
ಬೆಂಗಳೂರು (ನ.20): ನಗರದ ಹೊರವಲಯದ ಯಲಹಂಕ ಬಳಿಯ ಏರ್'ಪೋರ್ಸ್ ಸ್ಟೇಷನ್ ಮೈದಾನ ಭಾನುವಾರ ಬೆಳಗ್ಗೆ ವಿಶ್ವ ದಾಖಲೆಗೆ ಸಾಕ್ಷಿಯಾಯಿತು. ಬೆಂಗಳೂರು ಆರ್ಮಿ ಸರ್ವೀಸ್ ಕೋರ್'ನ (ಎಎಸ್‌ಸಿ) ಟೊರ್ನಾಡೊಸ್ ಮೋಟಾರ್ ಬೈಕ್ ತಂಡದ 58 ಯೋಧರು ಒಂದೇ ರಾಯಲ್ ಎನ್‌ಫೀಲ್ಡ್ ಬೈಕ್'ನಲ್ಲಿ ಏಕಕಾಲಕ್ಕೆ ಪ್ರಯಾಣಿಸುವ ಮೂಲಕ ವಿಶ್ವ ದಾಖಲೆ ಬರೆದರು.
ಬೆಳಗ್ಗೆ ಮೇಜರ್ ಬನ್ನಿ ಶರ್ಮಾ ನೇತೃತ್ವದ ತಂಡದ ಸದಸ್ಯರು ತ್ರಿವರ್ಣ ಧ್ವಜದ ಸಮವಸ್ತ್ರದಲ್ಲಿ ಮೈದಾನಕ್ಕೆ ಆಗಮಿಸಿದರು. ಬಳಿಕ ಆಕರ್ಷಕ ಪಥ ಸಂಚಲನ ಮಾಡಿದರು. ಇದಾದ ಬಳಿಕ 500 ಸಿಸಿ ರಾಯಲ್ ಎನ್‌ಫೀಲ್ಡ್ ಬೈಕ್ ಏರಿದ 58 ಯೋಧರು 1.2 ಕಿ.ಮೀ. ಪ್ರಯಾಣಿಸುವ ಮೂಲಕ 2010 ರಲ್ಲಿ ತಾವೇ ನಿರ್ಮಿಸಿದ್ದ (54 ಮಂದಿ) ವಿಶ್ವ ದಾಖಲೆ ಸರಿಗಟ್ಟಿ ನೂತನ ದಾಖಲೆ ಸೃಷ್ಟಿಸಿ ಸಂಭ್ರಮಿಸಿದರು. ಸುಬೇದಾರ್ ರಾಮಪಾಲ್ ಯಾದವ್ ಬೈಕ್ ಚಲಾಯಿಸಿದರು.
ಎಎಸ್‌ಸಿ ಕೇಂದ್ರದ ಟೊರ್ನಾಡೊಸ್ ಮೋಟರ್ ಬೈಕ್ ತಂಡ ಇದುವರೆಗೆ 19 ವಿಶ್ವ ಹಾಗೂ ರಾಷ್ಟ್ರೀಯ ದಾಖಲೆಗಳನ್ನು ಸ್ಥಾಪಿಸಿದೆ. ಕರ್ನಲ್ ಸಿ.ಎನ್.ರಾವ್ ಹಾಗೂ ಕ್ಯಾ.ಜೆ.ಪಿ.ವರ್ಮಾ ನೇತೃತ್ವದ ತಂಡ 1982 ರಲ್ಲಿ ಸಾಹಸ ಪ್ರದರ್ಶನಕ್ಕೆ ನಾಂದಿಹಾಡಿತ್ತು. ತಂಡದ 39 ಸದಸ್ಯರು ದೇಶ ವಿದೇಶಗಳಲ್ಲಿ ಸಾವಿರಕ್ಕೂ ಅಧಿಕ ಸಾಹಸ ಪ್ರದರ್ಶನ ನೀಡಿದ್ದಾರೆ.
ತಂಡದ ವಿಶ್ವ ದಾಖಲೆ ಪ್ರದರ್ಶನದ ವೇಳೆ ಎಎಸ್'ಸಿ ಕೇಂದ್ರ ಮತ್ತು ಕಾಲೇಜಿನ ಕಮಾಂಡೆಂಟ್ ಲೆ.ಜ.ವಿಪಿನ್ ಗುಪ್ತಾ, ಎಎಸ್'ಸಿ ದಕ್ಷಿಣ ವಿಭಾಗದ ತರಬೇತಿ ಕೇಂದ್ರದ ಬ್ರಿಗೇಡಿಯರ್ ಅಶೋಕ್ ಚೌಧರಿ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.