ಜೀವ ಉಳಿಸಿಕೊಳ್ಳಲು 12ರ ಬಾಲಕನ ಒತ್ತೆ ಇಟ್ಟರು!

By Web DeskFirst Published Mar 23, 2019, 7:59 AM IST
Highlights

ಜೀವ ಉಳಿಸಿಕೊಳ್ಳಲು 12ರ ಬಾಲಕನ ಒತ್ತೆ ಇಟ್ಟಉಗ್ರರು!| ಕಾರ್ಯಾಚರಣೆ ವೇಳೆ 2 ಉಗ್ರರ ಜೊತೆ ಬಾಲಕ ಸಾವು| 24 ತಾಸಿನಲ್ಲಿ ಐವರು ಭಯೋತ್ಪಾದಕರ ಸಂಹಾರ

ಶ್ರೀನಗರ[ಮಾ.23]: ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಸಂಹಾರ ತೀವ್ರಗೊಳಿಸಿರುವ ಭದ್ರತಾ ಪಡೆಗಳು, ಶುಕ್ರವಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ಉಗ್ರರನ್ನು ಹತ್ಯೆಗೈದಿವೆ. ಇದರೊಂದಿಗೆ, ಕಾಶ್ಮೀರದಲ್ಲಿ 24 ತಾಸಿನಲ್ಲಿ ಐವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದು ಹಾಕಿದಂತಾಗಿದೆ. ದುರದೃಷ್ಟವಶಾತ್‌, ಈ ಕಾರ್ಯಾಚರಣೆ ಸಂದರ್ಭ ಉಗ್ರರ ಒತ್ತೆಯಾಳಾಗಿದ್ದ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಬಂಡಿಪೋರಾ ಜಿಲ್ಲೆಯ ಹಾಜಿನ್‌ ಪ್ರದೇಶದಲ್ಲಿ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಇದ್ದಾರೆ ಎಂಬ ಮಾಹಿತಿ ಗುರುವಾರ ಭದ್ರತಾ ಪಡೆಗಳಿಗೆ ಲಭ್ಯವಾಯಿತು. ಕಾರ್ಯಾಚರಣೆ ಆರಂಭಿಸಿದಾಗ, ಉಗ್ರರು ತಮ್ಮ ವಶದಲ್ಲಿ ಇಬ್ಬರು ವ್ಯಕ್ತಿಗಳನ್ನು ಇಟ್ಟುಕೊಂಡಿರುವುದು ಗೊತ್ತಾಯಿತು. ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿದ ಭದ್ರತಾ ಸಿಬ್ಬಂದಿ, ಪಾಕಿಸ್ತಾನ ಮೂಲದ ಇಬ್ಬರೂ ಉಗ್ರರನ್ನು ಕೊಂದು, ಅಬ್ದುಲ್‌ ಹಮೀದ್‌ ಎಂಬ ವ್ಯಕ್ತಿಯನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಿದರು.

ಆದರೆ ಕಾರ್ಯಾಚರಣೆ ಸಂದರ್ಭದಲ್ಲಿ 12 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ, ಶೋಪಿಯಾನ್‌ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಉಗ್ರ ಹತನಾಗಿದ್ದಾನೆ. ಆತನ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.

click me!