
ಮಡಿಕೇರಿ(ಎ.27): ಕರ್ನಾಟಕದಲ್ಲಿ ಐಟಿ ಅಧಿಕಾರಿಗಳು ಭರ್ಜರಿ ಬೇಟೆ ಆಡಿದ್ದಾರೆ. ಬೆಂಗಳೂರಿನ ಪ್ರಸಿದ್ಧ ಬಿಲ್ಡರ್ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆದಿದ್ರೆ, ಅತ್ತ ಕೊಡಗಿನ ಉದ್ಯಮಿಯ ಮನೆ ಮೇಲೆ ಸಿನಿಮೀಯ ರೀತಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಿನ್ನೆ ಮುಂಜಾನೆ ಹೊತ್ತಲ್ಲಿ ಮೈಸೂರಿನಿಂದ ಕುಶಾಲನಗರದತ್ತ ಮದುವೆ ದಿಬ್ಬಣಕ್ಕೆ ಹೊರಟಂತೆ ಆಲಂಕಾರಗೊಂಡಿದ್ದ ಕಾರುಗಳು ಬಂದಿದ್ದವು. ನೋಡಿದವ್ರು ಯಾವುದೋ ಗಣ್ಯ ವ್ಯಕ್ತಿಯ ಮದುವೆ ಇರಬೇಕು ಅಂದುಕೊಂಡಿದ್ದರು. ಆದರೆ, ಅದರಲ್ಲಿ ಇದ್ದಿದ್ದು ಮಾತ್ರ ಪೊಲೀಸರು ಹಾಗೂ ಐಟಿ ಅಧಿಕಾರಿಗಳು
ಸುಮಾರು 30ಕ್ಕೂ ಅಧಿಕ ಕಾರುಗಳಲ್ಲಿ ಆಗಮಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಕುಶಾಲನಗರದ ಪ್ರತಿಷ್ಠಿತ ಎಸ್‌ಎಲ್‌ಎನ್ ಗ್ರೂಪ್ ಸಂಸ್ಥೆಯ ಮಾಲೀಕರಿಗೆ ಸೇರಿದ ಸುಮಾರು 11 ಕಚೇರಿ ಹಾಗು ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ, ಕಚೇರಿ ಮತ್ತು ನಿವಾಸಗಳಲ್ಲಿ ಮಹತ್ವದ ದಾಖಲೆಗಳು ದೊರೆತಿದ್ದು, ಅಧಿಕಾರಿಗಳು ಬೆಳಗ್ಗಿನಿಂದಲೂ ದಾಖಲೆಗಳನ್ನ ಪರಿಶೀಲಿಸಿದರು.
ಕೆಲ ದಿನಗಳ ಹಿಂದಷ್ಟೆ ಚೆನೈನಲ್ಲಿ ಕೇಂದ್ರದ ಮಾಜಿ ಸಚಿವ ಚಿದಂಬರಂ ಮಗ ಕಾರ್ತೀಕ್ ಚಿದಂಬರಂ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು. ಅಲ್ಲಿ ದೊರೆತ ಕೆಲವು ದಾಖಲೆಗಳ ಆಧಾರದ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಆದರೆ, SLN ಸಂಸ್ಥೆ ಮಾಲೀಕರು ಚಿದಂಬರಂ ಅವರ ಸಂಬಂಧಿಯೇ ಎಂಬುವುದಕ್ಕೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ.
ಇನ್ನು ಮತ್ತೊಂದೆಡೆ, ಬೆಂಗಳೂರಿನ ಸ್ಯಾನ್ ಸಿಟಿ ಬಿಲ್ಡರ್ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 18 ಗಂಟೆಗಳಿಗೂ ಅಧಿಕ ಕಾಲ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದು, ಬೆಂಗಳೂರಿನಲ್ಲಿರುವ ವಿವಿಧ ಕಚೇರಿಗಳ ಮೇಲೆ ದಾಳಿ ಮಾಡಿದ 40ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಇನ್ನೂ ಸ್ಯಾನ್ ಸಿಟಿಯವರು ನೂರಾರು ಕೋಟಿ ತೆರಿಗೆ ವಂಚನೆ ಮಾಡಿದ ಹಿನ್ನಲೆ ದಾಳಿ ಮಾಡಲಾಗಿದೆ ಎನ್ನಲಾಗಿದೆ. ದಾಳಿ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಮತ್ತು ದಾಖಲೆ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಅನೇಕ ರಾಜಕಾರಣಿಗಳು ಮತ್ತು ಕೆಲ ಹಳೆ ರೌಡಿಗಳ ಹಣ ಪತ್ತೆಯಾಗಿದೆ ಎನ್ನಲಾಗುತ್ತಿದ್ದು, ಇಂದು ಕೂಡ ರೇಡ್ ಮುಂದುವರೆಯುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ರಾಜ್ಯದ ನಾನಾ ಕಡೆ ಐಟಿ ಅಧಿಕಾರಿಗಳು ರೇಡ್ ಮಾಡುವ ಮೂಲಕ ಕಪ್ಪುಕುಳಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.