
ಪುತ್ತೂರು: ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಪುತ್ತೂರು ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿದ್ದಾರೆ ಎಂದು ನಗರ ಠಾಣಾ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.
ಸೆ.15ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಜಗದೀಶ್ ಕಾರಂತ್ ದಿಕ್ಸೂಚಿ ಭಾಷಣ ಮಾಡಿದ್ದರು. ಪುತ್ತೂರು ಗ್ರಾಮಾಂತರ ಸಂಪ್ಯ ಠಾಣಾ ಎಸ್‌ಐ ಅಬ್ದುಲ್ ಖಾದರ್ ಅವರು ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಪಾದಿಸಿ ಈ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು.
ತಮ್ಮ ದಿಕ್ಸೂಚಿ ಭಾಷಣದಲ್ಲಿ ಜಗದೀಶ್ ಕಾರಂತ್ ಅವರು ಪೊಲೀಸ್ ಅಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಸರಕಾರಿ ಅಧಿಕಾರಿಯಾಗಿರುವ ಅಬ್ದುಲ್ ಖಾದರ್ ಅವರನ್ನು ಮತೀಯ ನೆಲೆಯಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿ ಎಸ್‌ಡಿಪಿಐ ಆಶ್ರಯದಲ್ಲಿ ಪುತ್ತೂರು ನಗರದಲ್ಲಿ ಪ್ರತಿಭಟನಾ ಸಭೆ ನಡೆದಿತ್ತು.
ಈ ನಡುವೆ, ಜಗದೀಶ್ ಕಾರಂತ್ ಭಾಷಣದ ವಿಡಿಯೋ ಚಿತ್ರೀಕರಣ ಮಾಡಿದ್ದ ಪೊಲೀಸರು, ಈ ವಿಡಿಯೋವನ್ನು ಸಂಪೂರ್ಣ ಅಧ್ಯಯನ ಮಾಡಿದ ಬಳಿಕ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾರತೀಯ ಅಪರಾಧ ದಂಡ ಸಂಹಿತೆಯ 153ನೇ ಸೆಕ್ಷನ್ ಅಡಿಯಲ್ಲಿ ಕಾರಂತ ವಿರುದ್ಧ ಪ್ರಕರಣ ದಾಖಲಾಗಿದೆ. ಸರ್ಕಾರಿ ನೌಕರನಿಗೆ ಬೆದರಿಕೆ ಒಡ್ಡಿರುವುದು, ಧರ್ಮ- ಧರ್ಮಗಳ ನಡುವೆ ವೈರತ್ವ ಹುಟ್ಟುವಂತೆ ಪ್ರೇರೇಪಣೆ ಮಾಡಿರುವುದು, ಧಾರ್ಮಿಕ ಅವಹೇಳನ, ಧಾರ್ಮಿಕ ನಿಂದನೆ ಇವೇ ಮುಂತಾದ ಅಂಶಗಳನ್ನು ಉಲ್ಲೇಖಿಸಿ ಪ್ರಕರಣ ದಾಖಲು ಮಾಡಲಾಗಿದೆ. ಮುಂದಿನ ಹಂತದಲ್ಲಿ ಇಡೀ ಪ್ರಕರಣದ ತನಿಖೆ ನಡೆಸಿ, ಅಂತಿಮವಾಗಿ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲು ಮಾಡಲಾಗುವುದು ಎಂದು ಪುತ್ತೂರು ಪೊಲೀಸರು ತಿಳಿಸಿದ್ದಾರೆ.
ಜಗದೀಶ್ ಕಾರಂತ್ ಅವರು ಪೊಲೀಸ್ ಅಧಿಕಾರಿ ಅಬ್ದುಲ್ ಖಾದರ್ ಅವರನ್ನು ಮತೀಯ ನೆಲೆಯಲ್ಲಿ ಗುರುತಿಸಿಕೊಂಡು ನಿಂದಿಸಿ, ಧಾರ್ಮಿಕ ಅವಹೇಳನ ಮಾಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಕಬಕ ನಿವಾಸಿ ಕೆ.ಅಝೀಜ್ ಎಂಬವರು ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಪ್ರಸ್ತುತ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.