ಜನಾರ್ದನರೆಡ್ಡಿಗೆ ಐಟಿ ಶಾಕ್

By Suvarna Web DeskFirst Published Nov 21, 2016, 8:10 AM IST
Highlights

ಬಳ್ಳಾರಿಯ ರೆಡ್ಡಿ ಒಡೆತನದ ಓಎಂಸಿ ಹಾಗೂ ಎಎಂಸಿ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಲಾಗಿದೆ.ಎರಡು ಇನೋವಾ ವಾಹನಗಳಲ್ಲಿ ಆಗಮಿಸಿದ ಅಧಿಕಾರಿಗಳ ತಂಡ ಕಚೇರಿ ಒಳಗೆ ದಾಖಲೆ ಪತ್ರಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.

ಬಳ್ಳಾರಿ(ನ.21): ಇತ್ತೀಚೆಗೆ ನೂರಾರು ಕೋಟಿ ಖರ್ಚು ಮಾಡಿ ಮಗಳ ಮದುವೆಯನ್ನ ಧಾಂ ಧೂಂ ಎಂದು ನಡೆಸಿದ್ದ ಮಾಜಿ ಸಚಿವ ಜನಾರ್ದನರೆಡ್ಡಿಗೆ ಕೊನೆಗೂ ಐಟಿ ಶಾಕ್ ನೀಡಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಕಚೇರಿಗಳ ಮೇಲೆ ಐಟಿ ದಾಳಿ ನಡೆದಿದೆ. ಬಳ್ಳಾರಿಯ ಎರಡು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ರೆಡ್ಡಿ ಒಡೆತನದ ಓಎಂಸಿ ಹಾಗೂ ಎಎಂಸಿ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಲಾಗಿದೆ.ಎರಡು ಇನೋವಾ ವಾಹನಗಳಲ್ಲಿ ಆಗಮಿಸಿದ ಅಧಿಕಾರಿಗಳ ತಂಡ ಕಚೇರಿ ಒಳಗೆ ದಾಖಲೆ ಪತ್ರಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಮದುವೆಯ ಅದ್ದೂರಿ ಆಮಂತ್ರಣ ಪತ್ರಿಕೆ, ಮದುವೆಗೆ ಬಂದಿದ್ದ ಗಣ್ಯರ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ.

ಜನಾರ್ದನ ರೆಡ್ಡಿ ಇತ್ತೀಚೆಗೆ ತಮ್ಮ ಮಗಳಾದ ಬ್ರಹ್ಮಿಣಿ ಮದುವೆಯನ್ನು ಸುಮಾರು 500 ಕೋಟಿ ರೂಪಾಯಿ ವೆಚ್ಚ ಮಾಡಿ ಮದುವೆ ಮಾಡಿದ್ದಾರೆ ಎಂದು ಆರೋಪಿಸಿ ಆರ್ ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಅವರು ದೂರು ದಾಖಲಿಸಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜೈಲುವಾಸ ಅನುಭವಿಸಿದ್ದು, ಅವರ ಎಲ್ಲಾ ಆಸ್ತಿ, ಬ್ಯಾಂಕ್ ಖಾತೆಯನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿತ್ತು. ಹಾಗಿದ್ದ ಮೇಲೆ ಅದ್ದೂರಿ ಮದುವೆ ಮಾಡಲು ಹಣ ಎಲ್ಲಿಂದ ಬಂತು, ಹಣದ ಮೂಲದ ಬಗ್ಗೆ ತನಿಖೆಯಾಗಬೇಕೆಂದು ನರಸಿಂಹಮೂರ್ತಿ ಅವರು ದೂರಿನಲ್ಲಿ ಮನವಿ ಮಾಡಿದ್ದರು.

ಈ ಕುರಿತು, ಪ್ರತಿಕ್ರಿಯಿಸಿರುವ ದೂರುದಾರ ನರಸಿಂಹಮೂರ್ತಿ, ಐಟಿ ಇಲಾಖೆಗೆ 15ನೇ ತಾರೀಖಿನಂದೇ ಮದುವೆ ದಿನವೇ ದೂರು ನೀಡಿದ್ದೆ. ಅಂದೇ ರೇಡ್ ಮಾಡುವಂತೆ ಮನವಿ ಮಾಡಿದ್ದೆ. ಅವರಿಗೆ ರೇಡ್ ಮಾಡುವ ಅಧಿಕಾರವಿತ್ತು. ಇವತ್ತು ದಾಳಿ ನಡೆಸಿದ್ದಾರೆ. ರೆಡ್ಡಿ ಅವರಿಗೆ ಅವರೇ ಅವಕಾಶ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

 

click me!