
ನವದೆಹಲಿ: ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಭಾರತೀಯ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಮಾತನಾಡಿರುವ ಹೊಸ ವಿಡಿಯೋವನ್ನು ಪಾಕಿಸ್ತಾನ ಇಂದು ಬಿಡುಗಡೆ ಮಾಡಿದೆ.
ವಿಡಿಯೋದಲ್ಲಿ ಜಾಧವ್ ತಾನು ಈಗಲೂ ಭಾರತೀಯ ನೌಕಸೇನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ. ಪಾಕಿಸ್ತಾನ ವಾದಿಸುವಂತೆ, ತಾನು ಗೂಢಚಾರನಾಗಿದ್ದು, ಬಲೂಚಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿರುವುದಾಗಿ ಅವರು ಪುನರುಚ್ಛರಿಸಿದ್ದಾರೆ.
ಪಾಕಿಸ್ತಾನವು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ ಎಂದು ಹೇಳಿರುವ ಜಾಧವ್, ತನ್ನ ತಾಯಿ ಹಾಗೂ ಮಡದಿಯನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟದ್ದಕ್ಕೆ ಅವರು ಪಾಕಿಸ್ತಾನಕ್ಕೆ ಧನ್ಯವಾದವನ್ನು ಕೂಡಾ ಸಲ್ಲಿಸಿದ್ದಾರೆ.
ಅಚ್ಚರಿಯೆಂಬಂತೆ, ಪಾಕಿಸ್ತಾನದಲ್ಲಿರುವ ಭಾರತೀಯ ಉಪ-ಹೈಕಮಿಷನರ್ ಜೆ.ಪಿ.ಸಿಂಗ್ ತನ್ನ ತಾಯಿ ಹಾಗೂ ಪತ್ನಿಯೊಂದಿಗೆ ಬೆದರಿಸಿದ್ದಾರೆ ಎಂಬ ಆರೊಪವನ್ನೂ ಜಾಧವ್ ಈ ವಿಡಿಯೋದಲ್ಲಿ ಮಾಡಿದ್ದಾರೆ. ನನ್ನೊಂದಿಗೆ ಭೇಟಿಯಾಗಿ ಹೊರಡುತ್ತಿರುವಾಗ ಜೆ.ಪಿ.ಸಿಂಗ್ ನನ್ನ ತಾಯಿಯತ್ತ ಕೂಗಾಡುತ್ತಿರುವುದನ್ನು ನಾನು ಕೇಳಿಸಿಕೊಂಡೆ ಎಂದು ಜಾಧವ್ ವಿಡಿಯೋದಲ್ಲಿ ಹೇಳಿದ್ದಾರೆ.
ಆದರೆ ಭಾರತವು ಆ ವಿಡಿಯೋನ ಅಧಿಕೃತತೆಯನ್ನು ಪ್ರಶ್ನಿಸಿದೆ. ಇದೊಂದು ಪಾಕಿಸ್ತಾನದ ಕಿಡಿಗೇಡಿತನ ಪ್ರಚಾರ ತಂತ್ರವಾಗಿದೆ, ಹಾಗು ಅದಕ್ಕೆ ಯಾವುದೇ ಮಹತ್ವವಿಲ್ಲವೆಂದು ವಿದೇಶಾಂಗ ಇಲಾಖೆಯು ಹೇಳಿದೆ.
ಇದರಲ್ಲಿ ಆಶ್ವರ್ಯವೇನೂ ಇಲ್ಲ; ಪಾಕಿಸ್ತಾನವು ಒತ್ತಡ ಹೇರುವ ಮೂಲಕ ಪಡೆದ ಹೇಳಿಕೆಗಳನ್ನು ವಿಡಿಯೋನಲ್ಲಿ ಹಾಕಲಾಗಿದೆ. ಅಂತಹ ವಿಡಿಯೋಗಳಿಗೆ ಯಾವುದೇ ಬೆಲೆಯಿಲ್ಲವೆಂದು ಪಾಕಿಸ್ತಾನ ಅರ್ಥಮಾಡಿಕೊಳ್ಳಬೇಕು, ಎಂದು ಇಲಾಖೆಯು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.