ಸ್ಟಂಟ್ ಮಾಸ್ಟರ್ ರವಿವರ್ಮಾರನ್ನು ನಿಷೇಧಿಸಲು ನಿರ್ಮಾಪಕ ದಯಾಳ್ ಆಗ್ರಹ

By Suvarna Web DeskFirst Published Nov 7, 2016, 4:44 PM IST
Highlights

"ಸಾಕಷ್ಟು ಚಿತ್ರಗಳಿಗೆ ಕೆಲಸ ಮಾಡುವ ರವಿವರ್ಮಾ ಯಾವುದೇ ಪೂರ್ವಸಿದ್ಧತೆ(ಹೋಮ್'ವರ್ಕ್) ಇಲ್ಲದೆಯೇ ಶಾಟ್'ಗಳನ್ನು ರಚಿಸುತ್ತಾರೆ ಎಂದು ದಯಾಳ್ ಆರೋಪಿಸಿದರು.

ಬೆಂಗಳೂರು(ನ. 07): ಸಾಹಸ ನಿರ್ದೇಶಕ ರವಿವರ್ಮಾ ಅವರನ್ನು ಎರಡು ವರ್ಷ ನಿಷೇಧಿಸಬೇಕೆಂದು ನಿರ್ದೇಶಕ ಹಾಗೂ ನಿರ್ಮಾಪಕ ದಯಾಳ್ ಆಗ್ರಹಿಸಿದರು. ಮಾಸ್ತಿಗುಡಿ ಚಿತ್ರೀಕರಣದ ವೇಳೆ ಇಬ್ಬರು ನಟರ ದುರ್ಮರಣವಾದ ಘಟನೆಗೆ ಪ್ರತಿಕ್ರಿಯಿಸಿದ ದಯಾಳ್, ಈ ಘಟನೆಗೆ ಸ್ಟಂಟ್ ಮಾಸ್ಟರ್ ರವಿವರ್ಮಾರೇ ಹೊಣೆ ಎಂದು ಅಭಿಪ್ರಾಯಪಟ್ಟರು. ಸಾಕಷ್ಟು ಚಿತ್ರಗಳಿಗೆ ಕೆಲಸ ಮಾಡುವ ರವಿವರ್ಮಾ ಯಾವುದೇ ಪೂರ್ವಸಿದ್ಧತೆ(ಹೋಮ್'ವರ್ಕ್) ಇಲ್ಲದೆಯೇ ಶಾಟ್'ಗಳನ್ನು ರಚಿಸುತ್ತಾರೆ ಎಂದು ದಯಾಳ್ ಆರೋಪಿಸಿದರು.

ಈ ಘಟನೆ ವಿರುದ್ಧ ಖಂಡಿತವಾಗಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದ ದಯಾಳ್, ತಾನು ಒಬ್ಬ ನಿರ್ಮಾಪಕನಾಗಿ ರವಿವರ್ಮಾ ಅವರನ್ನು ಎರಡು ವರ್ಷ ಚಿತ್ರರಂಗದಿಂದ ನಿಷೇಧಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಹೇಳಿದರು.

ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾದ ಚಿತ್ರೀಕರಣ ವೇಳೆ ಒಂದು ಘಟನೆಯನ್ನು ದಯಾಳ್ ಉದಾಹರಣೆಯಾಗಿ ನೀಡಿದರು. ಸಾಹಸ ದೃಶ್ಯದ ಶೂಟಿಂಗ್ ವೇಳೆ ಸ್ಟಂಟ್'ಮ್ಯಾನ್'ವೊಬ್ಬನ ತಲೆಗೆ ಗಾಜು ಒಡೆದು ಸಾಕಷ್ಟು ರಕ್ತ ಸೋರುತ್ತಿರುತ್ತದೆ. ಆದರೆ, ರವಿವರ್ಮಾ ಇದಕ್ಕೆ ಕೇರ್ ಮಾಡದೇ ಮುಂದಿನ ದೃಶ್ಯದ ಚಿತ್ರೀಕರಣಕ್ಕೆ ಮುಂದಾಗುತ್ತಾರೆ. ಈ ಘಟನೆ ತನಗೆ ಬಹಳ ನೋವು ತಂದಿತ್ತು ಎಂದು ದಯಾಳ್ ಆ ಘಟನೆಯನ್ನು ಸುವರ್ಣನ್ಯೂಸ್ ಜೊತೆ ನೋವಿನಿಂದ ಹಂಚಿಕೊಂಡರು.

ದುನಿಯಾ ವಿಜಿ ಅಭಿನಯದ "ಮಾಸ್ತಿಗುಡಿ" ಸಿನಿಮಾಕ್ಕೆ ರವಿ ವರ್ಮಾ ಅವರೇ ಸಾಹಸ ನಿರ್ದೇಶಕರು. ಇವರ ಸ್ಟಂಟ್ ಡೈರೆಕ್ಷನ್'ನಲ್ಲೇ ಅಪಾಯಕಾರಿ ಹೆಲಿಕಾಪ್ಟರ್ ಜಂಪ್ ಘಟನೆ ನಡೆದದ್ದು. ಇಂಥ ಡೇಂಜರ್ ಸ್ಟಂಟ್ ಚಿತ್ರೀಕರಣಕ್ಕೆ ಬೇಕಾದ ಯಾವುದೇ ಸೇಫ್ಟಿ ಮೆಷರ್ಸನ್ನು ತೆಗೆದುಕೊಂಡಿರಲಿಲ್ಲವೆಂಬ ಆರೋಪವಿದೆ.

click me!