಂಟ್ ಚಿತ್ರೀಕರಣಗಳ ವೇಳೆ ಅವಘಡಗಳಾಗುವುದು ಸಹಜ. ಈಗ ಬಹಳಷ್ಟು ಸುರಕ್ಷತಾ ವ್ಯವಸ್ಥೆಗಳು ಸಿದ್ಧವಿರುವುದರಿಂದ ಅವಘಡಗಳ ಪ್ರಮಾಣ ತೀರಾ ಕಡಿಮೆಯೇ. ಈ ಹಿನ್ನೆಲೆಯಲ್ಲಿ ಮಾಸ್ತಿಗುಡಿ ಚಿತ್ರೀಕರಣದ ವೇಳೆ ಇಬ್ಬರನ್ನು ಬಲಿತೆಗೆದುಕೊಂಡ ಘಟನೆ ನಿಜಕ್ಕೂ ಶಾಕ್ ಹೊಡೆಸುವಂತಿದೆ. ಈ ಘಟನೆಯನ್ನು ನೋಡಿದರೆ 70ರ ದಶಕದ ಖ್ಯಾತ ಮಲಯಾಳಂ ನಟ ಹಾಗೂ ಸ್ಟಂಟ್'ಮ್ಯಾನ್ ಕೃಷ್ಣನ್ ನಾಯರ್ ಅಕಾ ಜಯನ್ ಅವರ ಸಾವು ನೆನಪಿಗೆ ಬರುತ್ತದೆ. ಕನ್ನಡ ನಟ ವಿ.ರವಿಚಂದ್ರನ್ ಕೂಡ ಸುವರ್ಣನ್ಯೂಸ್ ಜೊತೆ ಮಾತನಾಡುವ ವೇಳೆ ಜಯನ್ ಅವರ ಸಾವಿನ ದುರಂತದ ಘಟನೆಯನ್ನು ನೆನಪಿಸಿಕೊಂಡು ಮರುಗಿದ್ದರು.
ಜಯನ್ ಸಾವು ಹೇಗೆ?
ಅಂದು 1980ರ ನವೆಂಬರ್ 16. ಚೆನ್ನೈಗೆ ಸಮೀಪದ ಶೋಲಾವರಮ್ ಎಂಬಲ್ಲಿ "ಕೋಳಿಳಕ್ಕಂ" ಎಂಬ ಸಿನಿಮಾದ ಸಾಹಸ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿರುತ್ತದೆ. ಅದು ಚಿತ್ರದ ಕ್ಲೈಮಾಕ್ಸ್ ದೃಶ್ಯವಾದ್ದರಿಂದ ಜಯನ್ ಅವರು ಹೆಚ್ಚು ಹುರುಪಿನಲ್ಲಿ ಶೂಟಿಂಗ್'ನಲ್ಲಿ ಪಾಲ್ಗೊಳ್ಳುತ್ತಾರೆ. ಅದು ಬೈಕ್ ಮೇಲೆ ನಿಂತು ಹೆಲಿಕಾಪ್ಟರ್'ಗೆ ಜಿಗಿಯುವ ರೋಚಕ ದೃಶ್ಯ. ಈ ಅಪಾಯಕಾರಿ ಸ್ಟಂಟನ್ನು ನಿರ್ದೇಶಕರು ಮೊದಲ ಟೇಕ್'ನಲ್ಲೇ ಓಕೆ ಮಾಡುತ್ತಾರೆ. ಆದರೆ, ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಸಾಹಸಗಳನ್ನು ಮಾಡಿರುವ ಜಯನ್ ಅವರಿಗೆ ತಮ್ಮ ಪ್ರಯತ್ನ ಸಮಾಧಾನ ತರುವುದಿಲ್ಲ. ನಾಲ್ಕು ರೀಟೇಕ್'ಗಳನ್ನ ಮಾಡುತ್ತಾರೆ. ಕೊನೆಯ ರೀಟೇಕ್'ನಲ್ಲಿ ಬೈಕ್'ನಿಂದ ಅವರು ಹೆಲಿಕಾಪ್ಟರ್'ಗೆ ಯಶಸ್ವಿಯಾಗಿಯೇ ಜಿಗಿಯುತ್ತಾರೆ. ಆದರೆ, ಹೆಲಿಕಾಪ್ಟರ್ ಸಮತೋಲನ ಕಳೆದುಕೊಂಡು ನೆಲಕ್ಕೆ ಅಪ್ಪಳಿಸುತ್ತದೆ. ಹೆಲಿಕಾಪ್ಟರ್'ನ ತಳಗಡೆಯ ಕಂಬಿ ಹಿಡಿದುಕೊಂಡಿದ್ದ ಜಯನ್ ಹೆಲಿಕಾಪ್ಟರ್ ಸಮೇತ ಕೆಳಗುರುಳುತ್ತಾರೆ. ಗಂಭೀರ ಗಾಯವಾಗಿ ಅವರು ಸಾವನ್ನಪ್ಪುತ್ತಾರೆ.
ಶಾಕ್ ಆದ ಪ್ರೇಕ್ಷಕರು:
ಜಯನ್ ಸಾವನ್ನಪ್ಪಿದ ವಿಚಾರ ಪತ್ರಿಕೆಯಲ್ಲಿ ಬಹಿರಂಗವಾಗಿರುವುದಿಲ್ಲ. ಆ ಸಂದರ್ಭದಲ್ಲಿ "ದೀಪಂ" ಎಂಬ ಸಿನಿಮಾವು ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿರುತ್ತದೆ. ಆ ಚಿತ್ರದ ಶೋ ವೇಳೆ ಜಯನ್ ಸಾವನ್ನಪ್ಪಿದ ವಿಚಾರವನ್ನು ಸ್ಲೈಡ್'ವೊಂದರ ಮೂಲಕ ಥಿಯೇಟರ್'ನಲ್ಲಿ ತೋರಿಸಲಾಗುತ್ತದೆ. ಇದನ್ನು ಕಂಡು ಥಿಯೇಟರ್'ನಲ್ಲಿದ್ದ ಜನರು ದಿಗ್ಭ್ರಾಂತರಾಗಿದ್ದರಂತೆ. ಹಲವು ಜನರು ಥಿಯೇಟರ್'ವೊಳಗೆ ಕಣ್ಣೀರಿಟ್ಟು ಹೊರಗೆ ಓಡಿಹೋದರಂತೆ. ಇನ್ನು ಮಿಕ್ಕವರು ಈ ವಿಚಾರವನ್ನು ನಂಬದೆ, ಇದೊಂದು ಪಬ್ಲಿಸಿಟಿ ಇರಬಹುದು ಎಂದೆಣೆಸಿ ಸಿನಿಮಾ ವೀಕ್ಷಣೆ ಮುಂದುವರಿಸಿದರಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.