2ನೇ ಬಾರಿ ಮೊಬೈಲ್‌ ಕಳೆದುಕೊಂಡ ಐಪಿಎಸ್ ಅಧಿಕಾರಿ

By Web DeskFirst Published Dec 24, 2018, 9:40 AM IST
Highlights

ರಾಜ್ಯದ ಐಪಿಎಸ್ ಅಧಿಕಾರಿಯೋರ್ವರು 2ನೇ ಬಾರಿ ತಮ್ಮ ಮೊಬೈಲ್ ಫೋನ್ ಕಳೆದುಕೊಂಡಿದ್ದಾರೆ. ಎಚ್‌ಎಸ್‌ಆರ್‌ ಲೇಔಟ್‌ 4ನೇ ಹಂತದಲ್ಲಿ ನೆಲೆಸಿರುವ ರಾಜ್ಯ ಪೊಲೀಸ್‌ ಇಲಾಖೆಯ ತಾಂತ್ರಿಕ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಸಹಾಯ್‌, ಗುರುವಾರ ರಾತ್ರಿ 8,45ರ ಸುಮಾರಿಗೆ ಮನೆ ಮುಂದೆ ನಿಂತಿದ್ದರು. ಆ ವೇಳೆ ಅಲ್ಲಿಗೆ ಬಂದ ಕಿಡಿಗೇಡಿಯೊಬ್ಬ, ಎಡಿಜಿಪಿ ಅವರ ಕೈಯಲ್ಲಿದ್ದ ‘ಒನ್‌ ಪ್ಲಸ್‌-6’ ಮೊಬೈಲ್‌ ಕಸಿದು ಓಡಿ ಹೋಗಿದ್ದಾನೆ.

ಬೆಂಗಳೂರು :  ರಾಜ್ಯ ಹಿರಿಯ ಐಪಿಎಸ್‌ ಅಧಿಕಾರಿ ಸಂಜಯ್‌ ಸಹಾಯ್‌ ಅವರು ಎರಡನೇ ಬಾರಿಗೆ ಮೊಬೈಲ್‌ ಕಳ್ಳರ ಕೈ ಚಳಕಕ್ಕೆ ತುತ್ತಾಗಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ 4ನೇ ಹಂತದಲ್ಲಿ ನೆಲೆಸಿರುವ ರಾಜ್ಯ ಪೊಲೀಸ್‌ ಇಲಾಖೆಯ ತಾಂತ್ರಿಕ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಸಹಾಯ್‌, ಗುರುವಾರ ರಾತ್ರಿ 8,45ರ ಸುಮಾರಿಗೆ ಮನೆ ಮುಂದೆ ನಿಂತಿದ್ದರು. ಆ ವೇಳೆ ಅಲ್ಲಿಗೆ ಬಂದ ಕಿಡಿಗೇಡಿಯೊಬ್ಬ, ಎಡಿಜಿಪಿ ಅವರ ಕೈಯಲ್ಲಿದ್ದ ‘ಒನ್‌ ಪ್ಲಸ್‌-6’ ಮೊಬೈಲ್‌ ಕಸಿದು ಓಡಿ ಹೋಗಿದ್ದಾನೆ.

ತಕ್ಷಣವೇ ಎಡಿಜಿಪಿ ಅವರು, ಕಳ್ಳ ಎಂದೂ ಕೂಗಿಕೊಂಡಿದ್ದಾರೆ. ಈ ಕಿರುಚಾಟ ಕೇಳಿದ ಸ್ಥಳೀಯರು, ಸ್ಪಲ್ಪದೂರ ಆರೋಪಿಯನ್ನು ಬೆನ್ನಹಟ್ಟಿದ್ದಾರೆ. ಆದರೆ ಆತ ಶರವೇಗದಲ್ಲಿ ಸ್ಕೂಟರ್‌ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಆನಂತರ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಗೆ ತೆರಳಿ ಎಡಿಜಿಪಿ ದೂರು ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಹಳೆ ಪ್ರಕರಣಗಳ ಮೊಬೈಲ್‌ ಕಳ್ಳರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಎಡಿಜಿಪಿ ಮನೆ ಸುತ್ತಮುತ್ತಲಿನ ಕಟ್ಟಡಗಳ ಆಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಪರಿಶೀಲಿಸಿ ಕಿಡಿಗೇಡಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.

2016ರಲ್ಲಿ ರಾಜ್ಯ ಪೊಲೀಸ್‌ ಇಲಾಖೆಯ ಕುಂದು ಕೊರತೆ ಹಾಗೂ ಮಾನವ ಹಕ್ಕುಗಳ ವಿಭಾಗದ ಎಡಿಜಿಪಿ ಆಗಿದ್ದ ಸಂಜಯ್‌ ಸಹಾಯ್‌, ಇಂದಿರಾ ನಗರದ ಡಿಫೆನ್ಸಿ ಕಾಲೋನಿಯಲ್ಲಿ ನೆಲೆಸಿದ್ದರು. ತಮ್ಮ ಮನೆ ಸಮೀಪದ ಉದ್ಯಾನದಲ್ಲಿ ಫೆ.3 ರಂದು ಅವರು ವಾಯು ವಿಹಾರ ಮಾಡುತ್ತಿದ್ದರು. ಆಗ ಸ್ನೇಹಿತರೊಬ್ಬರು ಕರೆ ಮಾಡಿದ್ದರಿಂದ, ಸಂಭಾಷಣೆ ನಡೆಸುತ್ತಲೇ ವಾಯು ವಿಹಾರ ಮಾಡುವಾಗ ಬೈಕ್‌ನಲ್ಲಿ ಬಂದ ಕಿಡಿಗೇಡಿಗಳಿಬ್ಬರು, ಎಡಿಜಿಪಿ ಅವರ ಮೊಬೈಲ್‌ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಇಂದಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

click me!