ಪಾಕ್'ನ ಮುಳ್ಳಿಗೆ ಮುಳ್ಳು: ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳಿಗೆ ಭಾರತದಲ್ಲಿ ರಾಜ್ಯಾಶ್ರಯ?

By Internet DeskFirst Published Sep 16, 2016, 11:45 AM IST
Highlights

ನವದೆಹಲಿ(ಸೆ. 16): ಮುಳ್ಳಿಗೆ ಮುಳ್ಳು ಎಂಬಂತೆ ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಭಾರತ ಉತ್ತರ ನೀಡಲು ಸಂಪೂರ್ಣ ಸಜ್ಜಾಗಿದೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಉಗ್ರರಿಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವಂತೆ, ಬಲೂಚಿಸ್ತಾನದಲ್ಲಿ ಪ್ರತ್ಯೇಕತಾವಾದಿಗಳಿಗೆ ರಾಜಕೀಯ ಬೆಂಬಲ ನೀಡಲು ನರೇಂದ್ರ ಮೋದಿ ಸರಕಾರ ನಿರ್ಧರಿಸಿರುವಂತಿದೆ. ಬಲೂಚಿಸ್ತಾನದ ಮುಖಂಡರಿಗೆ ಭಾರತದಲ್ಲಿ ರಾಜಕೀಯ ಆಶ್ರಮ ನೀಡಲು ಸರಕಾರ ಬದ್ಧವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ನ್ಯೂಸ್18 ವಾಹಿನಿಯಲ್ಲಿ ವರದಿ ಪ್ರಕಟವಾಗಿದೆ.

ಬಲೂಚಿ ಮುಖಂಡರು ಮನವಿ ಮಾಡಿಕೊಂಡರೆ ಕೆಲವೇ ವಾರಗಳಲ್ಲಿ ಅವರಿಗೆ ಸರಕಾರ ರಾಜಕೀಯ ಆಶ್ರಯ ಒದಗಿಸಲಿದೆಯಂತೆ. ಬಲೂಚಿಸ್ತಾನದ ಪ್ರಮುಖ ನೇತಾರ ಬ್ರಹ್ಮಾಗಡ್ ಬುಗ್ತಿ ಅವರು ಭಾರತದ ನಿರ್ಧಾರವನ್ನು ಸ್ವಾಗತಿಸಿದ್ದು, "ಐತಿಹಾಸಿಕ" ಎಂದು ಬಣ್ಣಿಸಿದ್ದಾರೆ.

ಪಾಕಿಸ್ತಾನದಿಂದ ಬಲೂಚಿಸ್ತಾನವನ್ನು ಪ್ರತ್ಯೇಕಗೊಳಿಸಲು ಬಹಳ ವರ್ಷದಿಂದ ಹೋರಾಟ ನಡೆಯುತ್ತಿದೆ. ಅಲ್ಲಿಯ ಪ್ರತ್ಯೇಕತಾವಾದಿ ಮುಖಂಡರನ್ನು ಗಡೀಪಾರು ಮಾಡಲಾಗಿದೆ. ವಿದೇಶಗಳಲ್ಲಿ ನೆಲಸಿಕೊಂಡೇ ಅವರು ಹೋರಾಟ ಮುಂದುವರಿಸಿದ್ದಾರೆ. ಆದರೆ, ವಿದೇಶಗಳಿಗೆ ಸಂಚಾರ ನಡೆಸಲು ಅವರಿಗೆ ಸರಿಯಾದ ಪಾಸ್'ಪೋರ್ಟ್ ಮತ್ತು ವೀಸಾ ಸಮಸ್ಯೆ ಇದೆ. ಭಾರತದಲ್ಲಿ ಅವರಿಗೆ ರಾಜ್ಯಾಶ್ರಯ ಸಿಕ್ಕರೆ ಭಾರತೀಯ ಪಾಸ್'ಪೋರ್ಟ್ ಕೂಡ ದೊರಕಲಿದೆ.

ಕಳೆದ ತಿಂಗಳ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಬಲೂಚಿಸ್ತಾನದ ವಿಚಾರ ಪ್ರಸ್ತಾಪ ಮಾಡಿದ್ದರು. ಅಲ್ಲಿಯ ಪ್ರತ್ಯೇಕತಾವಾದಿಗಳ ಧ್ವನಿಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕೇಳಿಸಲು ಭಾರತ ಸಿದ್ಧವಿರುವುದಾಗಿ ಭರವಸೆ ನೀಡಿದ್ದರು. ಮೋದಿಯವರ ಈ ನಿಲುವನ್ನು ಬಲೂಚಿಸ್ತಾನದ ಬಹುತೇಕ ಮುಖಂಡರು ಸ್ವಾಗತಿಸಿದ್ದಾರೆ.

click me!