ಸಂಕ್ರಾಂತಿಗೆ ಆರಂಭವಾಗುತ್ತಿವೆ 24 ಸಂಚಾರಿ ಇಂದಿರಾ ಕ್ಯಾಂಟೀನ್

Published : Jan 01, 2018, 08:29 AM ISTUpdated : Apr 11, 2018, 01:11 PM IST
ಸಂಕ್ರಾಂತಿಗೆ ಆರಂಭವಾಗುತ್ತಿವೆ 24 ಸಂಚಾರಿ ಇಂದಿರಾ ಕ್ಯಾಂಟೀನ್

ಸಾರಾಂಶ

ಇಂದಿರಾ ಕ್ಯಾಂಟೀನ್ ಆರಂಭಿಸಲು ಜಾಗದ ಕೊರತೆ ಇರುವ ಬಿಬಿಎಂಪಿಯ 24 ವಾರ್ಡುಗಳಲ್ಲಿ ಸಂಕ್ರಾಂತಿ ಹಬ್ಬದ ವೇಳೆಗೆ ‘ಸಂಚಾರಿ ಇಂದಿರಾ ಕ್ಯಾಂಟೀನ್’ಗಳ ಮೂಲಕ ಕಡಿಮೆ ದರದಲ್ಲಿ ಊಟ, ತಿಂಡಿ ವಿತರಣೆ ಆರಂಭವಾಗಲಿವೆ.

ಬೆಂಗಳೂರು (ಜ.1): ಇಂದಿರಾ ಕ್ಯಾಂಟೀನ್ ಆರಂಭಿಸಲು ಜಾಗದ ಕೊರತೆ ಇರುವ ಬಿಬಿಎಂಪಿಯ 24 ವಾರ್ಡುಗಳಲ್ಲಿ ಸಂಕ್ರಾಂತಿ ಹಬ್ಬದ ವೇಳೆಗೆ ‘ಸಂಚಾರಿ ಇಂದಿರಾ ಕ್ಯಾಂಟೀನ್’ಗಳ ಮೂಲಕ ಕಡಿಮೆ ದರದಲ್ಲಿ ಊಟ, ತಿಂಡಿ ವಿತರಣೆ ಆರಂಭವಾಗಲಿವೆ. ಬಿಬಿಎಂಪಿಯ 198 ವಾರ್ಡುಗಳ ಪೈಕಿ 174 ವಾರ್ಡುಗಳಲ್ಲಿ ಇಂದಿರಾ ಕ್ಯಾಂಟೀನ್‌ಗೆ ಸೂಕ್ತ ಸ್ಥಳಾವಕಾಶ ದೊರೆತಿದ್ದು, ಇವುಗಳಲ್ಲಿ 160ಕ್ಕೂ ಹೆಚ್ಚು ಕ್ಯಾಂಟೀನ್ ಆರಂಭವಾಗಿದೆ. ತಡವಾಗಿ ಜಾಗ ದೊರೆತ ಕೆಲ ಕ್ಯಾಂಟೀನ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. 

ಉಳಿದ 24 ವಾರ್ಡುಗಳಲ್ಲಿ ಜಾಗದ ಕೊರತೆಯಿಂದಾಗಿ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲು ಬಿಬಿಎಂಪಿ ನಿರ್ಧರಿಸಿತ್ತು. ಅದರಂತೆ ಇದೀಗ ಸಂಚಾರಿ ಇಂದಿರಾ ಕ್ಯಾಂಟೀನ್‌ಗಳ ವಿನ್ಯಾಸ ಪೂರ್ಣಗೊಂಡಿದ್ದು, ಸಂಕ್ರಾಂತಿ ಹಬ್ಬದ ವೇಳೆಗೆ ಅಥವಾ ಜನವರಿ ಎರಡು ಅಥವಾ ಮೂರನೇ ವಾರದಲ್ಲಿ ಆರಂಭಿಸಲು ಬಿಬಿಎಂಪಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

24 ವಾಹನ ಖರೀದಿ: ಟೆಂಡರ್ ಮೂಲಕ 24 ವಾಹನಗಳನ್ನು ಪಡೆದು ‘ಫುಡ್ ಆನ್ ವ್ಹೀಲ್ಸ್’ ಪರಿಕಲ್ಪನೆಯಲ್ಲಿ ಸಂಚಾರಿ ಇಂದಿರಾ ಕ್ಯಾಂಟೀನ್ ಗಳನ್ನು ವಿನ್ಯಾಸ ಮಾಡಲಾಗಿದೆ. ವಾಹನದೊಳಗೆ ಬಿಲ್ ಕೌಂಟರ್, ಆಹಾರ ವಿತರಣಾ ಕೌಂಟರ್ ಗಳು, ಆಹಾರ ಬಿಸಿಯಾಗಿಡಲು ಹಾಟ್ ಕೇಸ್’ಗಳನ್ನು ಪ್ರತ್ಯೇಕವಾಗಿ ಅಳವಡಿಸಲಾಗುತ್ತದೆ. ಡ್ರೈವರ್ ಸೇರಿದಂತೆ ಐದು ಜನ ಸಿಬ್ಬಂದಿ ಪ್ರತಿ ಕ್ಯಾಂಟೀನ್‌ನಲ್ಲಿ ಇರುತ್ತಾರೆ. ಈ ಮೊಬೈಲ್ ಕ್ಯಾಂಟೀನ್‌ಗಳು ಎಲ್ಲಿವೆ, ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳಕ್ಕೆ ತಲುಪಿವೆಯೇ ಎಂದು ಅವುಗಳ ಕಾರ್ಯನಿರ್ವಹಣೆ ಮೇಲೆ ಕಣ್ಣಿಡಲು ಜಿಪಿಎಸ್ ಅಳವಡಿಕೆ ಮಾಡಲಾಗುತ್ತದೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯೇಕ ನೀರಿನ ಟ್ಯಾಂಕ್: ಸಂಚಾರಿ ಕ್ಯಾಂಟೀನ್‌ನಲ್ಲಿ ಕುಡಿಯುವ ನೀರು, ಕೈ ತೊಳೆಯುವ ನೀರಿಗಾಗಿ ಪ್ರತ್ಯೇಕ ನೀರಿನ ಟ್ಯಾಂಕ್ ಅಳವಡಿಸಲಾಗುತ್ತದೆ. ಅಲ್ಲದೆ, ಕೈ ತೊಳೆಯುವ ನೀರು ಶೇಖರಣೆಗೆ ಪ್ರತ್ಯೇಕ ಟ್ಯಾಂಕ್ ಇರುತ್ತದೆ. ಹಾಗೆಯೇ, ಊಟ ಮಾಡಿದ ನಂತರ ತಟ್ಟೆಯನ್ನು ಶೇಖರಿಸಲು ಪ್ರತ್ಯೇಕ ಟಬ್ ಅಳವಡಿಸಲಾಗುತ್ತದೆ.

ಇಂದಿರಾ ಕ್ಯಾಂಟೀನ್ ನಲ್ಲಿ ಇರುವಂತಹ ಎಲ್ಲ ವ್ಯವಸ್ಥೆಗಳೂ ಮೊಬೈಲ್ ಕ್ಯಾಂಟೀನ್ ಒಳಗೆ ಅಳವಡಿಸಿ ವಿನ್ಯಾಸಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೂರು ಬಾರಿ ಸಂಚಾರ: ಮೊಬೈಲ್ ಕ್ಯಾಂಟೀನ್ ಗಳು ಬೆಳಗ್ಗೆ 7ರಿಂದ 9.30 ಮಧ್ಯಾಹ್ನ 12.30ರಿಂದ 2.30 ಹಾಗೂ ರಾತ್ರಿ 7.30ರಿಂದ 9.30ರವರೆಗೆ ನಿಗದಿತ ಸ್ಥಳದಲ್ಲಿ ಮಾತ್ರ ಆಹಾರ ವಿತರಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್