
ಇದುವರೆಗೂ ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆದರೆ, ಈಗ ದಂಧೆಕೋರರು ಇದೇ ಅನ್ನಭಾಗ್ಯ ಅಕ್ಕಿಯನ್ನು ಪಾಲಿಷ್ ಮಾಡಿ ಪ್ರತಿಷ್ಠಿತ ಅಕ್ಕಿ ತಯಾರಿಕೆ ಕಂಪನಿಗಳ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ.
ಇಂತಹ ಜಾಲವೊಂದು ಗಡಿ ಜಿಲ್ಲೆ ಬೆಳಗಾವಿಯ ಅಥಣಿ ಸೇರಿದಂತೆ ನಾನಾ ಭಾಗಗಳಲ್ಲಿ ಕ್ರಿಯಾತ್ಮಕವಾಗಿದೆ. ಅನ್ನಭಾಗ್ಯ ಅಕ್ಕಿಯನ್ನು ಕಡಿಮೆ ದರಕ್ಕೆ ಖರೀದಿಸುವುದು, ಆ ಅಕ್ಕಿಯನ್ನು ಪಾಲಿಷ್ ಮಾಡಿ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿಯೇ ಮಾರುಕಟ್ಟೆಗೆ ಬಿಟ್ಟು, ದುಬಾರಿ ಬೆಲೆಗೆ ಮಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಇದೇ ದಂಧೆ ನಡೆಸುತ್ತಿರುವ ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಇಂತಹ ವಿಷಯ ಅಧಿಕಾರಿಗಳು ತಿಳಿದಿದ್ದರೂ ಕಣ್ಮುಚ್ಚಿ ಕುಳಿತುಕೊಂಡಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ಯಾವ್ಯಾಯ ಕಂಪನಿಗಳ ಹೆಸರು ಬಳಕೆ?: ಅನ್ನಭಾಗ್ಯ ಅಕ್ಕಿಯನ್ನು ಪಾಲಿಷ್ ಮಾಡಿದ ನಂತರ ಬಿಸ್ಲಿಲ್ಲಾ (ಕೇಜಿಗೆ ರೂ.65), ಡಬಲ್ ಗೋಡಾ (ಕೇಜಿಗೆ ರೂ.48), ಟಾಟಾ (ಕೇಜಿಗೆ ರೂ.65), ಮಿಲನ್, 5 ಸ್ಟಾರ್, ಬಾಸುಮತಿ (ಕೇಜಿಗೆ ರೂ.110) ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲವು ಸಲ ರಾಸಾಯನಿಕ ಬಳಸಿ ಕಂಪನಿ ಅಕ್ಕಿಯಂತೆಯೇ ತಯಾರು ಮಾಡುತ್ತಿದ್ದಾರೆ. ಇದನ್ನು ನೋಡಿದರೆ ಯಾರೂ ಅನ್ನಭಾಗ್ಯದ ಅಕ್ಕಿ ಎಂಬುದು ಗೊತ್ತಾಗುವುದಿಲ್ಲ. ಆದರೆ, ಇದಕ್ಕೆ ರಾಸಾಯನಿಕ ಬಳಸಿರುವುದರಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.
ಪ್ರತಿಷ್ಠಿತ ಕಂಪನಿಗಳು 25, 10, 5 ಕೇಜಿಯಂತೆ ಅಕ್ಕಿಯನ್ನು ಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಟ್ಟಿವೆ. ಈ ಬ್ಯಾಗ್ ಮೇಲೆ ತಮ್ಮ ಕಂಪನಿಯ ರಿಜಿಸ್ಪ್ರೇಶನ್ ನಂ, ದೂರವಾಣಿ, ಮೊಬೈಲ್ ನಂ. ಸೇರಿದಂತೆ ಕಂಪನಿಯ ಸಂಪೂರ್ಣ ವಿವರವನ್ನು ಮುದ್ರಿಸಲಾ ಗಿರುತ್ತದೆ. ಈ ಎಲ್ಲ ಸಂಪೂರ್ಣ ವಿವರವನ್ನು ನಕಲುದಾರರು ತಾವು ತಯಾರಿಸಿದ ಇಷ್ಟೇ ಅಳತೆ ಯ ಪ್ಲಾಸ್ಟಿಕ್ ಬ್ಯಾಗ್ ಮೇಲೆ ಮುದ್ರಿಸುತ್ತಾರೆ. ಇವು ಕಳಪೆ ಮಟ್ಟದ ಅಕ್ಕಿಯಂದು ಕಂಡು ಬರದಂತೆ ಜಾಣ್ಮೆ ವಹಿಸುತ್ತಾರೆ.
ಎಲ್ಲೆಲ್ಲಿ ಅಕ್ಕಿ ಖರೀದಿಸುತ್ತಾರೆ?: ಅನ್ನಭಾಗ್ಯ ಅಕ್ಕಿ ಯನ್ನು ವಿಜಯಪುರದಿಂದ ಖರೀದಿ ಮಾಡು ತ್ತಾರೆ. ವಿಜಯಪುರ ಜಿಲ್ಲೆಯ ನಾನಾ ಕಡೆಗಳಲ್ಲಿ ರುವ ಫಲಾನುಭವಿಗಳಿಂದ ಅಕ್ಕಿಯನ್ನು ಸಂಗ್ರಹಿ ಸುತ್ತಾರೆ. ಇದಕ್ಕಾಗಿ ಒಂದು ವ್ಯವಸ್ಥಿತ ಜಾಲವೇ ಇದೆ. ನಂತರ ಸಂಗ್ರಹಿಸಿದ ಈ ಅಕ್ಕಿಯನ್ನು ಮಹಾ ರಾಷ್ಟ್ರದಲ್ಲಿ ಪಾಲಿಷ್ ಮಾಡಿಸಲಾಗುತ್ತದೆ.
ಅನ್ನಭಾಗ್ಯ ಅಕ್ಕಿಗೆ ಪಾಲಿಷ್: ಬಾತಿ ಸಿದ್ದೇಶ್ವರ ನಿಲಯ ಎಂಬ ಹೆಸರಿನ ಈ ಗೋದಾಮು ಹೆಸರಿಗೆ ಮಾತ್ರವೇ ಕೋಳಿ ಫಾರಂ ಆಗಿದ್ದು, ಅಲ್ಲಿ ಅನ್ನಭಾಗ್ಯ ಅಕ್ಕಿಯ ಕಳ್ಳದಂಧೆಯೇ ಪ್ರಮುಖ ಕಸುಬಾಗಿತ್ತು.
ಅನ್ನಭಾಗ್ಯ ಅಕ್ಕಿಯನ್ನು ಬೇರೆಡೆಯಿಂದ ತರಿಸಿ ಕೊಂಡು , ಅದನ್ನು ಪಾಲಿಷ್ ಮಾಡಿ ನಂದಿ ಬ್ರಾಂಡ್ ಹೆಸರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಈ ದಂಧೆಯ ಪ್ರಮುಖ ರೂವಾರಿ ಉಮಾಪತಿ ವಿರುದ್ಧ ಈ ಮೊದಲೇ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಹೊರಬಂದು ಹಳೇ ಕಸುಬನ್ನೇ ಮುಂದುವರಿಸಿದ್ದ ಎನ್ನಲಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಾಳಿಗೆ ಹೋದ ಅಧಿಕಾರಿಗಳ ಮೇಲೆ ಲಾರಿ ಹರಿಸಲು ಯತ್ನ
ಉಡುಪಿಯಲ್ಲಿ ಮರಳು ಮಾಫಿಯಾದವರು ಡಿಸಿ, ಎಸಿ ಕೊಲೆಗೆ ಯತ್ನಿಸಿದ ಘಟನೆ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಅಕ್ಕಿ ಕಾಳದಂಧೆಕೋರರು ಅಟ್ಟಹಾಸ ಮೆರೆದಿದ್ದಾರೆ. ತಾಲೂಕಿನ ದೊಡ್ಡಬಾತಿ ಗ್ರಾಮಕ್ಕೆ ಅಕ್ರಮ ಅಕ್ಕಿ ದಾಸ್ತಾನು ಪರಿಶೀಲನೆಗೆ ತೆರಳಿದ್ದ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ಆಹಾರ ಇಲಾಖೆ ಉಪನಿರ್ದೇಶಕರ ಮೇಲೆ ಲಾರಿ ನುಗ್ಗಿಸಿ ಕೊಲ್ಲಲು ಯತ್ನಿಸಿದ ಘಟನೆ ಶನಿವಾರ ನಡೆದಿದೆ.
ತಾಲೂಕಿನ ದೊಡ್ಡಬಾತಿ ಗ್ರಾಮದ ದರ್ಗಾ ಸಮೀಪವಿರುವ ಗೋದಾಮಿನಲ್ಲಿ ಅನ್ನಭಾಗ್ಯ ಅಕ್ಕಿಯ ಅಕ್ರಮ ವಹಿವಾಟು ನಡೆಯುತ್ತಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ತಹಸೀಲ್ದಾರ್ ಸಂತೋಷ ಕುಮಾರ್, ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ ನೇತೃತ್ವದ ತಂಡ ದಾಳಿ ನಡೆಸಿತ್ತು.
ಈ ವೇಳೆ ಅಕ್ರಮ ಅಕ್ಕಿ ದಾಸ್ತಾನು ರೂವಾರಿ ಉಮಾಪತಿ ರೂ.50,000 ಲಂಚ ನೀಡಲು ಮುಂದಾಗಿದ್ದಾನೆ. ಆ ದೃಶ್ಯದ ಫೋಟೋ ತೆಗೆಸಿ ಅಧಿಕಾರಿಗಳನ್ನು ಸಿಕ್ಕಿಸಿಹಾಕಿಸಲು ಆತ ಸಂಚು ರೂಪಿಸಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಉಮಾಪತಿ, ಪುತ್ರ ಪ್ರಶಾಂತ್ ಅವರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಹಲ್ಲೆಗೂ ಯತ್ನಿಸಿದ್ದಾರೆ. ಸ್ಥಳದಿಂದ ನಿರ್ಗಮಿಸುತ್ತಿದ್ದ ಲಾರಿಯನ್ನು ಅಧಿಕಾರಿಗಳು ಅಡ್ಡಗಟ್ಟಿನಿಲ್ಲಿಸುವಂತೆ ಸೂಚಿಸಿದಾಗ ಚಾಲಕನು ಅಧಿಕಾರಿಗಳ ಮೇಲೆಯೇ ಲಾರಿ ನುಗ್ಗಿಸುವ ಪ್ರಯತ್ನ ಮಾಡಿದ್ದಾನೆ.
ಏಕಾಏಕಿ ಲಾರಿ ಮುನ್ನುಗ್ಗಿದ್ದರಿಂದ ಅಧಿಕಾರಿಗಳು ಪಕ್ಕಕ್ಕೆ ಸರಿದಿದ್ದು, ಚಾಲಕನು ಲಾರಿಯೊಂದಿಗೆ ಪರಾರಿಯಾಗಿದ್ದಾನೆ. ಪ್ರಮುಖ ಆರೋಪಿ ಉಮಾಪತಿ ಮತ್ತು ಆತನ ಪುತ್ರ ಪ್ರಶಾಂತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 560 ಚೀಲ ಅಕ್ಕಿ, ತೂಕದ ಯಂತ್ರ, ಒಂದು ಟ್ರ್ಯಾಕ್ಟರ್, ಎರಡು ಲಾರಿಗಳನ್ನು ಜಪ್ತಿ ಮಾಡಲಾಗಿದೆ.
(ಕನ್ನಡ ಪ್ರಭ ವಿಶೇಷ ವರದಿ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.