ನಾಳೆ ಖಾಸಗಿ ಆಸ್ಪತ್ರೆಗಳ ಹೊರರೋಗ ವಿಭಾಗ ಬಂದ್

By Suvarna Web DeskFirst Published Jan 1, 2018, 8:13 AM IST
Highlights

ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್‌ಎಂಸಿ) ತಿದ್ದುಪಡಿ ವಿಧೇಯಕದಲ್ಲಿರುವ ಲೋಪದೋಷಗಳನ್ನು ಕೇಂದ್ರ ಸರ್ಕಾರ ಕೈಬಿಡದಿದ್ದರೆ ಜ.2 ರಂದು ದೇಶಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಚಿಕಿತ್ಸಾ ವಿಭಾಗ ಬಂದ್ ಮಾಡುವುದಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಎಚ್ಚರಿಕೆ ನೀಡಿದೆ.

ಬೆಂಗಳೂರು(ಜ.1): ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್‌ಎಂಸಿ) ತಿದ್ದುಪಡಿ ವಿಧೇಯಕದಲ್ಲಿರುವ ಲೋಪದೋಷಗಳನ್ನು ಕೇಂದ್ರ ಸರ್ಕಾರ ಕೈಬಿಡದಿದ್ದರೆ ಜ.2 ರಂದು ದೇಶಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಚಿಕಿತ್ಸಾ ವಿಭಾಗ ಬಂದ್ ಮಾಡುವುದಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಎಚ್ಚರಿಕೆ ನೀಡಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ.ಎಚ್. ಎನ್.ರವೀಂದ್ರ, ಭಾನುವಾರ ವಿವಿಧ ಪಕ್ಷಗಳ ಸಂಸದರನ್ನು ಭೇಟಿ ಮಾಡಿ ವಿಧೇಯಕದಲ್ಲಿನ ಲೋಪದೋಷಗಳನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಸೋಮವಾರ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರೊಂದಿಗೆ ಎನ್‌ಎಂಸಿ ತಿದ್ದುಪಡಿ ವಿಧೇಯಕದ ಬಗ್ಗೆ ಚರ್ಚಿಸಲು ಸಭೆ ನಿಗದಿಯಾಗಿದೆ. ಸಭೆಯಲ್ಲಿ ವಿಧೇಯಕ ದಲ್ಲಿರುವ ಅಂಶಗಳಿಂದ ವೈದ್ಯರು ಹಾಗೂ ವೈದ್ಯಕೀಯ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಬೀರುವ ಅಂಶಗಳನ್ನು ವಿಧೇಯಕದಿಂದ ಕೈಬಿಡುವಂತೆ ಮನವಿ ಮಾಡಲಾಗುವುದು.

ಅವರು ಒಪ್ಪದಿದ್ದರೆ ಜ.2ರಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ಓಪಿಡಿ ಸೇವೆ ಸ್ಥಗಿತಗೊಳಿಸಿ ಖಾಸಗಿ ವೈದ್ಯರು ಸಾಂಕೇತಿಕ ಪ್ರತಿಭಟನೆ ನಡೆಸಿ ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ಒಂದು ವೇಳೆ ಕೇಂದ್ರ ಸರ್ಕಾರ ಇದಕ್ಕೂ ಜಗ್ಗದೆ ಸಂಸತ್‌ನಲ್ಲಿ ವಿಧೇಯಕ ಅನುಮೋದನೆಗೆ ಮುಂದಾದರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.

ಖಾಸಗಿ ವೈದ್ಯರ ವಾದ, ಆತಂಕ: ಎನ್‌ಎಂಸಿ ಕಾಯ್ದೆ ತಿದ್ದುಪಡಿ ಮೂಲಕ ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಪಾರದರ್ಶಕತೆಗಾಗಿ ಪರಿಷತ್ತಿನ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಮತ್ತೊಂದು ಸಂಸ್ಥೆ ಸ್ಥಾಪಿಸಿದರೆ ಭ್ರಷ್ಟಾಚಾರ ಕಡಿಮೆಯಾಗುವುದಿಲ್ಲ. ಅಲ್ಲದೆ, ಹೋಮಿಯೋಪತಿ, ಆಯುರ್ವೇದ ವೈದ್ಯರಿಗೆ ಬ್ರಿಡ್ಜ್ ಕೋರ್ಸ್ ಮೂಲಕ ಅಲೋಪತಿ ಔಷಧ ಚಿಕಿತ್ಸೆಗೆ ಅವಕಾಶ ಕಲ್ಪಿಸುವುದರಿಂದ ಚಿಕಿತ್ಸೆ ಗುಣಮಟ್ಟ ಕೆಡಲಿದೆ ಎಂಬುದು ಖಾಸಗಿ ವೈದ್ಯರ ವಾದವಾಗಿದೆ.

ಎಂಸಿಐನಲ್ಲಿ 125 ಮಂದಿ ಸದಸ್ಯರಿದ್ದಾರೆ. ವಿಧೇಯಕದಲ್ಲಿ ಇದನ್ನು 65ಕ್ಕೆ ಇಳಿಸುವ ಅಂಶಗಳಿವೆ. 5 ಜನ ಚುನಾಯಿತರು ಹಾಗೂ 59 ಮಂದಿ ಕೇಂದ್ರ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರನ್ನು ನೇಮಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ಮೆಡಿಕಲ್ ಎಜುಕೇಶನ್ ಬೋರ್ಡ್‌ಗೆ ಸರ್ಕಾರವೇ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ. ಇದರಿಂದ ವೈದ್ಯಕೀಯ ಕ್ಷೇತ್ರದ ಮೇಲೆ ಗಂಭೀರ ಪ್ರಭಾವ ಬೀರಲಿದೆ. ರಾಜ್ಯಗಳ ಸ್ವಾಯತ್ತತೆಯನ್ನು ಎನ್‌ಎಂಸಿ ಕಸಿದುಕೊಳ್ಳಲಿದೆ ಎಂಬುದು ವೈದ್ಯರ ಆತಂಕವಾಗಿದೆ.

click me!