
ವಾಸಕ್ಕೊಂದು ಸ್ವಂತ ಮನೆ ಕಟ್ಟಿಕೊಳ್ಳಬೇಕು ಅಥವಾ ಮನೆ ಕಟ್ಟಿಸುವುದಕ್ಕೊಂದು ಸೈಟು ಕೊಳ್ಳಬೇಕು ಎಂಬ ಜನಸಾಮಾನ್ಯರ ಕನಸನ್ನೇ ಬಂಡವಾಳ ಮಾಡಿಕೊಂಡು ಮನಸೋಇಚ್ಛೆ ದರ ನಿಗದಿ ಮಾಡುವುದು, ಮನೆ ಅಥವಾ ಲೇಔಟ್ ಯೋಜನೆಯಲ್ಲಿ ದಿಢೀರ್ ಬದಲಾವಣೆ ಮಾಡುವುದು, ಉದ್ದೇಶಪೂರ್ವಕವಾಗಿ ವಿಳಂಬ ಮಾಡುವುದು ಮುಂತಾದ ಅಟಾಟೋಪಗಳನ್ನು ಮೆರೆಯುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೇರಾ ಕಾಯ್ದೆ ಜಾರಿಯಾಗಿದೆ. ಕಳೆದ ಮೇ ತಿಂಗಳಿನಲ್ಲೇ ಬಹುತೇಕ ರಾಜ್ಯಗಳು ಕೇಂದ್ರ ಸರ್ಕಾರದ ರೇರಾ ಕಾಯ್ದೆಗೆ ನಿಯಮಾವಳಿ ರಚಿಸಿ ತಮ್ಮ ರಾಜ್ಯದಲ್ಲಿ ಜಾರಿಗೊಳಿಸಿದ್ದರೂ ಕರ್ನಾಟಕ ಸರ್ಕಾರ ಮಾತ್ರ ವಿಳಂಬ ಧೋರಣೆ ತಳೆದಿತ್ತು. ಆದರೆ, ಇದೀಗ ನಾಗರಿಕ ಸಂಘಟನೆಗಳ ಒತ್ತಡ ಮತ್ತು ಜನಸಾಮಾನ್ಯರ ಒತ್ತಾಸೆಗೆ ಮಣಿದು ಜು.10ರಿಂದ ಕರ್ನಾಟಕ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಜಾರಿಗೊಳಿಸಿದೆ. ಅದು ನಿಜಕ್ಕೂ ಜನಸಾಮಾನ್ಯರಿಗೆ ಅನುಕೂಲಕರವಾಗಿದೆಯೇ? ಅಥವಾ ಬಿಲ್ಡರ್‌ಗಳ ಒತ್ತಡಕ್ಕೆ ಮಣಿದು ಅವರಿಗೆ ಅನುಕೂಲಕರವಾಗಿ ಜಾರಿಗೊಳಿಸಲಾಗಿದೆಯೇ? ಕೇಂದ್ರ ಸರ್ಕಾರದ ಕಾಯ್ದೆಯಲ್ಲಿದ್ದ ಯಾವ ಅಂಶಗಳನ್ನು ಇಲ್ಲಿ ಕೈಬಿಡಲಾಗಿದೆ? ಇದು ಜಾರಿಗೆ ಬಂದರೆ ಈಗಾಗಲೇ ಫ್ಲ್ಯಾಟ್/ಸೈಟ್ ಖರೀದಿಸಿದವರಿಗೆ ಅನ್ವಯಿಸುತ್ತದೆಯೇ? ಸಮಗ್ರ ಮಾಹಿತಿ ಇಲ್ಲಿದೆ.
ಜುಲೈ 10ರಿಂದ ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆ ಅಥವಾ ನಿರ್ಮಾಣ ಸಂಸ್ಥೆಗಳು ತಾವು ನಿರ್ಮಿಸುವ ವಸತಿ ಬಡಾವಣೆ, ಅಪಾರ್ಟ್‌ಮೆಂಟ್, ವಾಣಿಜ್ಯ ಸಮುಚ್ಚಯ ಸೇರಿದಂತೆ ಎಲ್ಲಾ ಬಗೆಯ ನಿರ್ಮಾಣ ಯೋಜನೆಗಳನ್ನು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಣಿ ಮಾಡುವುದು ಕಡ್ಡಾಯ. ರಿಯಲ್ ಎಸ್ಟೇಟ್ ಏಜೆಂಟರು ಕೂಡ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಯೋಜನೆಗಳಿಗೆ ಗ್ರಾಹಕರಿಂದ ಮುಂಗಡ ಪಡೆಯುವ ಮೊತ್ತದಲ್ಲಿ ಶೇ.70ರಷ್ಟನ್ನು ಆ ಯೋಜನೆಯ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಠೇವಣಿ ಇಡಬೇಕು. ಯೋಜನೆಯಲ್ಲಿ ಯಾವುದೇ ಹಂತದಲ್ಲಿ ಬದಲಾವಣೆ ಮಾಡಲು ಮೂರನೇ ಎರಡಷ್ಟು ಗ್ರಾಹಕರ ಒಪ್ಪಿಗೆ ಕಡ್ಡಾಯ.
ಯಾವುದೇ ನಿಯಮವನ್ನು ಉಲ್ಲಂಘಿಸಿದರೆ ನಿರ್ಮಾಣ ಸಂಸ್ಥೆಯ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಬಹುದು. ಯೋಜನೆಯ ನಕ್ಷೆ ಮತ್ತು ವಿವರ ಅಪ್‌ಡೇಟ್ ಮಾಡದೇ ಇದ್ದರೆ ಯೋಜನಾವೆಚ್ಚದ ಶೇ.10ರಷ್ಟು ದಂಡ ವಿಧಿಸಬಹುದು.ಎರಡನೇ ಬಾರಿ ನಿಯಮ ಉಲ್ಲಂಘಿಸಿದರೆ ಹೆಚ್ಚುವರಿಯಾಗಿ ಶೇ.10 ದಂಡ ವಿಧಿಸಬಹುದು. ನಿಯಮ ಉಲ್ಲಂಘಿಸುವ ಏಜೆಂಟರಿಗೂ ಅಪಾರ್ಟ್‌ಮೆಂಟ್‌ನ ಒಟ್ಟು ವೆಚ್ಚದ ಶೇ.10ರಷ್ಟು ದಂಡ ವಿಧಿಸುವ ಅವಕಾಶ ಇದೆ. ಯೋಜನೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಹಸ್ತಾಂತರಿಸದೇ ಇದ್ದಲ್ಲಿ ಬಿಲ್ಡರ್‌ಗಳು ಗ್ರಾಹಕರಿಗೆ ಬಡ್ಡಿ ಪಾವತಿಸಬೇಕು. ನಿಯಮ ಉಲ್ಲಂಘಿಸುವ ಬಿಲ್ಡರ್‌ಗಳನ್ನು ಜೈಲಿಗೆ ಕಳಿಸುವ ಅವಕಾಶ ಕೇಂದ್ರದ ಕಾಯ್ದೆಯಲ್ಲಿತ್ತು. ರಾಜ್ಯದಲ್ಲಿ ಅದನ್ನು ಕೈಬಿಡಲಾಗಿದೆ.
ಸರ್ಕಾರ ಶೇ.60ರಷ್ಟು ಶುದ್ಧ ಕ್ರಯಪತ್ರ ಮಾಡಿಕೊಟ್ಟ ಚಾಲ್ತಿಯಲ್ಲಿರುವ ಯೋಜನೆ ಮತ್ತು ಶೇ.100ರಷ್ಟು ಪೂರ್ಣಗೊಂಡ ಯೋಜನೆಗಳನ್ನು ರೇರಾ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಆದರೆ, ಈ ಯೋಜನೆಗಳ ಸ್ಥಿತಿಗತಿಯನ್ನು ದೃಢೀಕರಣಗೊಳಿಸುವವರು ಯಾರು?ಜೊತೆಗೆ, ಸ್ವಾಧೀನಪತ್ರ (ಒ.ಸಿ.) ಕಡ್ಡಾಯಗೊಳಿಸಿದ್ದರೆ, ಯೋಜನೆಯನು ಸಕಲ ಸೌಲಭ್ಯಗಳಸಹಿತವಾಗಿ ಪೂರ್ಣಗೊಳಿಸುವುದು.ನಿರ್ಮಾಣ ಸಂಸ್ಥೆಗಳಿಗೆ ಅನಿವಾರ್ಯವಾಗುತ್ತಿತ್ತು. ಆದರೆ, ಸ್ವಾಧೀನ ಪತ್ರವನ್ನು ಕಡ್ಡಾಯಗೊಳಿಸಿಲ್ಲ. ಜೊತೆಗೆ, ಬಿಡಿಎ, ಗೃಹಮಂಡಳಿ ಸೇರಿದಂತೆ ವಿವಿಧ ಸರ್ಕಾರಿ ನಿರ್ಮಾಣ ಸಂಸ್ಥೆಗಳ ಕುರಿತು ಸ್ಪಷ್ಟ ಧೋರಣೆ ಇಲ್ಲ. ಈ ಬಗ್ಗೆ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಫೈಟ್ ಫಾರ್ ರೇರಾದಂತಹ ಸಂಘಟನೆಗಳು ಮತ್ತು ನಾಗರಿಕರು ಆಕ್ಷೇಪ ಎತ್ತಿದ್ದಾರೆ.
ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗೃಹ ನಿರ್ಮಾಣ ಸಹಕಾರ ಸಂಘಗಳ ಹೆಸರಿನಲ್ಲಿ, ಒಂದು ಕಡೆ ಸರ್ಕಾರದ ವಿವಿಧ ಸವಲತ್ತು ಪಡೆಯುವುದು, ಮತ್ತೊಂದು ಕಡೆ ರಿಯಲ್ ಎಸ್ಟೇಟ್ ದಂಧೆ ನಡೆಸುವ ವ್ಯವಹಾರ ಎಗ್ಗಿಲ್ಲದೆ ಸಾಗಿದೆ. ಆ ಹಿನ್ನೆಲೆಯಲ್ಲಿ ಇದೀಗ ರೇರಾ ವ್ಯಾಪ್ತಿಗೆ ಸಹಕಾರ ಸಂಘಗಳನ್ನೂ ತರಲಾಗಿದೆ. ನಿವೇಶನ, ಮನೆ, ವಸತಿ ಸಮುಚ್ಚಯ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಸಹಕಾರ ಸಂಸ್ಥೆಗಳೂ ನಿಯಮಾವಳಿ ಪ್ರಕಾರ ನೋಂದಣಿ ಮಾಡಿಸಬೇಕಿದೆ. ಮೂರು ವರ್ಷದ ಆದಾಯ ತೆರಿಗೆ ರಿಟರ್ನ್ಸ್, ಲೆಕ್ಕ ಪರಿಶೋಧನಾ ವರದಿ ಸಲ್ಲಿಕೆ ಮತ್ತು ವೆಬ್‌ಸೈಟ್‌ನಲ್ಲಿ ಪ್ರತಿ ಸದಸ್ಯರ ಹೆಸರು, ಹಂಚಿಕೆಗೆ ಅನುಸರಿಸಿದ ಹಿರಿತನ ಮತ್ತಿತರ ಮಾನದಂಡಗಳನ್ನು ನಮೂದಿಸಬೇಕಿದೆ. ಇದು ಗೃಹ ನಿರ್ಮಾಣ ಸಹಕಾರ ಸಂಸ್ಥೆಗಳ ಅವ್ಯವಹಾರಗಳಿಗೆ ಕಡಿವಾಣ ಹಾಕಲಿದೆ.
ಸ್ವಂತ ಬಳಕೆಯ ಉದ್ದೇಶಕ್ಕೆ ಕಟ್ಟುವ ಮನೆಗಳು ರೇರಾ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳು ಕೈಗೊಳ್ಳುವ ಮಾರಾಟ ಅಥವಾ ವ್ಯವಹಾರದ ಉದ್ದೇಶದ ಎಲ್ಲಾ ಯೋಜನೆಗಳು ರೇರಾ ವ್ಯಾಪ್ತಿಗೆ ಬರುತ್ತವೆ. ಈಗಾಗಲೇ ಶೇ.100ರಷ್ಟು ಪೂರ್ಣಗೊಂಡಿರುವ ಯೋಜನೆಗಳು ಅಥವಾ ಶೇ.60ರಷ್ಟು ಕ್ರಯಪತ್ರ ಮಾಡಲಾಗಿರುವ ಯೋಜನೆಗಳು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಸ್ವಾಧೀನಪತ್ರ ಮತ್ತು ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದರೂ ಕಾಯ್ದೆಯಿಂದ ವಿನಾಯ್ತಿ ಸಿಗಲಿದೆ.
ಕಳೆದ ವರ್ಷ ನೋಟು ಅಮಾನ್ಯೀಕರಣದ ನಂತರ ರಿಯಲ್ ಎಸ್ಟೇಟ್ ದರಗಳೆಲ್ಲ ಕುಸಿಯುತ್ತವೆ ಎಂದು ಹೇಳಲಾಗಿತ್ತು. ಆದರೆ, ಹಾಗೇನೂ ಆಗಿಲ್ಲ. ಇತ್ತೀಚೆಗೆ ಜಿಎಸ್‌ಟಿ ಜಾರಿಗೆ ಬಂದ ಮೇಲೆ ರಿಯಲ್ ಎಸ್ಟೇಟ್ ದರಗಳು ಏರುತ್ತವೆ ಎನ್ನಲಾಗುತ್ತಿದೆ. ಅದರ ನಿಜವಾದ ಪರಿಣಾಮವೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಈಗ ರೇರಾ ಜಾರಿಗೆ ಬಂದಿರುವುದರಿಂದ ಏನಾಗುತ್ತದೆ? ಫ್ಲ್ಯಾಟ್, ಸೈಟು ಹಾಗೂ ಮನೆಗಳ ದರ ಇಳಿಯುತ್ತದೆಯೇ ಅಥವಾ ಏರುತ್ತದೆಯೇ? ಈ ಪ್ರಶ್ನೆಗೆ ರಿಯಲ್ ಎಸ್ಟೇಟ್ ಕಂಪನಿಗಳೇ ವಿಭಿನ್ನ ಹೇಳಿಕೆ ನೀಡುತ್ತಿವೆ. ಒಬ್ಬರು ಇಳಿಯುತ್ತದೆ ಅಂದರೆ ಇನ್ನೊಬ್ಬರು ಏರುತ್ತದೆ ಎನ್ನುತ್ತಾರೆ.
ರಿಯಲ್ ಎಸ್ಟೇಟ್ ಕಂಪನಿಗಳು, ನಿರ್ಮಾಣ ಸಂಸ್ಥೆಗಳು ಹಾಗೂ ಏಜೆಂಟರಿಂದ ಯಾವುದೇ ಬಗೆಯ ಮೋಸವಾದರೆ ಗ್ರಾಹಕರು ಕೂಡಲೇ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ನೀಡಬಹುದು. ರಾಜ್ಯ ಮಟ್ಟದಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮತ್ತು ಅದಕ್ಕೆ ಪೂರಕವಾದ ನ್ಯಾಯಮಂಡಳಿ ರಚನೆ ಮಾಡಲಾಗುತ್ತದೆ. ಈ ಪ್ರಾಧಿಕಾರವೇ ದೂರುಗಳನ್ನು ನಿರ್ವಹಿಸಲಿದೆ. ದೂರು ಸಲ್ಲಿಕೆಯಾದ 60 ದಿನಗಳಲ್ಲೇ ಪ್ರಕರಣ ಇತ್ಯರ್ಥಪಡಿಸಬೇಕು. ಅಲ್ಲಿ ಪ್ರಕರಣ ಇತ್ಯರ್ಥಗೊಂಡ ಬಳಿಕ ಬೇಕಿದ್ದರೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು.
ಕೇಂದ್ರ ಸರ್ಕಾರ ರೂಪಿಸಿದ ರೇರಾ ಕಾಯ್ದೆಯಲ್ಲಿ ಬಿಲ್ಡರ್‌ಗಳಿಗೆ ಕಠಿಣ ಎನ್ನಿಸುವಂತಹ ನಿಯಮಗಳಿದ್ದವು. ಅವುಗಳಲ್ಲಿ ಕೆಲವನ್ನು ಕರ್ನಾಟಕದಲ್ಲಿ ಕೈಬಿಡಲಾಗಿದೆ. ಅವು ಹೀಗಿವೆ:
1)ಕಟ್ಟಡದ ನಿರ್ಮಾಣ ಲೋಪಗಳಿಗೆ ಬಿಲ್ಡರ್‌ಗಳು ಐದು ವರ್ಷಗಳ ಗ್ಯಾರಂಟಿ ನೀಡಬೇಕು ಎಂಬ ನಿಯಮ ಕೈಬಿಡಲಾಗಿದೆ.
2) ನಿಯಮ ಉಲ್ಲಂಘಿಸುವ ಬಿಲ್ಡರ್‌ಗಳಿಗೆ ಜೈಲುಶಿಕ್ಷೆ ವಿಧಿಸುವ ನಿಯಮ ಇಲ್ಲ ಬಿಲ್ಡರ್‌ಗಳು ಏನೇ ತಪ್ಪು ಮಾಡಿದ್ದರೂ ಯೋಜನೆಯ ಒಟ್ಟು ವೆಚ್ಚದ ಶೇ.10ರಷ್ಟು ಹಣವನ್ನು ದಂಡದ ರೂಪದಲ್ಲಿ ಪಾವತಿಸಿದರೆ ಸಾಕು. ಈ ‘ದಯೆ’ ಕೇಂದ್ರದ ಕಾಯ್ದೆಯಲ್ಲಿರಲಿಲ್ಲ.
3)ರಿಯಲ್ ಎಸ್ಟೇಟ್ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಿಸುವಾಗ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚನೆ ನಡೆಸಬೇಕು. ಆದರೆ, ಆಯ್ಕೆ ಪ್ರಕ್ರಿಯೆ ಹೇಗೆ ಎಂಬ ಬಗ್ಗೆ ವಿವರಣೆ/ ಸ್ಪಷ್ಟತೆ ಇಲ್ಲ
1)ಯೋಜನೆ ಪೂರ್ಣಗೊಂಡ ಬಗ್ಗೆ ಪ್ರಮಾಣ ಪತ್ರ (ಕಂಪ್ಲೀಶನ್ ಸರ್ಟಿಫಿಕೆಟ್- ಸಿ.ಸಿ.) ಪಡೆಯದಿರುವ ಎಲ್ಲಾ ನಿರ್ಮಾಣ ಯೋಜನೆಗಳು ರೇರಾ ವ್ಯಾಪ್ತಿಗೆ
2) ಪ್ರಾಧಿಕಾರದಲ್ಲಿ ಯೋಜನೆ ನೋಂದಣಿ ಮಾಡಿಸಿದ ಮೂರು ತಿಂಗಳಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ಖರೀದಿದಾರರಿಂದ ಪಡೆದ ಮುಂಗಡದ ಶೇ.70ರಷ್ಟನ್ನು ಠೇವಣಿ ಇಡಬೇಕು.
3) ಯೋಜನೆಯ ವಿವರ, ನಕ್ಷೆ, ಖರೀದಿದಾರರ ಮಾಹಿತಿ, ಯೋಜನೆ ಪೂರ್ಣಗೊಳಿಸುವ ನಿಗದಿತ ಅವಧಿ, ಯೋಜನಾವೆಚ್ಚ ಮುಂತಾದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಹಾಕಬೇಕು.
4) ಪ್ರತಿ ಮೂರು ತಿಂಗಳಿಗೊಮ್ಮೆ ಯೋಜನೆಯ ಪ್ರಗತಿ ವರದಿಯನ್ನೂ ಸಂಪೂರ್ಣ ವಿವರದೊಂದಿಗೆ ಅಪ್‌ಡೇಟ್ ಮಾಡಬೇಕು.
5) ಯಾವುದೇ ವಿಳಂಬ ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆ ತನ್ನ ಗ್ರಾಹಕರಿಗೆ ಅಥವಾ ಗ್ರಾಹಕ ಸಂಸ್ಥೆಗೆ ನೀಡಬೇಕಾದ ಬಡ್ಡಿಯ ದರವನ್ನು ಎಸ್‌ಬಿಐನ ಬಡ್ಡಿದರ ಮತ್ತು ಹೆಚ್ಚುವರಿ ಶೇ.2ರಷ್ಟು ಅಧಿಕ ಲೆಕ್ಕದಲ್ಲಿ ನಿಗದಿ ಮಾಡುವುದು.
6) ನಿರ್ಮಾಣ ಸಂಸ್ಥೆಗಳು ಕಾರ್ಪೆಟ್ ಏರಿಯಾ ಸೇರಿ ಅಪಾರ್ಟ್‌ಮೆಂಟಿನ ವಿಸ್ತೀರ್ಣವನ್ನು ಲೆಕ್ಕಹಾಕಬೇಕು.
1.4 ಲಕ್ಷ ಕೋಟಿ ರು.:
ಕರ್ನಾಟಕದಲ್ಲಿ ಅಧಿಕೃತವಾಗಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸದ್ಯ ಹೂಡಿಕೆಯಾದ ಹಣ 3ನೇ ರಾಂಕ್ : ದೇಶದಲ್ಲಿ ಅತಿ ಹೆಚ್ಚು ಹಣ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಯಾಗಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ. ಮೊದಲ ಸ್ಥಾನ ಮಹಾರಾಷ್ಟ್ರಕ್ಕೆ. ಎರಡನೇ ಸ್ಥಾನ ಉತ್ತರ ಪ್ರದೇಶ ಮತ್ತು ಗುಜರಾತ್‌ಗೆ.
ಲೇಖನ: ಶಶಿ ಸಂಪಳ್ಳಿ,ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.