ಮನೆಯ ಮೇಲೆ ಬಂಡವಾಳ ಹಾಕಿದರೆ ಲಾಭವಾಗುತ್ತಾ? ಈ 5 ವಿಷಯ ಗಮನದಲ್ಲಿಡಿ

By Suvarna Web DeskFirst Published Oct 13, 2017, 5:43 PM IST
Highlights

ಒಂದು ವರದಿ ಪ್ರಕಾರ ಭಾರತದಲ್ಲಿ 1.9 ಕೋಟಿ ಮನೆಗಳ ಕೊರತೆ ಇದೆಯಂತೆ. ಕೇಂದ್ರ ಸರಕಾರವು 2020ರಷ್ಟರಲ್ಲಿ ಎಲ್ಲರಿಗೂ ವಸತಿ ಕಲ್ಪಿಸುವ ತನ್ನ ಗುರಿಯನ್ನು ಈಡೇರಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೈಗೆಟುಕುವ ಬೆಲೆಯ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಸರಿಯಾದ ಸಮಯ ಇದಾಗಿದೆ. ಹಲವಾರು ಸಂಸ್ಥೆಗಳು ಇಂಥ ಅಗ್ಗದ ವಸತಿ ಯೋಜನೆಗಳ ಮೇಲೆ ಗಮನ ಹರಿಸುತ್ತಿವೆ. ಈ ಯೋಜನೆಗಳಿಗೆ ಕಡಿಮೆ ಬಂಡವಾಳ ಸಾಕಾಗುವುದರಿಂದ ಎಲ್ಲಾ ವರ್ಗದ ಹೂಡಿಕೆದಾರರಿಗೆ ಸೂಕ್ತವಾದ ಆಯ್ಕೆಯೂ ಆಗಿದೆ.

ಭಾರತದಲ್ಲಿ ಗೃಹ ನಿವೇಶನಗಳ(Residential Real Estate) ಮಾರುಕಟ್ಟೆ 12 ತಿಂಗಳಲ್ಲಿ 10.5% ಬೆಳವಣಿಗೆ ಸಾಧಿಸಿದೆ ಎಂಬ ವಿಚಾರ ಜಾಗತಿಕ ಪ್ರಾಪರ್ಟಿ ಕನ್ಸಲ್ಟೆಂಟ್ ಕಂಪನಿಯೊಂದರ ವರದಿಯಲ್ಲಿದೆ. ಈ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ಸಿಕ್ಕ ಲಾಭಕ್ಕೆ ಹೋಲಿಸಿದರೆ ಜೂನ್ 2017ರವರೆಗೆ ಸಿಕ್ಕ ಲಾಭವು ಬರೋಬ್ಬರಿ 70%. ಈ ಅಂಕಿ ಅಂಶ ನೋಡಿದರೆ ರಿಯಲ್ ಎಸ್ಟೇಟ್'ನಲ್ಲಿ ಹೂಡಿಕೆ ಮಾಡಲು ಮನಸು ಎಳೆಯುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಮುಖ್ಯವಾದ ವಿಷಯವೆಂದರೆ ಎಲ್ಲಾ ರಿಯಲ್ ಎಸ್ಟೇಟ್ ಪ್ರಾಜೆಕ್ಟ್'ಗಳು ಒಂದೇ ತೆರನಾಗಿ ಲಾಭ ತರುವುದಿಲ್ಲ. ಈ ಕ್ಷೇತ್ರದ ಅನಿಶ್ಚಿತತೆ ಬಗ್ಗೆ ಯಾರೂ ಅಷ್ಟಾಗಿ ಗಮನ ಹರಿಸುವುದಿಲ್ಲ.

ಈ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್'ನಲ್ಲಿ ನೀವು ಹಣ ಹೂಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ 5 ವಿಷಯಗಳು ಈ ಕೆಳಕಂಡಂತಿವೆ.

1) ದೇಶದೆಲ್ಲೆಡೆ ಲಾಭ ಒಂದೇ ರೀತಿಯಲ್ಲಿರುವುದಿಲ್ಲ:
ಬೇರೆ ಹಣಕಾಸು ಆಸ್ತಿಗಳಂತೆ ರಿಯಲ್ ಎಸ್ಟೇಟ್ ಪ್ರಾಜೆಕ್ಟ್'ನ ಆಯ್ಕೆ ವಿಚಾರದಲ್ಲೂ ಎಚ್ಚರಿಕೆ ವಹಿಸಬೇಕು. ನಗರದಿಂದ ಹಿಡಿದು, ಯೋಜನೆಯ ಸ್ಥಳ, ಬೆಲೆ, ಸ್ಥಳೀಯ ಮಾರುಕಟ್ಟೆಯ ಬೇಡಿಕೆ ಇತ್ಯಾದಿ ವಿಚಾರಗಳು ನಿಮ್ಮ ರಿಟರ್ನ್ಸ್ ಮೇಲೆ ಪರಿಣಾಮ ಬೀರುತ್ತವೆ.

2) ದೀರ್ಘಾವಧಿ ಹೂಡಿಕೆಯಾಗಿ ರಿಯಲ್ ಎಸ್ಟೇಟ್:
ರಿಯಲ್ ಎಸ್ಟೇಟ್ ಈಗ ಹಿಂದಿನಂತಿಲ್ಲ. ಮೊದಲಾಗಿದ್ದರೆ ರಿಯಲ್ ಎಸ್ಟೇಟ್ ಮೇಲೆ ಹಣ ಹೂಡಿದರೆ ಬೇಗನೇ ಲಾಭ ತಂದುಕೊಡುತ್ತಿತ್ತು. ಈಗ ಲಾಭಕ್ಕಾಗಿ ದೀರ್ಘಾವಧಿಯವರೆಗೆ ಕಾಯಬೇಕು. ಹೊಸದಾಗಿ ಜಾರಿಗೆ ತಂದ ರಿಯಲ್ ಎಸ್ಟೇಟ್ ಕಾಯ್ದೆಯಿಂದ ಈ ಕ್ಷೇತ್ರವು ದೀರ್ಘಕಾಲದ ಲಾಭಕ್ಕೆ ಸೂಕ್ತವೆನಿಸಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ತರುವ ಹೂಡಿಕೆಗಾಗಿ ನೀವು ರಿಯಲ್ ಎಸ್ಟೇಟ್ ಆಯ್ಕೆ ಮಾಡಿಕೊಳ್ಳಬೇಕೆಂದಿದ್ದರೆ ನಿಮ್ಮ ಪ್ರಯತ್ನವನ್ನು ಕೈಬಿಡಿ. ದೀರ್ಘಕಾಲದ ಲಾಭದ ನಿರೀಕ್ಷೆ ನಿಮಗಿದ್ದರೆ ರಿಯಲ್ ಎಸ್ಟೇಟ್ ಸೂಕ್ತ ಆಯ್ಕೆ.

3) ವಾಣಿಜ್ಯ ಭೂಮಿ(Commercial Real Estate) ಒಳ್ಳೆಯ ಆಯ್ಕೆ:
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬಂಡವಾಳ ಹೂಡುವವರು ಸಾಮಾನ್ಯವಾಗಿ ವಾಣಿಜ್ಯ ಪ್ರದೇಶಗಳಿಗಿಂತ ಹೆಚ್ಚಾಗಿ ಗೃಹ ಪ್ರದೇಶಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ. ಆದರೆ, ಕಮರ್ಷಿಯಲ್ ರಿಯಲ್ ಎಸ್ಟೇಟ್'ನಲ್ಲೂ ಒಳ್ಳೆಯ ಲಾಭ ತರುವ ಯೋಜನೆಗಳಿವೆ. 2017ರಲ್ಲಿ ಇಲ್ಲಿಯವರೆಗೆ ವಾಣಿಜ್ಯ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 2 ಬಿಲಿಯನ್ ಡಾಲರ್ (ಸುಮಾರು 13 ಸಾವಿರ ಕೋಟಿ ರೂ.) ಮೌಲ್ಯದ ವಿದೇಶೀ ಬಂಡವಾಳ ಹೂಡಿಕೆ ಒಪ್ಪಂದಗಳಾಗಿವೆ. ಜಾಗತಿಕ ಮಟ್ಟದ ದೊಡ್ಡದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಗಳು ಕಮರ್ಷಿಯಲ್ ಪ್ರಾಜೆಕ್ಟ್'ಗಳಲ್ಲಿ ಬಂಡವಾಳ ಹೂಡುತ್ತಿರುವುದು ನಿಮ್ಮ ಗಮನದಲ್ಲಿರಲಿ.

4) ಅಗ್ಗದ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಸಂಚಲನ:
ಒಂದು ವರದಿ ಪ್ರಕಾರ ಭಾರತದಲ್ಲಿ 1.9 ಕೋಟಿ ಮನೆಗಳ ಕೊರತೆ ಇದೆಯಂತೆ. ಕೇಂದ್ರ ಸರಕಾರವು 2020ರಷ್ಟರಲ್ಲಿ ಎಲ್ಲರಿಗೂ ವಸತಿ ಕಲ್ಪಿಸುವ ತನ್ನ ಗುರಿಯನ್ನು ಈಡೇರಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೈಗೆಟುಕುವ ಬೆಲೆಯ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಸರಿಯಾದ ಸಮಯ ಇದಾಗಿದೆ. ಹಲವಾರು ಸಂಸ್ಥೆಗಳು ಇಂಥ ಅಗ್ಗದ ವಸತಿ ಯೋಜನೆಗಳ ಮೇಲೆ ಗಮನ ಹರಿಸುತ್ತಿವೆ. ಈ ಯೋಜನೆಗಳಿಗೆ ಕಡಿಮೆ ಬಂಡವಾಳ ಸಾಕಾಗುವುದರಿಂದ ಎಲ್ಲಾ ವರ್ಗದ ಹೂಡಿಕೆದಾರರಿಗೆ ಸೂಕ್ತವಾದ ಆಯ್ಕೆಯೂ ಆಗಿದೆ.

5) ಜಿಎಸ್'ಟಿ ಪರಿಣಾಮ:
ಜಿಎಸ್'ಟಿಗಿಂತ ಮುಂಚೆ ರಿಯಲ್ ಎಸ್ಟೇಟ್ ಮೇಲಿನ ಬಂಡವಾಳಕ್ಕೆ 4.5% ಸರ್ವಿಸ್ ಟ್ಯಾಕ್ಸ್ ಮಾತ್ರ ಕಟ್ಟಬೇಕಿತ್ತು. ಜಿಎಸ್'ಟಿ ಬಂದ ಮೇಲೆ 12% ತೆರಿಗೆ ಕಟ್ಟಬೇಕಾಗಿದೆ. ಆದರೆ, ಹಿಂದಿನಂತೆ ಈಗ ಯಾವುದೇ ಹಿಡನ್ ಚಾರ್ಜಸ್'ಗಳಿರುವುದಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಯೋಜನೆಗಳ ಒಟ್ಟಾರೆ ವೆಚ್ಚವು ಕಡಿಮೆಯಾಗುವ ಸಾಧ್ಯತೆ ಇದೆ.  ಅಂದರೆ, ಬಹುತೇಕ ಹೂಡಿಕೆದಾರರಿಗೆ ರಿಯಲ್ ಎಸ್ಟೇಟ್'ನಲ್ಲಿ ಒಳ್ಳೆಯ ಆಯ್ಕೆಗಳಿವೆ ಎಂದಾಯಿತು.

ಸರಿಯಾಗಿ ಅವಲೋಕಿಸಿ ದೀರ್ಘಾವಧಿಯ ಲಾಭದ ನಿರೀಕ್ಷೆಯೊಂದಿಗೆ ಹೂಡಿಕೆ ಮಾಡುವವರಿಗೆ ರಿಯಲ್ ಎಸ್ಟೇಟ್ ಈಗಲೂ ಲಾಭದ ಕ್ಷೇತ್ರವಾಗಿದೆ.

- ಅಧಿಲ್ ಶೆಟ್ಟಿ,
ಸಿಇಒ, ಬ್ಯಾಂಕ್'ಬಜಾರ್ ಡಾಟ್ ಕಾಮ್

click me!