ಅಂತರಿಕ್ಷದಲ್ಲಿ ಸರ್ಜಿಕಲ್ ಸ್ಟ್ರೈಕ್ : ಮಹತ್ಸಾದನೆ

By Web Desk  |  First Published Mar 28, 2019, 8:01 AM IST

ಭಾರತವು ಅಂತರಿಕ್ಷ ಹಾಗೂ ರಕ್ಷಣಾ ವಲಯದಲ್ಲಿ ಮತ್ತೊಂದು ದಿಗ್ವಿಜಯ ಸಾಧಿಸಿದೆ. ಕ್ಷಿಪಣಿಯನ್ನು ಉಡಾವಣೆ ಮಾಡಿ ಉಪಗ್ರಹವೊಂದನ್ನು ಹೊಡೆದುರುಳಿಸುವ ಯಶಸ್ವಿ ಪ್ರಯೋಗ ನಡೆಸಿದೆ. 


ನವದೆಹಲಿ : ಭಾರತವು ಅಂತರಿಕ್ಷ ಹಾಗೂ ರಕ್ಷಣಾ ವಲಯದಲ್ಲಿ ಮತ್ತೊಂದು ವಿಕ್ರಮ ಸಾಧಿಸಿದೆ. ಉಪಗ್ರಹ ನಿರೋಧಕ (ಎಎಸ್‌ಎಟಿ- ಎಸ್ಯಾಟ್‌) ಕ್ಷಿಪಣಿಯನ್ನು ಉಡಾವಣೆ ಮಾಡಿ ಅದರ ಮೂಲಕ ಉಪಗ್ರಹವೊಂದನ್ನು ಹೊಡೆದುರುಳಿಸುವ ಯಶಸ್ವಿ ಪ್ರಯೋಗವನ್ನು ಭಾರತವು ನಡೆಸಿದೆ. ಈ ಮೂಲಕ ವೈರಿ ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ ವಿಶ್ವದ 3 ‘ಸೂಪರ್‌ಪವರ್‌’ ದೇಶಗಳಾದ ಚೀನಾ, ರಷ್ಯಾ ಹಾಗೂ ಅಮೆರಿಕದ ಸಾಲಿಗೆ 4ನೇ ‘ಸೂಪರ್‌ಪವರ್‌’ ದೇಶವಾಗಿ ಸೇರಿಕೊಂಡಿದೆ.

ಇತ್ತೀಚಿನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಸರ್ಜಿಕಲ್‌ ದಾಳಿ ನಡೆಸಿದ ಬೆನ್ನಲ್ಲೇ ಈ ಪ್ರಯೋಗವನ್ನು ಯಶಸ್ವಿಯಾಗಿ ಭಾರತ ನಡೆಸಿದ್ದು, ‘ಇದು ಬಾಹ್ಯಾಕಾಶದಲ್ಲಿನ ಸರ್ಜಿಕಲ್‌ ದಾಳಿ’ ಎಂದು ಜನರಿಂದ ಬಣ್ಣನೆಗೆ ಒಳಗಾಗಿದೆ.

Latest Videos

undefined

ಅತ್ಯಂತ ರಹಸ್ಯಮಯವಾಗಿ ನಡೆದ ‘ಮಿಷನ್‌ ಶಕ್ತಿ’ ಹೆಸರಿನ ಈ ಕಾರ್ಯಾಚರಣೆಯ ವಿವರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಧ್ಯಾಹ್ನ 12.25ರ ಸುಮಾರಿಗೆ ದೇಶವನ್ನುದ್ದೇಶಿಸಿ ಮಾಡಿದ ಟೀವಿ ಭಾಷಣದಲ್ಲಿ ನೀಡಿದರು. ಮೋದಿ ಅವರು ದೇಶ ಉದ್ದೇಶಿಸಿ ಟೀವಿ ಭಾಷಣ ಮಾಡುವ ಬಗ್ಗೆ 11.30ಕ್ಕೇ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಟೀವಿಯಲ್ಲಿ ಮೋದಿ ಏನು ಭಾಷಣ ಮಾಡಬಹುದು ಎಂಬ ಕುತೂಹಲ, ಆತಂಕ ದೇಶಾದ್ಯಂತ ಸೃಷ್ಟಿಯಾಗಿತ್ತು.

ಆದರೆ, ಮೋದಿ ಅವರು ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಮಾಡಿದ ಈ ಭಾಷಣವು ‘ಮತಗಳಿಕೆ ತಂತ್ರ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆದಿಯಾಗಿ ಅನೇಕರು ಆಕ್ಷೇಪಿಸಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆ ಎಂದು ಚುನಾವಣಾ ಆಯೋಗದಲ್ಲಿ ದೂರು ಕೂಡ ದಾಖಲಾಗಿದೆ. ಆದರೆ ಸಾಧನೆಗೆ ಕಾರಣೀಕರ್ತರಾದ ಡಿಆರ್‌ಡಿಒ ವಿಜ್ಞಾನಿಗಳನ್ನು ಪ್ರತಿಪಕ್ಷಗಳು ಅಭಿನಂದಿಸಿವೆ.

3 ನಿಮಿಷದಲ್ಲಿ ಧ್ವಂಸ:  ಡಿಆರ್‌ಡಿಒ (ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ) ಸಿದ್ಧಪಡಿಸಿದ್ದ ‘ಎಸ್ಯಾಟ್‌’ ಕ್ಷಿಪಣಿಯನ್ನು ಬೆಳಗ್ಗೆ 11.16ಕ್ಕೆ ಒಡಿಶಾದ ವೀಲರ್‌ ಐಲ್ಯಾಂಡ್‌ನಿಂದ ಹಾರಿಬಿಡಲಾಯಿತು. ಇದು ಮೂರೇ ನಿಮಿಷದಲ್ಲಿ ತನ್ನ ನಿಗದಿತ ಗುರಿಯನ್ನು ತಲುಪಿ ಭೂಮಿಯಿಂದ 300 ಕಿ.ಮೀ. ಎತ್ತರದಲ್ಲಿ ಅಂತರಿಕ್ಷದ ಭೂಕಕ್ಷೆಯಲ್ಲಿ ಸುತ್ತುತ್ತಿದ್ದ ಉಪಗ್ರಹವೊಂದನ್ನು ಹೊಡೆದುರುಳಿಸಿತು. ಆದರೆ ಇದು ಯಾವ ಉಪಗ್ರಹ ಎಂಬುದನ್ನು ಮೋದಿ ಅವರು ತಮ್ಮ ಭಾಷಣದಲ್ಲಿ ಹೇಳಲಿಲ್ಲ. ಆದಾಗ್ಯೂ ಜನವರಿ 24ರಂದು ಭಾರತ ಹಾರಿ ಬಿಟ್ಟ‘ಮ್ಯಾಕ್ರೋ ಉಪಗ್ರಹ’ವನ್ನು ಹೊಡೆದುರುಳಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಹೇಳಿವೆ.

ಈ ಮೂಲಕ ವೈರಿ ದೇಶಗಳೇನಾದರೂ ಉಪಗ್ರಹಗಳ ಮೂಲಕ ಭಾರತದ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದರೆ, ಅಂಥ ಉಪಗ್ರಹಗಳನ್ನು ನಿರ್ದಾಕ್ಷಿಣ್ಯವಾಗಿ ಹೊಡೆದುರುಳಿಸುವ ಸಾಮರ್ಥ್ಯ ತನಗಿದೆ ಎಂದು ಭಾರತವು ವಿಶ್ವಕ್ಕೆ ಸಾರಿ ಹೇಳಿತು.

ಈ ವಿಷಯವನ್ನು ತಮ್ಮ ಟೀವಿ ಭಾಷಣದಲ್ಲಿ ವಿವರಿಸಿ ಹೇಳಿದ ಪ್ರಧಾನಿ, ‘ಭಾರತ ಒಂದು ಅಭೂತಪೂರ್ವ ಸಾಧನೆ ಮಾಡಿದೆ. ಅಂತರಿಕ್ಷದಲ್ಲಿ ಸೂಪರ್‌ ಪವರ್‌ ಶಕ್ತಿಯಾಗಿ ಹೊರಹೊಮ್ಮಿದೆ. ಈವರೆಗೆ ಅಮೆರಿಕ, ರಷ್ಯಾ ಹಾಗೂ ಚೀನಾ ಈ ಸಾಧನೆ ಮಾಡಿದ್ದವು. ಭಾರತ ಇಂದು ಈ ಸಾಧನೆ ಮಾಡಿದ 4ನೇ ದೇಶವಾಗಿದೆ. ಪ್ರತಿ ಹಿಂದುಸ್ತಾನಿಗೆ ಇದಕ್ಕಿಂತ ದೊಡ್ಡ ಹೆಮ್ಮೆಯ ವಿಷಯ ಇನ್ನೊಂದಿಲ್ಲ’ ಎಂದರು.

‘ಆದರೆ ಕ್ಷಿಪಣಿ ಹೊಡೆದುರುಳಿಸಿರುವುದರಿಂದ ವಿಶ್ವ ಸಮುದಾಯ ಆತಂಕಗೊಳ್ಳಬೇಕಿಲ್ಲ. ಇದು ಯಾರ ವಿರುದ್ಧವೂ ಅಲ್ಲ. ಇದು ಅತ್ಯಂತ ವೇಗವಾಗಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವ ಭಾರತದ ರಕ್ಷಣಾತ್ಮಕ ಕ್ರಮವಾಗಿದೆ. ಭಾರತವು ಯಾವತ್ತೂ ಅಂತರಿಕ್ಷದಲ್ಲಿ ಶಸ್ತ್ರಾಸ್ತ್ರಗಳ ಬಳಕೆಗೆ ವಿರುದ್ಧವಾಗಿದೆ. ದೇಶದ ಈ ನೀತಿಯಲ್ಲಿ ಈಗಲೂ ಯಾವುದೇ ಬದಲಾವಣೆ ಇಲ್ಲ. ಭಾರತವು ಯಾವುದೇ ಅಂತಾರಾಷ್ಟ್ರೀಯ ಕಾನೂನು, ಒಪ್ಪಂದಗಳ ಉಲ್ಲಂಘನೆ ಮಾಡುವುದಿಲ್ಲ’ ಎಂದು ಮೋದಿ ಸ್ಪಷ್ಟಪಡಿಸಿದರು.

‘ನಾವು ಇಂದು ಅಧುನಿಕ ತಂತ್ರಜ್ಞಾನವನ್ನು130 ಕೋಟಿ ಜನರ ಸುರಕ್ಷೆ ಹಾಗೂ ಕಲ್ಯಾಣಕ್ಕೆ ಬಳಸಲು ಬಯಸುತ್ತೇವೆ’ ಎಂದೂ ಅವರು ನುಡಿದರು.

click me!