
ಬೆಂಗಳೂರು: ಉದ್ಯಾನ ನಗರಿಯ ಬಡ ಹಾಗೂ ಶ್ರಮಿಕ ವರ್ಗದ ಜನರಿಗೆ ರಿಯಾಯಿತಿ ದರದಲ್ಲಿ ಊಟ-ತಿಂಡಿ ನೀಡಲು ರೂಪಿಸಿರುವ ಇಂದಿರಾ ಕ್ಯಾಂಟೀನ್ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಸಮರ್ಪಕ ನಿರ್ವಹಣೆಗಾಗಿ ‘ಇಂದಿರಾ ಕ್ಯಾಂಟೀನ್ ಕೋಶ’ ಎಂಬ ಪ್ರತ್ಯೇಕ ವಿಭಾಗವನ್ನು ರಚನೆ ಮಾಡಿ ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್ ಆದೇಶ ಮಾಡಿದ್ದಾರೆ.
ಜತೆಗೆ ನಗರದಲ್ಲಿನ 27 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಮಾಣವಾಗುತ್ತಿರುವ ಪ್ರತಿ ಅಡುಗೆಮನೆಗೆ ಒಬ್ಬರಂತೆ 27 ನಿವೃತ್ತ ಕಿರಿಯ ಸೇನಾ ಆಯುಕ್ತರನ್ನು ನೇಮಕ ಮಾಡಿಕೊಳ್ಳಲಾಗುವುದು. ಈ ಮೂಲಕ ಆಹಾರದ ಗುಣಮಟ್ಟದ ಬಗ್ಗೆ ದಕ್ಷವಾಗಿ ನಿಗಾವಹಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಜತೆಗೆ ಬಿಬಿಎಂಪಿ ಅಧಿಕಾರಿಗಳ ಮೇಲೆ ಇರುವ ಹೆಚ್ಚುವರಿ ಹೊರೆಯನ್ನೂ ಕಡಿಮೆ ಮಾಡಿದಂತಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ನಗರದ 101 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಉಳಿದ 97 ಕಡೆಗಳಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಅಗತ್ಯ ಸಿದ್ಧತೆಗಳನ್ನು ಪಾಲಿಕೆಯ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ನಿತ್ಯ ಕ್ಯಾಂಟೀನ್ ನಿರ್ವಹಣೆ ಬಗ್ಗೆ ನಿಗಾ ಇಡುವುದರಿಂದ ಪಾಲಿಕೆಯ ದೈನಂದಿನ ಕೆಲಸಗಳಲ್ಲಿ ಹಿನ್ನಡೆ ಉಂಟಾಗಿದೆ. ಹೀಗಾಗಿ ಕ್ಯಾಂಟೀನ್ ಮೇಲ್ವಿಚಾರಣೆ ಹಾಗೂ ನಿರ್ವಹಣೆಗಾಗಿ ಪ್ರತ್ಯೇಕ ಕೋಶ ಸ್ಥಾಪನೆಗೆ ಮುಂದಾಗಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್ ಹೇಳಿದ್ದಾರೆ.
ಹಣಕಾಸು ಜಂಟಿ ಆಯುಕ್ತರ ಅಧ್ಯಕ್ಷತೆ: ಅಡುಗೆಮನೆಗಳಿಂದ ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜು ಮತ್ತು ಕ್ಯಾಂಟೀನ್ ಗಳಲ್ಲಿ ವಿತರಣೆಯಾಗುವ ಆಹಾರ ಪದಾರ್ಥದ ಬಗ್ಗೆ ಸಾರ್ವಜನಿಕರ ಪ್ರತಿಕ್ರಯೆಯನ್ನು ಜಂಟಿ ಆಯುಕ್ತರು (ಹಣಕಾಸು) ನೋಡಿಕೊಳ್ಳಲಿದ್ದಾರೆ.
ಇಂದಿರಾ ಕ್ಯಾಂಟೀನ್‌ಗೆ ಸಾರ್ವಜನಿಕರಿಂದ ಬಂದಿರುವ ಉತ್ತೇಜನ ಹಾಗೂ ಬೆಂಬಲದಿಂದ ಉತ್ತೇಜನಗೊಂಡು ಕ್ಯಾಂಟೀನ್‌ನ ಸ್ವಚ್ಛತೆ ಹಾಗೂ ಗುಣಮಟ್ಟವನ್ನು ಮತ್ತಷ್ಟು ವೃದ್ಧಿಸಲು ಪ್ರತ್ಯೇಕ ಕೋಶ ರಚಿಸಲಾಗಿದೆ. ಅಡುಗೆಮನೆಯಿಂದ ಕ್ಯಾಂಟೀನ್‌ಗಳಿಗೆ ಪೂರೈಕೆಯಾಗುವ ಆಹಾರದ ಗುಣಮಟ್ಟ ಪರಿಶೀಲನೆ ಹಾಗೂ ಈ ಬಗ್ಗೆ ನಿಗಾ ಇಡುವ ಸಲುವಾಗಿ ನಿವೃತ್ತ ಕಿರಿಯ ಸೇನಾ ಆಯುಕ್ತರ ನೇಮಕ ಮಾಡುತ್ತಿದ್ದೇವೆ. ಅವರು ತಾರತಮ್ಯವಿಲ್ಲದೆ ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಇದರಿಂದ ಬಿಬಿಎಂಪಿ ಮೇಲಿನ ಹೊರೆ ಕಡಿಮೆಯಾಗಲಿದೆ.
ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಇಂದಿರಾ ಕ್ಯಾಂಟೀನ್ ಕೋಶವನ್ನು ಕೇಂದ್ರ ಕಚೇರಿಯ ಹೆಚ್ಚುವರಿ ಅಥವಾ ಜಂಟಿ ಆಯುಕ್ತರು (ಹಣಕಾಸು) ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಇವರು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅಡುಗೆ ಮನೆಗೆ ಒಬ್ಬರಂತೆ ನಿವೃತ್ತ ಸೇನಾಧಿಕಾರಿಯನ್ನು ನೇಮಿಸಿಕೊಳ್ಳಬಹುದು. ಆ ಸೇನಾಧಿಕಾರಿ
ಅಡುಗೆ ಮನೆಯಿಂದ ಸರಬರಾಜು ಮತ್ತು ಇಂದಿರಾ ಕ್ಯಾಂಟೀನ್‌ನಲ್ಲಿ ವಿತರಣೆಯಾಗುವ ಆಹಾರದ ಬಗ್ಗೆ ನಿಗವಹಿಸಲಿದ್ದು, ಕ್ಯಾಂಟೀನ್‌ನ ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದು ಪಾಲಿಕೆಯ ಕೇಂದ್ರ ಕಚೇರಿಗೆ ಸಲ್ಲಿಸಲಿದ್ದಾರೆ. ಪ್ರತಿ ತಿಂಗಳು ಕನಿಷ್ಠ ಒಂದು ಬಾರಿ ಸಭೆ ನಡೆಸಿ ಎಲ್ಲಾ ಅಧಿಕಾರಿಗಳೊಂದಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ವಿತರಣೆಯಾಗುವ ಆಹಾರ ಸಂಖ್ಯೆ ಹಾಗೂ ಇತರೆ ಸುಧಾರಣಾ ಕ್ರಮಗಳ ಕುರಿತು ಕ್ರಮ ಕೈಗೊಳ್ಳುವಂತೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಸೇನಾ ಆಯುಕ್ತರ ವೇತನ ವಿವರ: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿನ ಅಡುಗೆ ಮನೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಕರ್ನಾಟಕ ಸೈನಿಕ ಕಲ್ಯಾಣ ಉದ್ಯೋಗ ಸಂಸ್ಥೆಯಿಂದ 27 ನಿವೃತ್ತ ಕಿರಿಯ ಸೇನಾ ಆಯುಕ್ತರು ಹಾಗೂ ಅವರ ಮೇಲ್ವಿಚಾರಣೆಗಾಗಿ ಒಬ್ಬರು ಮುಖ್ಯ ಅಧಿಕಾರಿಯನ್ನು ನೇಮಿಸಿಕೊಳ್ಳಲಾಗುತ್ತದೆ.
ಕಿರಿಯ ಸೇನಾ ಆಯುಕ್ತರಿಗೆ ಮಾಸಿಕ 40 ಸಾವಿರ ರು. ವೇತನ, 4500 ರು. ವಾಹನ ಭತ್ಯೆ, 475 ರು. ಸಮವಸ್ತ್ರ ನಿರ್ವಹಣೆಗಾಗಿ ನೀಡಲಾಗುತ್ತದೆ. ಅದೇ ರೀತಿ ಮುಖ್ಯ ಅಧಿಕಾರಿಗಳಿಗೆ ಮಾಸಿಕ 90 ಸಾವಿರ ರು. ವೇತನ, 9375 ವಾಹನ ಭತ್ಯೆ ಮತ್ತು 475 ರು. ಸಮವಸ್ತ್ರ ಭತ್ಯೆ ನಿಗದಿಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.