
ದಿನೇ ದಿನೇ ಭಾರತ ಮತ್ತು ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಗುವಿನ ವಾತವಾರಣ ನಿರ್ಮಾಣವಾಗ್ತಿದೆ. ಆದರೆ, ಪಾಕ್ ಪುಂಡಾಟಿಕೆ ಕೊಂಚವೂ ಬ್ರೇಕ್ ಬಿದ್ದಿಲ್ಲ. ನಿನ್ನೆಯಷ್ಟೇ ಗಡಿಯಲ್ಲಿ ಮೂವರು ಭಾರತೀಯ ಯೋಧರ ಹತ್ಯೆಗೈದಿದ್ದ ಪಾಕ್ ಸೈನಿಕರು ಇವತ್ತು ಬೆಳಗ್ಗೆಯೂ ಕದನ ವಿರಾಮ ಉಲ್ಲಂಘಿಸಿದ್ದಾರೆ. ಇದಕ್ಕೆ ಭಾರತೀಯ ಸೇನೆ ಕೂಡ ತಕ್ಕ ಉತ್ತರ ನೀಡಿದ್ದು 8 ಪಾಕ್ ಸೈನಿಕರನ್ನ ಹತ್ಯೆಗೈದಿದೆ.
ಭಾರತ-ಪಾಕ್ ಗಡಿ ರೇಖೆ ಉದ್ದಕ್ಕೂ ಪದೇ ಪದೇ ಅಪ್ರಚೋದಿತ ದಾಳಿ ನಡೆಸಿ ಪೆಟ್ಟು ತಿಂದ್ರೂ ಸ್ವಲ್ಪವೂ ಬುದ್ಧಿ ಕಲಿಯದ ಪಾಕಿಸ್ತಾನ ಇವತ್ತು ನುಸುಕಿನಲ್ಲೂ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿರುವ ಪೂಂಛ್, ರಾಜೌರಿ, ಕೇಲ್, ನೌಶೇರಾ ಹಾಗೂ ಭಿಂಬೇರ್ ಪ್ರದೇಶಗಳಲ್ಲಿ ಬೆಳಗ್ಗೆ 120 ಎಂ ಎಂ ಶೆಲ್ ಬಳಸಿ ಅಪ್ರಚೋದಿತ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಯೋಧರು ಕೂಡ ತಕ್ಕ ಉತ್ತರವನ್ನೇ ನೀಡಿದ್ದಾರೆ. ಸಂಜೆ ತನಕ ಕೇಲ್ ಸೆಕ್ಟರ್ನಲ್ಲಿ ಬಿಎಸ್ಎಫ್ ನಡೆಸಿದ ಕಾಳಗದಲ್ಲಿ ಕನಿಷ್ಟ 8 ಎಂಟು ಪಾಕ್ ಸೈನಿಕರು ಹತ್ಯೆಯಾಗಿದ್ದು ಹಲವರು ಗಾಯಗೊಂಡಿದ್ದಾರೆ ಅಂತ ಗೊತ್ತಾಗಿದೆ. ಈ ಬಗ್ಗೆ ರಕ್ಷಣಾ ಸಚಿವ ಪರಿಕ್ಕರ್ ಹಾಗೂ ಪ್ರಧಾನಿ ಮೋದಿ ಗಮನಕ್ಕೂ ತರಲಾಗಿದೆ ಅಂತ ಸೇನಾ ಮೂಲಗಳು ತಿಳಿಸಿವೆ.
ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡುವಾಗ ಮೂವರು ಭಾರತೀಯ ಯೋಧರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ. ನಿನ್ನೆ ಪಾಕ್ ದಾಳಿಗೆ ಎದೆಯೊಡ್ಡಿ ಹುತಾತ್ಮರಾದ ಮೂವರು ಸೈನಿಕರನ್ನ ಗುರ್ತಿಸಲಾಗಿದೆ. ರಾಜಸ್ಥಾನ ಮೂಲದ ಪ್ರಭು ಸಿಂಗ್ , ಉತ್ತರ ಪ್ರದೇಶದ ಮನೋಜ್ ಕುಶ್ವತ್ ಹಾಗೂ ಶಶಾಂಕ್ ಕೆ ಸಿಂಗ್ ಅಂತ ಉನ್ನತ ಸೇನಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಶೀಘ್ರ ಭಾರತಕ್ಕೆ ಸರ್ತಾಜ್ ಅಜೀಜ್
ಈ ಮಧ್ಯೆ ಪಾಕಿಸ್ತಾನದ ವಿದೇಶಾಂಗ ಸಚಿವ ಸರ್ತಾಜ್ ಅಜೀಜ್ ಸದ್ಯದಲ್ಲಿಯೇ ಭಾತರಕ್ಕೆ ಭೇಟಿ ನೀಡಲಿದ್ದಾರೆ. ಮುಂದಿನ ತಿಂಗಳು ಮೂರು ದಿನಗಳ ಭೇಟಿಗಾಗಿ ನವದೆಹಲಿಗೆ ಬರ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿದೇಶಾಂಗ ಅಧಿಕಾರಿಗಳು ಹಾಗೂ ಭಾರತೀಯ ಸೇನಾ ಮುಖ್ಯಸ್ಥರು ಕೈಗೊಳ್ಳುವ ನಿರ್ಧಾರ ಮತ್ತು ಮಾತುಕತೆ ಮಹತ್ವ ಪಡೆದುಕೊಳ್ಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.