ದಾವಣಗೆರೆ ಬಿಜೆಪಿ ಸಂಸದ ಸಿದ್ದೇಶ್ವರ್'ಗೆ ಐಟಿ ದಾಳಿಯ ಬಿಸಿ

By Suvarna Web DeskFirst Published May 19, 2017, 10:24 AM IST
Highlights

ಹಾವೇರಿ ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆ ಗುತ್ತಿಗೆದಾರರಾದ ಜಿಎಂ ಶುಗರ್ಸ್‌ನ ಕಚೇರಿ ಹಾಗೂ ಅಲ್ಲಿರುವ ಜಿಎಂ ಸಹಕಾರಿ ಸೌಹಾರ್ದ ಪತ್ತಿನ ಸಂಘದಲ್ಲೂ ಪರಿಶೀಲನೆ ನಡೆಸಿರುವ ಐಟಿ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಎರಡೂ ಕಚೇರಿ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗ: ರಾಜ್ಯದ ಪ್ರಭಾವಿ ಬಿಜೆಪಿ ಮುಖಂಡ, ಸಂಸದ ಜಿ.ಎಂ. ಸಿದ್ದೇಶ್ವರ್‌ ಕುಟುಂಬಕ್ಕೆ ಸೇರಿದ ಜಿ.ಎಂ. ಸಹಕಾರ ಸೌಹಾರ್ದ ಪತ್ತಿನ ನಿಯಮಿತ, ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರದ ಮನೆ, ಕಚೇರಿ, ಹಾವೇರಿ ಜಿಲ್ಲೆಯಲ್ಲಿರುವ ಜಿಎಂ ಶುಗರ್ಸ್‌ ನ ಕಚೇರಿ ಸೇರಿ ಐದು ಕಡೆ ಗುರುವಾರ ಏಕಕಾಲಕ್ಕೆ ದಾಳಿ ನಡೆಸಿರುವ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಮೂಲತಃ ಭೀಮಸಮುದ್ರದವರಾದ ಸಿದ್ದೇಶ್ವರ್‌ ಒಡೆತ​ನದ ವ್ಯಾಪಾರ, ವಹಿವಾಟು ಕೇಂದ್ರಗಳು, ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಲ್ಲಿ ಈ ದಾಳಿ ನಡೆದಿದೆ. ಸಿದ್ದೇಶ್ವರ್‌ ಸಹೋದರ ಜಿ.ಎಂ.ಪ್ರಸನ್ನಕುಮಾರ ಅವರ ಕಚೇರಿಯಲ್ಲೂ ದಾಖಲೆಗಳ ಪರಿಶೀಲನೆ ನಡೆದಿದೆ.

ಬೆಳಗ್ಗೆ 10ಕ್ಕೆ: ದಾವಣಗೆರೆಯಲ್ಲಿರುವ ಸಿದ್ದೇಶ್ವರ್‌ ಕಚೇರಿ, ಅಡಕೆ ಮಂಡಿ, ಮನೆ ಮೇಲೆ 8 ಅಧಿಕಾರಿಗಳನ್ನೊಳಗೊಂಡ ತಂಡಗಳು ಬೆಳಗ್ಗೆ 10ಕ್ಕೆ ಏಕಕಾಲಕ್ಕೆ ದಾಳಿ ಆರಂಭಿಸಿದವು. ಭೀಮಸಮುದ್ರದ ನಿವಾಸ, ಅಲ್ಲಿನ ಶ್ರೀ ಪ್ರಸನ್ನ ಟ್ರೇಡ​ರ್‍ಸ್ ಅಡಕೆ ಮಂಡಿ, ಜಿ.ಎಂ.ಸೌಹಾರ್ದ ಬ್ಯಾಂಕ್‌, ಮೇಗಲಹಳ್ಳಿ ಸಮೀಪದ ಸೂಪರ್‌ ಗುಟ್ಕಾ ಫ್ಯಾಕ್ಟರಿ, 2 ಮನೆಗಳ ಮೇಲೆ ದಾಳಿ ನಡೆಸಿ ದಾಖಲೆ, ಕಾಗದ ಪತ್ರಗಳನ್ನು ಅಧಿಕಾರಿಗಳ ತಂಡ ಪರಿಶೀಲಿಸಿದೆ.

2 ಕಚೇರಿ ಜಪ್ತಿ: ಈ ನಡುವೆ, ಹಾವೇರಿ ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆ ಗುತ್ತಿಗೆದಾರರಾದ ಜಿಎಂ ಶುಗರ್ಸ್‌ನ ಕಚೇರಿ ಹಾಗೂ ಅಲ್ಲಿರುವ ಜಿಎಂ ಸಹಕಾರಿ ಸೌಹಾರ್ದ ಪತ್ತಿನ ಸಂಘದಲ್ಲೂ ಪರಿಶೀಲನೆ ನಡೆಸಿರುವ ಐಟಿ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಎರಡೂ ಕಚೇರಿ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in

click me!