
ನವದೆಹಲಿ[ಅ.03]: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ 150ನೇ ಜಯಂತಿ ಪ್ರಯುಕ್ತ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಹಲವು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬೆನ್ನಲ್ಲೇ, ತಮ್ಮನ್ನು ತಾವು ಸರ್ವಶ್ರೇಷ್ಠರು ಎಂಬುದಾಗಿ ಭಾವಿಸಿಕೊಂಡು ಸುಳ್ಳಿನ ರಾಜಕೀಯದಲ್ಲಿ ಮಗ್ನರಾಗಿರುವ ಬಿಜೆಪಿಗೆ ಗಾಂಧೀಜಿ ಅವರ ತತ್ವ ಸಿದ್ಧಾಂತಗಳು ಹಾಗೂ ಬಲಿದಾನಗಳು ಎಂದಿಗೂ ಅರ್ಥವಾಗುವುದೇ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಮಹಾತ್ಮ ಗಾಂಧೀಜಿ ಅವರ ಸಮಾಧಿ ಇರುವ ರಾಜ್‌ಘಾಟ್‌ನಲ್ಲಿ ಬುಧವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸೋನಿಯಾ, ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕಂಡು ಮಹಾತ್ಮ ಗಾಂಧೀಜಿ ಅವರ ಆತ್ಮ ಯಾತನೆ ಅನುಭವಿಸುತ್ತಿದೆ ಎಂದು ಬಿಜೆಪಿ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮನ್ನು ತಾವು ಸರ್ವಶ್ರೇಷ್ಠರು ಎಂದು ಭಾವಿಸಿಕೊಂಡವರು, ಮಹಾತ್ಮ ಗಾಂಧೀಜಿ ಅವರ ಬಲಿದಾನಗಳನ್ನು ಅರ್ಥೈಸಿಕೊಳ್ಳುವುದು ಹೇಗೆ ಸಾಧ್ಯ? ಸುಳ್ಳಿನ ರಾಜಕೀಯದಲ್ಲಿ ತೊಡಗಿರುವವರಿಗೆ ಗಾಂಧೀಜಿಯ ಅಹಿಂಸಾ ಸಿದ್ಧಾಂತಗಳು ಅರಿವಿಗೆ ಬರುವುದಿಲ್ಲ. ಬೇರೆಯವರು ಏನು ಬೇಕಾದರೂ ಅಂದುಕೊಳ್ಳಲಿ, ಆದರೆ, ಕಾಂಗ್ರೆಸ್ ಮಾತ್ರವೇ ಗಾಂಧೀಜಿ ಅವರ ಹಾದಿಯಲ್ಲಿ ನಡೆಯುತ್ತಿದೆ. ನಾವು ಉದ್ಯೋಗ, ಶಿಕ್ಷಣ ಹಾಗೂ ರೈತರ ಪರ ನಿಲ್ಲುವ ಮೂಲಕ ಗಾಂಧಿ ಕನಸುಗಳನ್ನು ನನಸು ಮಾಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಗಾಂಧಿ ಕಾರಣದಿಂದಾಗಿಯೇ ಭಾರತ ಈ ಪ್ರಮಾಣದ ಅಭಿವೃದ್ಧಿ ಸಾಧಿಸಿದ್ದು, ಭಾರತ ಎಂದರೆ ಗಾಂಧಿಯೇ ಆಗಿದ್ದಾರೆ. ಆದರೆ, ಕೆಲವರು ಭಾರತವನ್ನು ಆರ್‌ಎಸ್‌ಎಸ್ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ವಿರುದ್ಧ ಸೋನಿಯಾ ಕಿಡಿಕಿಡಿಯಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.