
ಶ್ರೀನಗರ: ಜೈಷ್ ಉಗ್ರರು ಗುರುವಾರ ನಡೆಸಿದ ಭೀಕರ ದಾಳಿಯಲ್ಲಿ 42 ಯೋಧರು ಹುತಾತ್ಮರಾಗಿದ್ದಾರೆ. ಹೇಡಿಗಳ ರೀತಿಯಲ್ಲಿ ಕಾರಿನಲ್ಲಿ ಸ್ಫೋಟಕ ತುಂಬಿಕೊಂಡು ಬಂದಿದ್ದ ಉಗ್ರನೊಬ್ಬ ನಡೆಸಿದ ಆತ್ಮಾಹುತಿ ದಾಳಿ, ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ.
ಆಘಾತಕಾರಿ ಸಂಗತಿಯೆಂದರೆ ಇಂಥದ್ದೊಂದು ದಾಳಿ ನಡೆಯುವ ಬಗ್ಗೆ ಕೆಲ ದಿನಗಳ ಹಿಂದೆ ಗುಪ್ತಚರ ಇಲಾಖೆ ಸೇನೆಗೆ ಮಾಹಿತಿ ನೀಡಿತ್ತಂತೆ. ಸಿರಿಯಾ ದೇಶದಲ್ಲಿ ಬಂಡುಕೋರರು ಕಾರುಗಳನ್ನು ಬಳಸಿ ನಡೆಸುತ್ತಿರುವ ದಾಳಿಯ ಮಾದರಿಯಲ್ಲೇ ಕಾಶ್ಮೀರದಲ್ಲಿ ಸೇನೆಯನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿತ್ತಂತೆ. ಈ ಬಗ್ಗೆ ಸೇನೆಯ ಹಿರಿಯ ಅಧಿಕಾರಿಗಳು ಚರ್ಚೆ ಕೂಡಾ ನಡೆಸಿದ್ದರು. ಆದರೆ ಇಂಥ ದಾಳಿ ಭಾರತದಲ್ಲಿ ನಡೆದಿದ್ದರ ಇತಿಹಾಸ ಇಲ್ಲದ ಕಾರಣ, ಇಂಥ ದಾಳಿಯನ್ನು ತಡೆಯುವುದು ಹೇಗೆ ಎನ್ನುವುದು ಕೂಡಾ ಗೊತ್ತಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ದಾಳಿ ತಡೆಯಲು ಹಲವು ಉಪಾಯ
ಒಂದು ವೇಳೆ ಕಾರು ಬಾಂಬರ್ ದಾಳಿ ನಡೆಸಲು ಬಂದರೆ ಅದನ್ನು ತಡೆಯುವುದು ಸಾಧ್ಯವಿಲ್ಲ. ಅದರ ಬದಲು ಯೋಧರು ಸಂಚರಿಸುವ ವಾಹನಗಳನ್ನು ಹಗಲಿನ ವೇಳೆ ಬದಲು ರಾತ್ರಿ ವೇಳೆ ಸಂಚರಿಸಲು ಅನುವು ಮಾಡಿಕೊಡುವ ಬಗ್ಗೆ ಸೇನೆಯಲ್ಲಿ ಚರ್ಚೆ ನಡೆದಿತ್ತು. ಹಗಲು ಹೊತ್ತಿನಲ್ಲಿ ಹೆಚ್ಚಿನ ಜನಸಂದಣಿ ಇರುವ ಕಾರಣ, ಎಲ್ಲಾ ವಾಹನಗಳ ತಪಾಸಣೆ ಕಷ್ಟ. ಜೊತೆಗೆ ದಾಳಿ ನಡೆದರೆ ಹೆಚ್ಚಿನ ಸಾವು ನೋವು ಸಂಭವಿಸುವ ಸಾಧ್ಯತೆ ಇರುತ್ತದೆ.
ಹೀಗಾಗಿ ರಾತ್ರಿ ಹೊತ್ತಿನಲ್ಲಿ ಮಾತ್ರವೇ ಯೋಧರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ, ರಸ್ತೆಗಳಲ್ಲಿ ವಾಹನ ಸಂಚಾರವೂ ಕಡಿಮೆ ಇರುತ್ತದೆ, ವಾಹನಗಳ ತಪಾಸಣೆಯೂ ಸುಲಭ. ಜೊತೆಗೆ ಯೋಧರ ವಾಹನಗಳಿಗೆ ಹಾದಿ ಸುಗಮ ಮಾಡಿಕೊಡುವ ಮುಂಚೂಣಿ ವಾಹನಗಳು ಕೂಡಾ ಸುತ್ತಮುತ್ತಲ ಪ್ರದೇಶದ ಮೇಲೆ ನಿಗಾ ಇಟ್ಟುಕೊಂಡು ಮುಂದೆ ಸಾಗಬಹುದು ಎಂಬ ಯೋಜನೆ ರೂಪಿಸಲಾಗಿತ್ತು. ಅಷ್ಟರಲ್ಲೇ ದಾಳಿ ನಡೆದು ಹೋಯಿತು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ