
ನವದೆಹಲಿ (ಮೇ.17): ಐಸಿಸ್ ಅಟ್ಟಹಾಸಕ್ಕೆ ಇಡೀ ಜಗತ್ತೇ ನಲುಗಿ ಹೋಗಿದೆ. ತನ್ನ ಕ್ರೌರ್ಯ ಕೃತ್ಯದಿಂದ ನಾಗರಿಕ ಸಮಾಜವೇ ಬೆಚ್ಚಿ ಬೀಳುವಂತ ಘಟನೆಗಳಿಗೆ ಈ ಇಸ್ಲಾಮಿಕ್ ಸಂಘಟನೆ ಕಾರಣವಾಗಿದೆ.ಅಂತರ್ಜಾಲ ತಾಣಗಳ ಮೂಲಕವೂ ಜಗತ್ತಿನಾದ್ಯಂತ ತನ್ನ ಕಬಂದ ಬಾಹುಗಳನ್ನು ಚಾಚುತ್ತಿರುವ ಐಸಿಸ್’ನ ಕರಿನೆರಳು ಇತ್ತೀಚೆಗೆ ಭಾರತದಲ್ಲೂ ಆವರಿಸಿದೆ . ಬಡ ಯುವಕರನ್ನು ಧರ್ಮದ ಹೆಸರಲ್ಲಿ ಹೋರಾಡುವಂತೆ ಹುರಿದುಂಬಿಸುತ್ತಿದೆ.
ಇಡೀ ವಿಶ್ವಕ್ಕೆ ತಲೆ ನೋವಾಗಿರುವ ರಕ್ಕಸ ಐಸಿಸ್ ಉಗ್ರರ ಬೇರು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. 2002ರಲ್ಲಿ ಶುರುವಾದ ಈ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸುವ ಗುರಿ ಹೊಂದಿದೆ. ಇದಕ್ಕಾಗಿ ಜಗತ್ತಿನ ವಿವಿಧ ದೇಶಗಳಿಂದ ಯುವಕರನ್ನು ತನ್ನ ಸಂಘಟನೆಯತ್ತ ಸೆಳೆಯುತ್ತಿದೆ. ಇರಾಕ್ ಮತ್ತು ಸಿರಿಯಾ ರಾಷ್ಟ್ರಗಳಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಿಕೊಂಡಿರುವ ಐಸಿಸ್ ಉಗ್ರರು ಹಣದ ಆಮಿಷವೊಡ್ಡಿ ಯವಕರನ್ನು ಬಲಿ ಪಡೆಯುತ್ತಿದೆ .
ಭಾರತೀಯರೇ ಟಾರ್ಗೆಟ್
ಇನ್ನು 2016ರಲ್ಲಿ ಮೊದಲ ಬಾರಿಗೆ ಭಾರತೀಯ ವಿದ್ಯಾವಂತ ಯುವಕರನ್ನು ಟಾರ್ಗೆಟ್ ಮಾಡಿದ್ದ ಐಸಿಸ್ ಉಗ್ರರು ತನ್ನತ್ತ ಸೆಳೆಯಲು ಯತ್ನಿಸಿದ್ದರು. ಬಂದರು ಪ್ರದೇಶಗಳ ಮೂಲಕ ಇರಾಕ್ ಗೆ ಬರುವಂತೆ ಐಸಿಸ್ ಉಗ್ರರು ಸೂಚಿಸಿದ್ದರು . ಅದರಂತೆ ಸುಮಾರು 50ಕ್ಕೂ ಹೆಚ್ಚು ಯುವಕರು ಐಸಿಸ್ ಸೇರಲು ಭಾರತಬಿಟ್ಟು ತೆರಳಲು ಮುಂದಾಗಿದ್ದರು . ಹೀಗೆ ಮನೆ ಬಿಟ್ಟು ಬಂದಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ. ಅದರಲ್ಲಿ ಪ್ರಮುಖವಾಗಿ ಮಹಾರಾಷ್ಟ್ರ ಮತ್ತು ತೆಲಂಗಾಣದ 11 ಮಂದಿ ಕರ್ನಾಟಕದ 7 ಜನ , ಕೇರಳದ 6 ಮಂದಿ , ಉತ್ತರ ಪ್ರದೇಶದ 4 ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ. ಉಳಿದಂತೆ ಯುಪಿ , ಪಶ್ಚಿಮಾ ಬಂಗಳ ಹಾಗೂ ದೆಹಲಿಯ ಯುವಕರನ್ನು ಬಂಧಿಸಿದ್ದು ಒಟ್ಟಾರೆ ಇದೂವರೆಗೆ 68 ಜನರ ಬಂಧನವಾಗಿದೆ ಎಂದು ತಿಳಿದು ಬಂದಿದೆ.
ಐಸಿಸ್ ಕಪಿ ಮುಷ್ಠಿಯಲ್ಲಿದ್ದ ಕನ್ನಡಿಗರು
ಇನ್ನು 2015 ಜುಲೈ 31 ರಂದು ಲಿಬಿಯಾದ ಐಸಿಸ್ ಉಗ್ರರಿಂದ ಕರ್ನಾಟಕದ ಇಬ್ಬರು ಪ್ರೊಫೆಸರ್ಗಳು ಸೇರಿ ನಾಲ್ವರು ಭಾರತೀಯರನ್ನು ಉಗ್ರರು ಅಪಹರಸಿದ್ದರು. ಕೋಲಾರ ಜಿಲ್ಲೆಯ ವಿಜಯ್ ಕುಮಾರ್ ಮತ್ತು ರಾಯಚೂರಿನ ಲಕ್ಷ್ಮೀಕಾಂತ್‌ರನ್ನು ಕಿಡ್ನಾಪ್ ಮಾಡಿದ್ದ ಉಗ್ರರ ಬಳಿ ಈ ಇಬ್ಬರು ಕನ್ನಡಿಗರು ನಾವು ನಿಮ್ಮ ಮಕ್ಕಳಿಗೆ ಪಾಠ ಹೇಳುವ ಮೇಷ್ಟ್ರು ಎಂದು ಮನವಿ ಮಾಡಿಕೊಂಡಾಗ ಬಿಡುಗಡೆಗೊಳಿಸಿದ್ದರು. ಇನ್ನು ಯೆಮೆನ್ ನಲ್ಲಿ ಐಸಿಸ್ ಉಗ್ರರು ಬೆಂಗಳೂರಿನ ಫಾದರ್ ಟಾಮ್ ಉಳುನ್ನಲಿಲ್ ರನ್ನು ಅಪಹರಿಸಿ ಶಿರಚ್ಛೇದ ಮಾಡಿದರು ಎನ್ನಲಾಗುತ್ತಿದೆ. ಆದ್ರೆ ಈ ಬಗ್ಗೆ ಇನ್ನು ಸ್ಪಷ್ಟ ಮಾಹಿತಿ ಇಲ್ಲ.
ಇದಲ್ಲದೆ ಕಳೆದ ತಿಂಗಳು ಇರಾಕ್ನಲ್ಲಿ ಐಸಿಸ್ ಉಗ್ರರ ವಶದಲ್ಲಿದ್ದ 30ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿ ಮತ್ತೆ ತಾಯ್ನಾಡಿಗೆ ಕಳುಹಿಸಲಾಗಿದೆ. ಅಲ್ಲದೆ ವಿಶ್ವದ ವಿವಿದೆಡೆ ನಡೆದ ಐಸಿಸ್ ದಾಳಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಭಾರತೀಯರು ಅಸುನೀಗಿದ್ದಾರೆ ಅಂತಾ ಹೇಳಲಾಗಿದೆ. ಒಟ್ಟಾರೆ ಐಸಿಸ್ ಉಗ್ರರ ಉಪಟಳಕ್ಕೆ ಭಾರತೀಯರು ಬಲಿಯಾಗುತ್ತಿದ್ದಾರೆ.
ಆದ್ರೂ ಇವರ ಆಸಕ್ತಿ ಭಾರತೀಯ ಯುವಕರ ಮೇಲೆಯೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ರಿಪಬ್ಲಿಕ್ ಟಿವಿಯ ಕರ್ನಾಟಕ ಮೂಲದ ವರದಿಗಾರ್ತಿ ಪ್ರೇಮಾ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಐಸಿಸ್ ಬಗ್ಗೆ ಆಸಕ್ತಿ ಹೊಂದಿರುವ ಯುವಕರು ಇದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.